ಸವದತ್ತಿ: ಗ್ರಾಮಸ್ಥರ ಜೀವನಾಡಿಯಾಗಿದ್ದ ಚಿಕ್ಕುಂಬಿ ಕೆರೆ ಇದೀಗ ಬಹಿರ್ದೆಸೆ ತಾಣವಾಗಿ ಮಾರ್ಪಟ್ಟಿದೆ. ಗ್ರಾಮ ಪ್ರವೇಶಿಸುತ್ತಿದ್ದಂತೆ ದುರ್ವಾಸನೆಯೇ ಸ್ವಾಗತಿಸುತ್ತದೆ.
ಕೆರೆಯ ಸುತ್ತಲೂ ಮುತ್ತಿಕೊಂಡಿರುವ ಕಸರದ ರಾಶಿ, ತಿಪ್ಪೆ ಗುಂಡಿಗಳು ರಸ್ತೆವರೆಗೂ ಹಬ್ಬಿವೆ. ಮಳೆ ಸುರಿದರೆ ಸಾಕು ಗ್ರಾಮದ ಕೆಲ ಭಾಗದಲ್ಲಿನ ತ್ಯಾಜ್ಯ ನೀರು ಇದೇ ಕೆರೆಯನ್ನು ಸೇರುತ್ತದೆ. ಸಧ್ಯ ಪಾದ ಮುಳುಗುವ ಪ್ರಮಾಣದಲ್ಲಿರುವ ನೀರೂ ಸಹಿತ ದನಕರಗಳಿಗೂ ಕುಡಿಯಲು ಯೋಗ್ಯವಿಲ್ಲದಾಗಿದೆ.
9 ಎಕರೆಗಿಂತ ಹೆಚ್ಚು ವಿಸ್ತೀರ್ಣವುಳ್ಳ ಈ ಕೆರೆ ಸುಮಾರು 25-30 ವರ್ಷಗಳ ಹಿಂದೆ ಕುಡಿಯುವ ನೀರಿಗಾಗಿಯೇ ಆಸರೆಯಾಗಿತ್ತು. ಬೋರವೆಲ್ ಮತ್ತು ಕಾಲುವೆಗಳಿಲ್ಲದ ಸಮಯದಲ್ಲಿ ಗ್ರಾಮಸ್ಥರಿಗೆ ಹಾಗೂ ಜಾನುವಾರುಗಳಿಗೆ ಇದೇ ಕೆರೆ ಆಸರೆಯಾಗಿತ್ತು.
ಬಹುಗ್ರಾಮ ಯೋಜನೆ, ಬೋರವೆಲ್‌ಗಳು ಬಳಕೆಗೆ ಬಂದ ನಂತರ ಜನರು ಈ ಕೆರೆಯ ನೀರನ್ನು ಬಳಸದೇ ಕೇವಲ ಜಾನುವಾರುಗಳಿಗಷ್ಟೇ ಮೀಸಲಿರುಸುವಂತಾಯಿತು. ಇದೀಗ ಜಾನುವಾರುಗಳಿಗೂ ಸಹ ಉಪಯೋಗಿಸಲಾರದ ದುಸ್ಥಿತಿ ನಿರ್ಮಾಣವಾಗಿದೆ.
2023-24 ರ ನರೇಗಾದಲ್ಲಿ ಅಮೃತ ಸರೋವರ ಯೋನೆಯಡಿ ಕೆರೆ ಅಭಿವೃದ್ಧಿ ಆರಂಭಿಸಲಾಗಿತ್ತು. ಇದರಲ್ಲಿ ತಂತಿ ಬೇಲಿ, 2 ಗೇಟ್, ಫೇವರ್ಸ, ಹೂಳೆತ್ತುವ ಕಾಮಗಾರಿ ಕುರಿತು ₹10 ಲಕ್ಷ ಅನುದಾನ ಇರಿಸಿ ಇದರಲ್ಲಿ ಕೇವಲ ₹ 64 ಸಾವಿರ ವ್ಯಯಿಸಿ ಗೇಟ್ ಮತ್ತು ಗಿಡಗಂಟಿ ತೆಗೆಸಲಾಗಿದೆ. ಇವೆಲ್ಲವು ಸರಿಯಾದ ಸಮಯಕ್ಕೆ ಸಮರ್ಪಕವಾಗಿ ಜರುಗದೇ ವಿಳಂಬವಾಗಿ ಜನೋಪಯೋಗಕ್ಕೆ ಬಾರದಾಗಿದೆ. ದನಕರುಗಳಿಗೆ ಕುಡಿಯುವ ನೀರಿಗಾಗಿ ಆಸರೆಯಾದ ಈ ಕೆರೆ ಇದೀಗ ಬರೀ ತ್ಯಾಜ್ಯದಿಂದ ಕೂಡಿದೆ.
