ಸವದತ್ತಿ: ನಿರಂತರ ನೀರು (24X7) ಪೂರೈಕೆಗಾಗಿ ಪಟ್ಟಣದ ಬಹುಪಾಲು ರಸ್ತೆಗಳನ್ನು ಅಗೆದು ಹಾಕಲಾಗಿದೆ. ಕಾಮಗಾರಿ ಮುಗಿದ ಮೇಲೆ ಮತ್ತೆ ರಸ್ತೆ ದುರಸ್ತಿ ಮಾಡಿಲ್ಲ. ಇದೇ ಪರಿಸ್ಥಿತಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲೂ ತಲೆದೋರಿದೆ. ಕೊರಕಲು ರಸ್ತೆಗಳಿಂದ ಜನ ಬೇಸತ್ತುಹೋಗಿದ್ದಾರೆ. ಅಧಿಕಾರಿಗಳು ಮಾತ್ರ ಒಬ್ಬರ ಮೇಲೊಬ್ಬರ ನೆಪ ಹೇಳಿಕೊಂಡು ದಿನ ಕಳೆಯುತ್ತಿದ್ದಾರೆ.
ಸುಪ್ರಸಿದ್ಧ ಪ್ರೇಕ್ಷಣೀಯ ಸ್ಥಾನ ಯಲ್ಲಮ್ಮನ ಗುಡ್ಡವನ್ನು ಸುತ್ತವರಿದು ಸವದತ್ತಿ ಪಟ್ಟಣ ಹಾಗೂ ಗ್ರಾಮಗಳಿವೆ. ವಿಶಾಲವಾಗಿ ಹರಿದ ಮಲಪ್ರಭೆಯಿಂದ ಸಾಕಷ್ಟು ನೀರಿನ ಲಭ್ಯತೆ ಇದೆ. ನವಿಲುತೀರ್ಥ ಜಲಾಶಯ ಈ ಭಾಗದ ಜೀವನಾಡಿಯಾಗಿದೆ. ಈ ಸಮೃದ್ಧ ಜಲ ಬಳಸಿಕೊಂಡು ದಿನವಿಡೀ ನೀರು ಪೂರೈಕೆ ಮಾಡುವ ಯೋಜನೆ ರೂಪಿಸಬೇಕು ಎಂದು ದಶಕಗಳಿಂದಲೂ ಜನ ಹೋರಾಟ ಮಾಡಿದ್ದರು. ಮಗ್ಗುಲಲ್ಲೇ ನದಿ ಹರಿದರೂ, ಅಣೆಕಟ್ಟೆ ಇದ್ದರೂ ಜನರಿಗೆ ಕುಡಿಯುವ ನೀರಿನ ಬರ ತಪ್ಪಿರಲಿಲ್ಲ.
ಅತಿ ವಿಳಂಬವಾಗಿಯಾದರೂ ನಿರಂತರ ನೀರು ಯೋಜನೆ ಅನುಷ್ಠಾನ ಮಾಡಲಾಗಿದೆ. ಈಗಲಾದರೂ ಸಮಸ್ಯೆ ನೀಗಿತಲ್ಲ ಎಂದು ಜನ ನಿಟ್ಟಿಸಿರು ಬಿಟ್ಟಿದ್ದರು. ಆದರೆ, ಈಗ ಒಂದು ಪೀಡೆ ಹೋಗಿ ಮತ್ತೊಂದು ಪೀಡೆ ಬಂದಂತಾಗಿದೆ. ನೀರಿನ ಪೈಪ್‌ಲೈನ್ ಕಾಮಗಾರಿಗೆ, ನಳ ಜೋಡಣೆಗೆ ಎಲ್ಲೆಂದರಲ್ಲಿ ರಸ್ತೆಗಳನ್ನು ಅಗೆಯಲಾಗಿದೆ. ಡಾಂಬರು ರಸ್ತೆ, ಸಿಮೆಂಟ್ ರಸ್ತೆಗಳನ್ನೂ ಕೀಳಲಾಗಿದೆ. ಕಾಮಗಾರಿ ಮುಗಿದ ಬಳಿಕ ರಸ್ತೆ ಸರಿಪಡಿಸುವ ಗೋಜಿಗೆ ಹೋಗಿಲ್ಲ.
