ಬೆಳಗಾವಿ: ನಗರ ಪೊಲೀಸ್ ಕಮಿಷನರೇಟ್ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಸಮಾರೋಪ ಅಂಗವಾಗಿ ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಶಾಲಾ ಮಕ್ಕಳಿಗೆ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಸೋಮವಾರ ನಡೆಸಲಾಯಿತು.
ವಿವಿಧ ಶಾಲೆಯ ಚಿಣ್ಣರು, ರಸ್ತೆ ಸುರಕ್ಷತೆ ಕುರಿತ ತಮ್ಮ ಕಲ್ಪನೆಗೆ ಬಣ್ಣ ಹಚ್ಚಿ ಗಮನಸೆಳೆದರು. ತಮ್ಮ ಚಿತ್ರಗಳೊಂದಿಗೆ ಸಂದೇಶಗಳನ್ನೂ ಬರೆದಿದ್ದು ವಿಶೇಷವಾಗಿತ್ತು. ಸಂಚಾರ ನಿಯಮಗಳನ್ನು ಪಾಲಿಸುವುದರಿಂದ ಅಪಘಾತಗಳಿಂದ ದೂರವಿರಬಹುದು ಎಂಬ ಜಾಗೃತಿ ಮೂಡಿಸಲು ಯತ್ನಿಸಿದರು. ದ್ವಿಚಕ್ರವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸಬೇಕು, ಚಾಲನೆ ಮಾಡುವಾಗ ನಿದ್ರಿಸಬಾರದು, ದ್ವಿಚಕ್ರ ವಾಹನದಲ್ಲಿ ಮೂವರು ಹೋಗಬಾರದು ಎಂಬಿತ್ಯಾದಿ ವಿಷಯ ಬಿಂಬಿಸುವ ಚಿತ್ರಗಳನ್ನು ಬಿಡಿಸಿದ್ದರು.
ಸ್ಪರ್ಧೆಯನ್ನು ಪೊಲೀಸ್ ಆಯುಕ್ತ ಡಿ.ಸಿ. ರಾಜಪ್ಪ ಹಾಗೂ ಡಿಸಿಪಿ ಸೀಮಾ ಲಾಟ್ಕರ್ ಚಿತ್ರ ಬಿಡಿಸುವ ಮೂಲಕ ಉದ್ಘಾಟಿಸಿದ್ದು ವಿಶೇಷವಾಗಿತ್ತು.
ಸೇಂಟ್ ಮೆರೀಸ್ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಆದಿತ್ಯ ಚೌಗುಲೆ, ಜಗದೀಶ ಪಾಟೀಲ, 7ನೇ ತರಗತಿಯ ಸೂರಜ್ ಪಾಟೀಲ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ಟ್ರೋಫಿ ಮತ್ತು ಪ್ರಮಾಣಪತ್ರ ಪಡೆದರು. 1ನೇ ತರಗತಿ ವಿದ್ಯಾರ್ಥಿನಿ ಇಂಚರಾ ನಾಯ್ಕಗೆ ಸಮಾಧಾನಕರ ಬಹುಮಾನ ನೀಡಲಾಯಿತು.
ಸಂಚಾರ ಎಸಿಪಿ ಕೆ.ಸಿ. ಲಕ್ಷ್ಮಿನಾರಾಯಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.