ಅಥಣಿ: ಈಚಿನ ವರ್ಷಗಳಲ್ಲಿ ಅಥಣಿ ತಾಲ್ಲೂಕಿನ 5 ಸಕ್ಕರೆ ಕಾರ್ಖಾನೆಗಳಲ್ಲಿಯೇ ಪ್ರತಿ ಟನ್ ಕಬ್ಬಿಗೆ ಅತಿ ಹೆಚ್ಚು ಬೆಲೆ ಪಾವತಿಸಲಾಗಿದೆ ಎಂದು ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಹೇಳಿದರು.
ಅವರು ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆಯ 32ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ‘ಕಳೆದ ಹಂಗಾಮಿನಲ್ಲಿ ಪೂರೈಕೆಯಾದ ಪ್ರತಿ ಟನ್ ಕಬ್ಬಿಗೆ ನಮ್ಮ ಕಾರ್ಖಾನೆಯಿಂದ ಕೇಂದ್ರ ಸರ್ಕಾರ ನಿಗದಿ ಪಡಿಸಿದ ಎಫ್.ಆರ್.ಪಿ ದರಕ್ಕಿಂತ ಹೆಚ್ಚಿನ ಬಿಲ್ಲನ್ನು ನಿಗದಿತ ಅವಧಿಯಲ್ಲಿಯೇ ಪಾವತಿಸಲಾಗಿದೆ’ ಎಂದರು.
‘ಪ್ರತಿ ಕೆ.ಜಿ.ಗೆ ₹20ರಂತೆ ಷೇರು ಸದಸ್ಯರಿಗೆ ಪ್ರತಿ ಷೇರಿಗೆ 50 ಕೆ.ಜಿ., ಕಬ್ಬು ಪೂರೈಕೆದಾರರಿಗೆ ಪ್ರತಿ ಟನ್ ಕಬ್ಬಿಗೆ 500 ಗ್ರಾಂ ಮತ್ತು ಕಾರ್ಖಾನೆಯ ಸಿಬ್ಬಂದಿ, ಕಾರ್ಮಿಕರಿಗೆ 25 ಕೆ.ಜಿ. ಸಕ್ಕರೆ ವಿತರಿಸಲಾಗುವುದು’ ಎಂದು ತಿಳಿಸಿದರು.
‘2023–24ರಲ್ಲಿ ಕಾರ್ಖಾನೆಗೆ ₹65.86 ಲಕ್ಷ ಲಾಭವಾಗಿದೆ. ಕಳೆದ ಹಂಗಾಮಿನಲ್ಲಿ 5,60,917 ಟನ್ ಕಬ್ಬು ನುರಿಸಿ 6,08,000 ಕ್ವಿಂಟಲ್ ಸಕ್ಕರೆ ಉತ್ಪಾದಿಸಲಾಗಿದೆ. 3.63 ಕೋಟಿ ಯುನಿಟ್ ವಿದ್ಯುತ್ ಉತ್ಪಾದಿಸಲಾಗಿದೆ’ ಎಂದು ಹೇಳಿದರು.
ವ್ಯವಸ್ಥಾಪಕ ನಿರ್ದೇಶಕ ಜಿ.ಎಂ.ಪಾಟೀಲ ಮಾತನಾಡಿ, ‘ಪ್ರಸಕ್ತ ಹಂಗಾಮಿನಲ್ಲಿಯೂ ಬೇರೆ ಖಾಸಗಿ ಕಾರ್ಖಾನೆಗಳಿಗಿಂತ ರೈತರಿಗೆ ಹೆಚ್ಚು ದರ ನೀಡುತ್ತೇವೆ’ ಎಂದು ಹೇಳಿದರು.
ಕಚೇರಿ ಅಧೀಕ್ಷಕ ಸುರೇಶ ಠಕ್ಕಣ್ಣವರ, ಮುಖ್ಯ ಲೆಕ್ಕಾಧಿಕಾರಿ ಎ.ಸಿ. ರಾಚಪ್ಪನವರ, ಆಡಳಿತ ಮಂಡಳಿ ಉಪಾಧ್ಯಕ್ಷ ಶಂಕರ ವಾಘಮೋಡೆ, ನಿರ್ದೇಶಕ ಮಂಡಳಿ ಸದಸ್ಯರಾದ ಗುರುಬಸು ತೆವರಮನಿ, ಶಾಂತಿನಾಥ ನಂದೇಶ್ವರ, ಘೂಳಪ್ಪ ಜತ್ತಿ, ರುಕ್ಮಿಣಿ ಕುಲಕರ್ಣಿ, ರಮೇಶ ಪಟ್ಟಣ, ಸೌರಭ ಪಾಟೀಲ, ಸುನಂದಾ ನಾಯಿಕ, ಸಿದ್ರಾಯ ನಾಯಿಕ, ಮಲ್ಲಿಕಾರ್ಜುನ ಗೋಟಖಿಂಡಿ, ಹಣಮಂತ ಜಗದೇವ, ವಿಶ್ವನಾಥ ಪಾಟೀಲ, ಪಿ.ಸಿ.ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.