ಬೆಳಗಾವಿ: ‘ಪಂಚಮಸಾಲಿ ಸಮುದಾಯದ ಶಾಸಕರು ಈಚೆಗೆ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಸಮುದಾಯಕ್ಕೆ ಪ್ರವರ್ಗ ‘2ಎ’ ಮೀಸಲಾತಿ ದೊರಕಿಸುವ ಬಗ್ಗೆ ಧ್ವನಿ ಎತ್ತದಿರುವುದು ನನಗೆ ಬೇಸರ ಮೂಡಿಸಿದೆ’ ಎಂದು ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವಿದ್ದಾಗ, ಸದನದ ಬಾವಿಗೆ ಇಳಿದು ಹೋರಾಟ ಮಾಡಿದ್ದೀರಿ. ಆದರೆ, ಈಗ ಮಾತನಾಡುತ್ತಿಲ್ಲ. ನಿಮಗೆ ಮಾತನಾಡುವ ಹಕ್ಕಿದೆ. ಏಕೆ ಸುಮ್ಮನಿದ್ದೀರಿ?’ ಎಂದು ಪ್ರಶ್ನಿಸಿದರು.
‘ಗುರುವಾಗಿದ್ದರೂ ನಾನು ಮಠ ಬಿಟ್ಟು ನಿಮ್ಮ ಮನೆಬಾಗಿಲಿಗೆ ಬಂದೆ. ಪತ್ರ ಚಳವಳಿ ಮೂಲಕ ಮನೆಗೆ ಹೋಗಿ ಎಲ್ಲ ಶಾಸಕರನ್ನು ಕೋರಿದೆ. ಮೀಸಲಾತಿ ವಿಷಯದ ಬಗ್ಗೆ ಚರ್ಚೆ ಆಗಬೇಕೆಂದು ಶಾಸಕರು ಸ್ಪೀಕರ್‌ಗೆ ಪತ್ರ ಬರೆದರು. ಆದರೆ, ಸ್ಪೀಕರ್ ಬಳಿ ಹೋಗಿ ಅಜೆಂಡಾದಲ್ಲಿ ಈ ವಿಷಯ ಸೇರಿಸಲು ಏಕೆ ಪ್ರಯತ್ನಿಸಲಿಲ್ಲ? ಅವಕಾಶ ಕೊಡದಿದ್ದರೆ ನೀವು ಪ್ರತಿಭಟಿಸಬೇಕಿತ್ತು. ಸಭಾತ್ಯಾಗ ಮಾಡಬೇಕಾಗಿತ್ತು. ಸಿ.ಎಂ ಮನೆಗೆ ಹೋಗಿ ಒತ್ತಡ ತರಬೇಕಿತ್ತು’ ಎಂದರು.
‘ಮೀಸಲಾತಿ ವಿಷಯದಲ್ಲಿ ಸರ್ಕಾರದ ವಿಳಂಬ ಧೋರಣೆ ಖಂಡಿಸಿ, ಬೆಳಗಾವಿಯಲ್ಲಿ ಸೆ.15ರಂದು ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಪಂಚಮಸಾಲಿ ವಕೀಲರ ಮಹಾ ಪರಿಷತ್ ಸಭೆ ನಡೆಸಲು ತೀರ್ಮಾನಿಸಲಾಗಿದೆ. ರಾಜ್ಯ ವಕೀಲರ ಸಮಾವೇಶ ಆಯೋಜನೆ, ಹೋರಾಟದ ರೂಪುರೇಷೆ ಕುರಿತಾಗಿ ತೀರ್ಮಾನಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.