ರಾಮದುರ್ಗ: ತಾಲ್ಲೂಕಿನ ಕಡೇ ಗ್ರಾಮ ನಂದಿಹಾಳಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯೇ ಹದಗೆಟ್ಟಿದೆ. ಇಲ್ಲಿನ ಜನರು ಪಕ್ಕದ ಕಲಾದಗಿ, ಕಾಡರಕೊಪ್ಪ, ಲೋಕಾಪುರಕ್ಕೆ ತೆರಳಲು ನಿತ್ಯ ಯಾತನೆ ಅನುಭವಿಸುವಂತಾಗಿದೆ.
ನಂದಿಹಾಳದಿಂದ ಅಕ್ಕಪಕ್ಕದ ಗ್ರಾಮಗಳು ಮತ್ತು ಹೊಲಗಳಿಗೆ ತೆರಳಲು ಇರುವುದು ಇದೊಂದೇ ರಸ್ತೆ. ಆದರೆ, ಜಿಟಿಜಿಟಿ ಮಳೆಯಾದರೂ ಅದು ಕೆಸರುಮಯವಾಗಿ ಮಾರ್ಪಡುತ್ತದೆ. ಅಪಾರ ಪ್ರಮಾಣದಲ್ಲಿ ಮಳೆನೀರು ರಸ್ತೆ ಮೇಲೆಯೇ ಸಂಗ್ರಹವಾಗುತ್ತದೆ. ಇದರಿಂದ ವಾಹನ ಸವಾರರು ಮತ್ತು ಪಾದಚಾರಿಗಳು ಹೈರಾಣಾಗಿದ್ದಾರೆ.
ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡದ ರಸ್ತೆ ನಿರ್ಮಾಣಕ್ಕೆ ಜಿಲ್ಲಾ ಪಂಚಾಯ್ತಿ ಅಥವಾ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ. ಇದರಿಂದ ಗ್ರಾಮಸ್ಥರು ಗೋಳಾಡುತ್ತಿದ್ದಾರೆ.
‘ಹೊಲಕ್ಕೆ ಕಾಲ್ನಡಿಗೆ ಮೂಲಕ ಹೋಗುವ ಮಹಿಳೆಯರು, ವೃದ್ಧರು ಈ ರಸ್ತೆಯಲ್ಲಿ ಸರ್ಕಸ್ ಮಾಡಿಕೊಂಡೇ ಸಾಗಬೇಕು. ಕೆಲವರು ಕಾಲು ಜಾರಿಬಿದ್ದು ಪೆಟ್ಟು ತಿಂದಿರುವ ಉದಾಹರಣೆಗಳು ಸಾಕಷ್ಟಿವೆ. ಈ ರಸ್ತೆಯಲ್ಲಿ ಡಾಂಬರ್ ಹಾಕಿದರೂ ಪ್ರಯೋಜನ ಇಲ್ಲ. ಇಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸಬೇಕಾಗಿದೆ’ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮ ಪ್ರವೇಶಿಸಲು ಮೂರು ಕಡೆಗಳಿಂದ ರಾಜ್ಯ ಹೆದ್ದಾರಿಗಳಿವೆ. ಅವುಗಳನ್ನು ತಲುಪಲು ಇರುವ ರಸ್ತೆಗಳಲ್ಲಿ ದೊಡ್ಡ ಹೊಂಡಗಳು ಬಿದ್ದಿದ್ದು, ಸಂಚಾರಕ್ಕೆ ಸವಾರರಿಗೆ ತೊಂದರೆಯಾಗುತ್ತಿದೆ. ರಸ್ತೆ ಹದಗೆಟ್ಟ ಕಾರಣ ಬಾದಾಮಿ ಕಡೆಯ ಬಸ್‌ಗಳು ಇಲ್ಲಿಗೆ ಬರುತ್ತಿಲ್ಲ. ಬೆಳಿಗ್ಗೆ ಮತ್ತು ಸಂಜೆ ರಾಮದುರ್ಗದಿಂದ ಎರಡು ಬಸ್‌ಗಳು ಮಾತ್ರ ಕಾರ್ಯಾಚರಣೆ ನಡೆಸುತ್ತವೆ.