ತಾಲ್ಲೂಕಿನ ಬಹುತೇಕ ಕೆರೆಗಳು ಬೇಸಿಗೆ ಆರಭಕ್ಕೂ ಮುನ್ನವೇ ಬತ್ತಿವೆ. ಹಲವು ಕಸದ ರಾಶಿ ತುಂಬಿ ಜನೋಪಯೋಗಕ್ಕೆ ಬಾರದಂತಾಗಿವೆ. ಹಂಚಿನಾಳ ದೊಡ್ಡಕೆರೆ, ಧಡೇರಕೊಪ್ಪ ಕೆರೆ ಭರ್ತಿ ಇದ್ದು ದನಕರುಗಳಿಗೆ ಅನುಕೂಲವಾಗಿವೆ.
ಅಧಿಕಾರಿಗಳು ಚಿಕ್ಕುಂಬಿ ಕೆರೆ ಅಭಿವೃದ್ಧಿ ಮಾಡುತ್ತಿಲ್ಲ. ಬರ ಹಾಗೂ ಬೇಸಿಗೆಗಾಗಿ ಕೆರೆಗಳ ಭರ್ತಿ ಕಾರ್ಯ ಆರಂಭಿಸದಿರುವುದು ಅಧಿಕಾರಿಗಳು ಬೇಜವ್ದಾರಿತನ ತೋರುತ್ತಿದ್ದಾರೆಂದು ಜನತೆ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಚಿಕ್ಕುಂಬಿ ಕೆರೆಯ ನೀರಿನ ಸಾಮರ್ಥ್ಯ, ದುರಸ್ತಿ ಕಾಮಗಾರಿ ವಿವರ ಹಾಗೂ ಹೂಳು ತೆಗೆಸಿದ ಕುರಿತು ಗ್ರಾಮ ಪಂಚಾಯತಿಯಲ್ಲಿ ಮಾಹಿತಿಯೇ ಇಲ್ಲದಾಗಿದೆ.
ತ್ಯಾಜ್ಯ ನೀರು ಕೆರೆ ಸೇರದ ಹಾಗೆ ನಡೆಸುವ ಲೋಕೋಪಯೋಗಿ ಇಲಾಖೆ ಕಾಮಗಾರಿ ಇನ್ನೂ ಬಾಕಿ ಇದೆ. ರಸ್ತೆ ಬದಿ ಚೆಲ್ಲಿದ ಕಸವನ್ನು ಸ್ವಚ್ಛಗೊಳಿಸಲಾಗುವುದು. ಕಸ ಹಾಕಿದ ಕೆಲವರಿಗೆ ಈಗಾಗಲೇ ನೋಟಿಸ್ ಕೊಡಲಾಗಿದೆ.–ಆನಂದ ಸುತಗಟ್ಟಿ, ಪಿಡಿಒ ಚುಳಕಿ.
ಕೆರೆ ಅಭಿವೃದ್ಧಿಗೆ ನಡೆದ ಕಾಮಗಾರಿ ಪೂರ್ಣಗೊಂಡಿಲ್ಲ. ಗ್ರಾಮ ಪಂಚಾಯಿತಿಯಿಂದ ನಿರ್ವಹಣೆ ಇಲ್ಲದೇ ಹಾಳಾಗಿರುವ ಕೆರೆಯನ್ನು ಅಭಿವೃದ್ಧಿ ಮಾಡಿ ನೀರು ಸಂಗ್ರಹವಾದಲ್ಲಿ ಜನ ಜಾನುವಾರುಗೆ ಅನುಕೂಲವಾಗಲಿದೆ.–ಪರಮೇಶ ಬೆಟಸೂರ, ಗ್ರಾಮಸ್ಥ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.