ಇದರಿಂದ ಬೈಕ್ ಸವಾರರು, ಪಾದಚಾರಿಗಳು ಪದೇಪದೇ ಬಿದ್ದು ಗಾಯ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಹಿರಿಯರಂತೂ ಇಲ್ಲಿ ನಡೆದಾಡುವುದೇ ಕಷ್ಟವಾಗಿದೆ. ಮಳೆ ಬಂದರೆ ಸಾಕು ಇಡೀ ರಸ್ತೆ ಕೆಸರು ಗುಂಡಿಯಾಗುತ್ತದೆ.
ಕರ್ನಾಟಕ ನಗರ ನೀರು ಸರಬಾರಾಜು ಮತ್ತು ಒಳಚರಂಡಿ ಮಂಡಳಿ, ಸವದತ್ತಿ ಯಲ್ಲಮ್ಮ ಪುರಸಭೆ ಸಹಯೋಗದಲ್ಲಿ ಈ ಕಾಮಗಾರಿಗೆ ಬರೋಬ್ಬರಿ ₹100 ಕೋಟಿ ಸುರಿಯಲಾಗಿದೆ. ಜನರಿಗೆ ನೀರೇನೋ ಸಿಕ್ಕಿತು. ಆದರೆ, ಯೋಜನೆ ರೂಪುರೇಶೆಯಲ್ಲೇ ಇದ್ದ ರಸ್ತೆ ದುರಸ್ತಿ ಕೈ ಬಿಡಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರರ ಬೇಜವಾಬ್ದಾರಿತನವೇ ಇದಕ್ಕೆ ಕಾರಣ ಎಂದು ಪಟ್ಟಣದ ವಾಸಿಗಳು ದಿನವೂ ಹಿಡಿಶಾಪ ಹಾಕುತ್ತಿದ್ದಾರೆ.
ಬೈಕ್ ಸವಾರರು ಬಿದ್ದು ಕಾಲು ಮುರಿದುಕೊಂಡಿದ್ದಾರೆ. ಶಾಲೆಗೆ ಹೋಗುವ ಪುಟಾಣಿ ಮಕ್ಕಳು ಸೈಕಲ್ ಮೇಲಿದ್ದ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಹೆಣ್ಣುಮಕ್ಕಳು ಸ್ಕೂಟರ್‌ಗಳನ್ನು ಓಡಿಸುವ ಬದಲು ತಳ್ಳಿಕೊಂಡು ಮುಖ್ಯರಸ್ತೆಗೆ ತಲುಪಬೇಕಾದ ಸ್ಥಿತಿ ಇದೆ.
ಸ್ವಚ್ಛತಾ ಕರ್ಮಿಗಳಂತೂ ಈ ರಸ್ತೆಗಳಲ್ಲಿ ಕಸ ಸಂಗ್ರಹ ಮಾಡುವುದು ದುಸ್ತರವಾಗಿದೆ. ಹಲವರು ಎಡವಿ ಬೆರಳು ಮುರಿದುಕೊಂಡಿದ್ದಾರೆ.
ಅಗೆದು ಹಾಗೇ ಬಿಟ್ಟ ಮಣ್ಣು ಮಳೆ ನೀರಿನ ಮೂಲಕ ಚರಂಡಿಗಳನ್ನು ಸೇರಿಕೊಂಡಿದೆ. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದೇ ರಸ್ತೆಗಳು ಕೆರೆಯಾಗಿ ಮಾರ್ಪಡುತ್ತಿವೆ.
ಕುಡಿಯುವ ನೀರಿನ ಅವಶ್ಯಕತೆಯನ್ನು ಅರಿತ ಪಟ್ಟಣದ ಜನ ಯಾವುದೇ ತಕರಾರು ಇಲ್ಲದೇ ಮನೆ ಮುಂದಿನ ರಸ್ತೆ ಅಗೆಯಲು ಬಿಟ್ಟಿದ್ದರು. ಆದರೆ, ವರ್ಷಗಳೇ ಕಳೆದರೂ ಮತ್ತೆ ರಸ್ತೆ ಸುಧಾರಣೆ ಮಾಡಿಲ್ಲ. ಯೋಜನೆಯ ಎಂಜಿನಿಯರ್ ಪ್ರವೀಣ ಎನ್ನುವವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿಲ್ಲ. ಜನರ ಕೂಗು ಆಲಿಸಿಲ್ಲ. ಸಮಸ್ಯೆ ಬಗ್ಗೆ ಪ್ರತಿಕ್ರಿಯೆ ಕೇಳು ಕರೆ ಮಾಡಿದರೂ ಅವರು ಸ್ಪಂದಿಸುತ್ತಿಲ್ಲ ಎಂಬುದು ಜನರ ದೂರು.