‘ಸುಮಾರು 30 ವರ್ಷಗಳ ಮುಂಚೆ ನಿರ್ಮಿಸಿದ್ದ ಈ ರಸ್ತೆ ಹಾಳಾಗಿದೆ. ಮಗ್ಗುಲಿಗೆ ಬೆಳೆದ ಬಳ್ಳಾರಿ ಜಾಲಿಕಂಟಿಗಳು ರಸ್ತೆಯನ್ನು ಆವರಿಸಿಕೊಂಡಿವೆ. ಇದರಿಂದ ಚಂಬಲ್ ಕಣಿವೆಯಲ್ಲಿ ಸಂಚರಿಸಿದ ಅನುಭವ ಆಗುತ್ತಿದೆ. ಕಂಟಿಗಳ ತೆರವಿಗೂ ಗ್ರಾಮ ಪಂಚಾಯ್ತಿ ಮುಂದಾಗುತ್ತಿಲ್ಲ’ ಎನ್ನುತ್ತಾರೆ ಸವಾರ ಸದಾಶಿವ ಮಾದರ.
ಈ ಹಿಂದೆಯೂ ಶಾಸಕರಾಗಿದ್ದ ಅಶೋಕ ಪಟ್ಟಣ ರಸ್ತೆ ನಿರ್ಮಾಣಕ್ಕೆ ₹1.70 ಕೋಟಿ ಅನುದಾನ ಮಂಜೂರು ಮಾಡಿಸಿದ್ದರು. ನಂತರ ಆಯ್ಕೆಯಾದ ಶಾಸಕರು ಆಸಕ್ತಿ ತೋರದ್ದರಿಂದ ಕೆಲಸ ನಿಂತು ಹೋಗಿದ್ದು, ಅನುದಾನವೂ ವಾಪಸ್ ಹೋಗಿದೆ. ಈಗ ಮತ್ತೆ ಆಯ್ಕೆಗೊಂಡಿರುವ ಶಾಸಕ ಪಟ್ಟಣ ಅವರಿಗೆ ಬೇಡಿಕೆ ಇಟ್ಟು ಒಂದು ವರ್ಷ ಗತಿಸಿದರೂ ಪ್ರಯೋಜನವಾಗಿಲ್ಲ’ ಎಂಬುದು ಗ್ರಾಮಸ್ಥರ ದೂರು.
ಹೂಳು ತೆಗೆಯಿಸಿ:
‘ಕೃಷಿಭೂಮಿಗೆ ನೀರಾವರಿ ಸೌಕರ್ಯ ಕಲ್ಪಿಸಲೆಂದು ನಂದಿಹಾಳ ಸಮೀಪದಲ್ಲಿ ನಿರ್ಮಿಸಿದ್ದ ಕೆರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಆದರೆ, ಕಾಲುವೆಗಳಲ್ಲಿ ಹೂಳು ತುಂಬಿಕೊಂಡಿದ್ದರಿಂದ ನೀರು ಹರಿಯುತ್ತಿಲ್ಲ. ನಮಗೆ ಕೆರೆಯಿಂದ ಉಪಯೋಗ ಆಗುತ್ತಿಲ್ಲ. ಹೂಳು ತೆಗೆಯಿಸಿ ನಮಗೆ ಅನುಕೂಲ ಕಲ್ಪಿಸಬೇಕು’ ಎನ್ನುವ ಒತ್ತಾಯ ರೈತರದ್ದು.
ನಂದಿಹಾಳ ಗ್ರಾಮದ ಹೊಲಗಳಿಗೆ ಹೋಗುವ ಮುಖ್ಯರಸ್ತೆ ಹದಗೆಟ್ಟು ಬಹಳ ದಿನವಾಗಿದೆ. ಶೀಘ್ರವೇ ರಸ್ತೆ ಅಭಿವೃದ್ಧಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕಿದೆ.ರಾಮಣ್ಣ ಬಿಡಕಿ, ಮಾಜಿ ಸದಸ್ಯ ತಾಲ್ಲೂಕು ಪಂಚಾಯ್ತಿ ರಾಮದುರ್ಗ
‘ಪತ್ರ ಬರೆದಿದ್ದೇವೆ’
‘ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಈ ರಸ್ತೆ ಸುಧಾರಣೆ ಮಾಡುವಂತೆ ಸಂಬಂಧಿತರಿಗೆ ಪತ್ರ ಬರೆಯಲಾಗಿದೆ. ರಸ್ತೆ ಆಕ್ರಮಿಸಿಕೊಂಡಿರುವ ಗಿಡಗಂಟಿಯನ್ನು ನರೇಗಾ ಯೋಜನೆಯಡಿ ಕಡಿದು ತೆರವುಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಜನರಿಗೆ ಅನುಕೂಲ ಕಲ್ಪಿಸಲಾಗುವುದು’ ಎಂದು ಪಿಡಿಒ ವಿಜಯಕುಮಾರ ವನಕ್ಯಾಳ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.