ADVERTISEMENT

ವೇತನ, ಭತ್ಯೆ ವಾಪಸ್‌ ಪಡೆಯಲು ಒತ್ತಾಯ

ಸಂಸದೀಯ ಕಾರ್ಯದರ್ಶಿ ಹುದ್ದೆ ‘ಅಸಿಂಧು’

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 13:56 IST
Last Updated 12 ಫೆಬ್ರುವರಿ 2020, 13:56 IST
ಭೀಮಪ್ಪ ಗಡಾದ
ಭೀಮಪ್ಪ ಗಡಾದ   

ಬೆಳಗಾವಿ: ಸಂಸದೀಯ ಕಾರ್ಯದರ್ಶಿ ಹುದ್ದೆಯನ್ನು ಹೈಕೋರ್ಟ್‌ ಅಸಿಂಧುಗೊಳಿಸಿರುವ ಹಿನ್ನೆಲೆಯಲ್ಲಿ, ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುವ ವೇಳೆ ಪಡೆದ ವೇತನ ಹಾಗೂ ಭತ್ಯೆಯ ₹ 3.64 ಕೋಟಿ ಹಣವನ್ನು 12 ಜನ ಶಾಸಕರಿಂದ ವಾಪಸ್‌ ಪಡೆಯಬೇಕೆಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

‘ಕಳೆದ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ವಂಚಿತ ಶಾಸಕರನ್ನು ಸಮಾಧಾನ ಪಡಿಸಲು ಸಂಸದೀಯ ಕಾರ್ಯದರ್ಶಿ ಹುದ್ದೆಯನ್ನು ಸೃಷ್ಟಿಸಲಾಗಿತ್ತು, ಹೊರತು ಯಾವುದೇ ಅಭಿವೃದ್ಧಿಗಾಗಿ ಅಲ್ಲ. ಇವರಿಗೆ ಸಂಪುಟ ದರ್ಜೆಯ ಸ್ಥಾನಮಾನವನ್ನೂ ನೀಡಲಾಗಿತ್ತು. ವೇತನ, ಭತ್ಯೆಯ ಜೊತೆಗೆ ಸರ್ಕಾರದಿಂದ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಲಾಗಿತ್ತು’ ಎಂದು ಅವರು ಹೇಳಿದ್ದಾರೆ.

‘ವೇತನ ಹಾಗೂ ಭತ್ಯೆಗಳ ರೂಪದಲ್ಲಿ ಪ್ರತಿಯೊಬ್ಬ ಸಂಸದೀಯ ಕಾರ್ಯದರ್ಶಿಯು ಪ್ರತಿ ತಿಂಗಳು ₹ 2,27,576 ಪಡೆದುಕೊಂಡಿದ್ದಾರೆ. 12 ಜನ ಸಂಸದೀಯ ಕಾರ್ಯದರ್ಶಿಗಳು ಪಡೆದ ಮೊತ್ತ ಒಟ್ಟು ₹ 3,64,72,716 ಹಣ ಪಡೆದಿದ್ದಾರೆ’ ಎಂದು ಅವರು ವಿವರಿಸಿದ್ದಾರೆ.

ADVERTISEMENT

‘ಜನರಿಗಾಗಲೀ, ರಾಜಕ್ಕಾಗಲೀ ಯಾವುದೇ ರೀತಿಯಲ್ಲಿ ಒಳ್ಳೆಯದನ್ನು ಮಾಡದ ಈ ಹುದ್ದೆಗಳ ಸೃಷ್ಟಿಯಿಂದಾಗಿ ರಾಜ್ಯದ ಬೊಕ್ಕಸಕ್ಕೆ ಆರ್ಥಿಕ ನಷ್ಟ ಉಂಟಾಗಿದೆ. ಈ ನಷ್ಟವನ್ನು ಸರಿದೂಗಿಸುವ ಕೆಲಸ ಮಾಡಬೇಕಾಗಿದೆ. ತಕ್ಷಣ ವಾಪಸ್‌ ಪಡೆಯಲು ಮುಂದಾಗಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.