ಕುಡಿಯುವ ನೀರಿನ ಕಾಮಗಾರಿ ಪೂರ್ಣಗೊಂಡು ಹಸ್ತಾಂತರಿಸಿದ ನಂತರ ಪುರಸಭೆಯಿಂದ ನಿರ್ವಹಿಸಲಾಗುವುದು. ಆದಾಗ್ಯೂ ಜನರ ಸಮಸ್ಯೆಗೆ ರಸ್ತೆ ಸರಿಪಡಿಸಲು ಸೂಚಿಸಲಾಗಿದೆ.
–ಸಂಗನಬಸಯ್ಯ ಮುಖ್ಯಾಧಿಕಾರಿ ಯಲ್ಲಮ್ಮ ಪುರಸಭೆ
ಅಗೆದ ರಸ್ತೆಗಳಿಂದ ಸಂಭವಿಸುತ್ತಿರುವ ಅವಘಡಗಳಿಗೆ ಗುತ್ತಿಗೆದಾರರೇ ಜವಾಬ್ದಾರ. ಕೂಡಲೇ ಕಾಮಗಾರಿಗೆ ವೇಗ ಹೆಚ್ಚಿಸಿ ಸುಗಮ ಸಂಚಾರ ಕಲ್ಪಿಸಿ. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ.
–ರಾಘವೇಂದ್ರ ಪೂಜೇರ ವಾಲ್ಮೀಕಿ ಸಮಾಜದ ಮುಖಂಡ
ನೀರಿನ ಕಾಮಗಾರಿ ಮುಗಿದ ಮೇಲೆ ಉಂಟಾಗುವ ಎಲ್ಲ ಸಮಸ್ಯೆಗಳನ್ನು ನಿವಾರಿಸುವುದು ಗುತ್ತಿಗೆದಾರರ ಜವಾಬ್ದಾರಿ. ಯೋಜನೆಯ ನೀಲನಕ್ಷೆಯಲ್ಲೇ ಇದು ಇರುತ್ತದೆ. ಈ ರಸ್ತೆ ದುಃಸ್ಥಿತಿ ತೋರಿಸಿ ಸರಿಪಡಿಸಲು ತಿಳಿಸಲಾಗಿದೆ. ಅಧಿಕಾರಿಗಳಿಂದ ಹೇಳಿಸಿದರೂ ಕಾಮಗಾರಿ ನಡೆಸುತ್ತಿಲ್ಲ.
- ಲಕ್ಷ್ಮಣರಾವ್ ಕುಲಕರ್ಣಿ ಪಟ್ಟಣ ನಿವಾಸಿ
ನೀರಿನ ಕಾಮಗಾರಿ ಕೂಡ ಸಮರ್ಪಕವಾಗಿ ಆಗಿಲ್ಲ. ಅಲ್ಲಲ್ಲಿ ಪೈಪುಗಳು ಮೇಲೆದ್ದು ಬಂದಿವೆ. ಇದನ್ನು ಕೂಡಲೇ ಸರಿಪಡಿಸಬೇಕು. ಅದರ ಜತೆಗೇ ನಮ್ಮ ರಸ್ತೆಯನ್ನೂ ದುರಸ್ತಿ ಮಾಡಿ ಮೊದಲಿದ್ದ ಹಾಗೆ ಮಾಡಬೇಕು.
–ಮಹೇಶ್ ಕಬ್ಬೂರ ಪಟ್ಟಣ ನಿವಾಸಿ
* ಕಾಫರ್ ಡ್ಯಾಮ್ 4.5 ಮೀಟರ್ ವ್ಯಾಸದ ಇಂಟೆಕ್ವೆಲ್ ನಿರ್ಮಾಣ
* ಪೂಟ್ ಬ್ರಿಜ್‌ಗೆ ರಸ್ತೆ ಹಾಗೂ ಬೀದಿ ದೀಪಗಳ ನಿರ್ಮಾಣ
* 150 ಎಚ್‍ಪಿ ಪಂಪ್‌ಸೆಟ್ ಅಳವಡಿಕೆ
* 15 ಲಕ್ಷ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಜಲಸಂಗ್ರಹಾಗಾರ
* 6 ಲಕ್ಷ ಲೀಟರ್ ಸಾಮರ್ಥ್ಯದ ಸಂಪ್ ನಿರ್ಮಾಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.