ADVERTISEMENT

ಹುಲ್ಲೋಳಿ ಅರಿಹಂತ ಸೌಹಾರ್ದ ಸಂಘಕ್ಕೆ ₹6.64 ಕೋಟಿ ಲಾಭ: ಅಧ್ಯಕ್ಷ ಚೌಗಲಾ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 14:04 IST
Last Updated 4 ಏಪ್ರಿಲ್ 2024, 14:04 IST
ಬಿ.ಬಿ. ಚೌಗಲಾ
ಬಿ.ಬಿ. ಚೌಗಲಾ   

ಹುಕ್ಕೇರಿ: ‘ಗ್ರಾಮೀಣ ಭಾಗದಲ್ಲಿ ಎರಡು ದಶಕಗಳ ಹಿಂದೆ ಸ್ಥಾಪಿಸಿದ ತಾಲ್ಲೂಕಿನ ಹುಲ್ಲೋಳಿ ಅರಿಹಂತ ಸೌಹಾರ್ದ ಸಹಕಾರ ಸಂಘವು ಕಳೆದ ಆರ್ಥಿಕ ವರ್ಷದಲ್ಲಿ ₹6.64 ಕೋಟಿ ನಿವ್ವಳ ಲಾಭ ಗಳಿಸಿದೆ’ ಎಂದು ಬ್ಯಾಂಕ್ ಅಧ್ಯಕ್ಷ ಬಿ.ಬಿ.ಚೌಗಲಾ ಹೇಳಿದರು.

ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಬ್ಯಾಂಕ್ 16,600 ಸದಸ್ಯರನ್ನು ಹೊಂದಿದ್ದು, ಪ್ರಧಾನ ಕಚೇರಿ ಸೇರಿ ಒಟ್ಟು 10 ಶಾಖೆಗಳಿವೆ. ₹1,646 ಕೋಟಿ ವಹಿವಾಟು ನಡೆಸಿದ್ದು ₹1 ಕೋಟಿ ಷೇರು ಬಂಡವಾಳ ಹೊಂದಿದೆ. ₹25 ಕೋಟಿ ಕಾಯ್ದಿಟ್ಟ ಹಾಗೂ ಇತರೆ ನಿಧಿಗಳಿದ್ದು, ₹280 ಕೋಟಿ ದುಡಿಯುವ ಬಂಡವಾಳವಿದೆ. ₹254 ಕೋಟಿ ಠೇವು ಜತೆ ₹ 85 ಕೋಟಿ ಗುಂತಾವಣೆ ಹೊಂದಿದೆ’ ಎಂದರು.

ADVERTISEMENT

‘ಕಳೆದ ಸಾಲಿನಲ್ಲಿ ₹193 ಕೋಟಿ ಸಾಲ ವಿತರಿಸಲಾಗಿದ್ದು, ಶೇ 99ರಷ್ಟು ಸಾಲ ವಸೂಲಾತಿಯಾಗಿದೆ. ಸದಸ್ಯರಿಗೆ ಶೇ 25ರಷ್ಟು ಲಾಭಾಂಶ ವಿತರಿಸಲು ಆಡಳಿತ ಮಂಡಳಿ ನಿರ್ಧರಿಸಿದೆ’ ಎಂದರು.

‘ಸಹಕಾರ ಕ್ಷೇತ್ರದೊಂದಿಗೆ ಶೈಕ್ಷಣಿಕ, ಹೈನುಗಾರಿಕೆಯಲ್ಲಿ ಬ್ಯಾಂಕ್ ತೊಡಗಿಸಿಕೊಂಡಿದೆ. ಸದಸ್ಯ–ಗ್ರಾಹಕ ಸ್ನೇಹಿ ಯೋಜನೆ ಜಾರಿಗೊಳಿಸಿದೆ’ ಎಂದು ಹೇಳಿದರು.

ಪ್ರಧಾನ ಕಾರ್ಯದರ್ಶಿ ಆನಂದ ಚೌಗಲಾ ಮಾತನಾಡಿ, ‘ಸಹಕಾರ ವಲಯದಲ್ಲಿನ ಸೇವೆ ಪರಿಗಣಿಸಿ ಸಂಘಕ್ಕೆ ಸಹಕಾರ ಆದರ್ಶ ಸಂಸ್ಥೆ ಪುರಸ್ಕಾರ, ಉತ್ತಮ ಸೌಹಾರ್ದ ಸಹಕಾರ ಪ್ರಶಸ್ತಿ ಲಭಿಸಿವೆ. ಆಧುನಿಕ ಸೌಲಭ್ಯಗಳೊಂದಿಗೆ ಗ್ರಾಹಕ–ಸದಸ್ಯರಿಗೆ ತ್ವರಿತಗತಿಯಲ್ಲಿ ಸೇವೆ ಸಲ್ಲಿಸಲಾಗುತ್ತಿದೆ’ ಎಂದರು.

ಉಪಾಧ್ಯಕ್ಷ ಬಾಹುಬಲಿ ನಾಗನೂರಿ, ನಿರ್ದೇಶಕರಾದ ರಾಮಣ್ಣ ಗೋಟೂರಿ, ಜಯಪಾಲ ಚೌಗಲಾ, ರವೀಂದ್ರ ಚೌಗಲಾ, ಮಾಯಪ್ಪ ಹೊಳೆಪ್ಪಗೋಳ, ಶ್ರುತಿ ಅಶೋಕ ಪಾಟೀಲ, ಜಿನ್ನಪ್ಪ ಸಪ್ತಸಾಗರ, ವಕೀಲ ಪಿ.ಆರ್.ಚೌಗಲಾ, ಬಸವರಾಜ ಪಾಟೀಲ, ಭೂಪಾಲ ಚೌಗಲಾ, ಬಾಳಪ್ಪ ಸಂಕೇಶ್ವರಿ, ಅಶೋಕ ಚೌಗಲಾ, ಬಾಬು ಅಕ್ಕಿವಾಟೆ, ಸುಮತಿ ಚೌಗಲಾ, ವ್ಯವಸ್ಥಾಪಕ ಮಹಾವೀರ ಚೌಗಲಾ, ವ್ಯವಸ್ಥಾಪಕ ಅಜೀತ ಚೌಗಲಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.