ADVERTISEMENT

‍ಪಿಎ ಕೆಲಸಕ್ಕೆ ಸಚಿವರದ್ದೇ ನಿರ್ದೇಶನ: ಅರವಿಂದ ಬೆಲ್ಲದ

ಎಸ್‌ಡಿಎ ಆತ್ಮಹತ್ಯೆ ಪ್ರಕರಣ: ಲಕ್ಷ್ಮಿ ಹೆಬ್ಬಾಳಕರ ರಾಜೀನಾಮೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 15:38 IST
Last Updated 7 ನವೆಂಬರ್ 2024, 15:38 IST
ಸಚಿವೆ ಲಕ್ಷ್ಮಿ ಹೆಬ್ಬಾಳಕರ ರಾಜೀನಾಮೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ಗುರುವಾರ ವಿಧಾನಸಭೆ ವಿರೋಧ ಪಕ್ಷದ ನಾಯಕ  ಅರವಿಂದ ಬೆಲ್ಲದ ಅವರ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮುಖಂಡರು ಬೊಬ್ಬೆ ಹೊಡೆದು ಪ್ರತಿಭಟನೆ ನಡೆಸಿದರು
–ಪ್ರಜಾವಾಣಿ ಚಿತ್ರ
ಸಚಿವೆ ಲಕ್ಷ್ಮಿ ಹೆಬ್ಬಾಳಕರ ರಾಜೀನಾಮೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ಗುರುವಾರ ವಿಧಾನಸಭೆ ವಿರೋಧ ಪಕ್ಷದ ನಾಯಕ  ಅರವಿಂದ ಬೆಲ್ಲದ ಅವರ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮುಖಂಡರು ಬೊಬ್ಬೆ ಹೊಡೆದು ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ   

ಬೆಳಗಾವಿ: ‘ಆಪ್ತ ಸಹಾಯಕರು (ಪಿಎ) ಸಚಿವರು ಹೇಳಿದಂತೆ ಕೇಳುತ್ತಾರೆ ಹೊರತು ಸ್ವಂತ ಬುದ್ಧಿಯಿಂದ ಕೆಲಸ ಮಾಡಲ್ಲ. ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಪಿಎ ಹೆಸರು ಕೇಳಿಬಂದಿದೆ. ತಾವು ಜವಾಬ್ದಾರರಲ್ಲ ಎಂದು ಸಚಿವೆ ನುಣುಚಿಕೊಳ್ಳಲು ಆಗದು’ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.

‘ರುದ್ರಣ್ಣ ಅವರು ಲಕ್ಷ್ಮಿ ಹೆಬ್ಬಾಳಕರ ಪಿಎ ಹೆಸರು ಬರೆದು ಬೆಳಗಾವಿ ತಹಶೀಲ್ದಾರ್‌ ಕಚೇರಿಯಲ್ಲಿ ಸಾವಿಗೆ ಶರಣಾಗಿದ್ದಾರೆ. ಇದಕ್ಕೆ ಸಚಿವೆ ನೇರ ಹೊಣೆ. ತಕ್ಷಣ ಅವರು ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು. ತನಿಖೆಯಲ್ಲಿ ನಿರಪರಾಧಿ ಎಂದು ಕಂಡುಬಂದರೆ ಮತ್ತೆ ಸಚಿವರಾಗಲಿ’ ಎಂದು ಅವರು ಗುರುವಾರ ತಿಳಿಸಿದರು.

‘ಸಾವು ಸಂಭವಿಸಿ ಮೂರು ದಿನಗಳಾದರೂ ತಹಶೀಲ್ದಾರ್‌ ಸೇರಿ ಮೂವರೂ ಆರೋಪಿಗಳನ್ನು ಬಂಧಿಸಿಲ್ಲ. ಸಾಕ್ಷ್ಯಗಳನ್ನು ನಾಶಪಡಿಸುವ ಹುನ್ನಾರ ನಡೆದಿದೆ. ರುದ್ರಣ್ಣ ಸಾಯುವ ಮುನ್ನ ಯಾರೊಂದಿಗೆ, ಏನೇನು ಮಾತಾಡಿದ್ದಾರೆ ಎಂಬುದು ಬಹಿರಂಗವಾಗಬೇಕು. ತಹಶೀಲ್ದಾರ್ ಕಚೇರಿಯ ಸಿಸಿಟಿವಿ ದೃಶ್ಯಗಳು ನಾಶ ಮಾಡಲು ಬಿಡಬಾರದು. ಸ್ಥಳೀಯ ಪೊಲೀಸರ ಮೇಲೆ ನಮಗೆ ನಂಬಿಕೆ ಇಲ್ಲ. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು’ ಎಂದೂ ಅವರು ಆಗ್ರಹಿಸಿದರು. ಇದಕ್ಕೆ ಮಾಜಿ ಶಾಸಕ ಸಂಜಯ ಪಾಟೀಲ ಮತ್ತು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ ಧ್ವನಿಗೂಡಿಸಿದರು.

ADVERTISEMENT

ಇದಕ್ಕೂ ಮುನ್ನ ಸಚಿವೆ ಲಕ್ಷ್ಮಿ ಹೆಬ್ಬಾಳಕರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತರು  ಪ್ರತಿಭಟನೆ ನಡೆಸಿದರು. ರಾಣಿ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು. ಬಳಿಕ ಬೊಬ್ಬೆ ಹೊಡೆದು, ಮೆರವಣಿಗೆ ಕೈಗೊಂಡರು.

ರಾಜ್ಯದಲ್ಲಿ ಒಂದೇ ವರ್ಷದಲ್ಲಿ ಏಳು ಸರ್ಕಾರಿ ನೌಕರರ ಆತ್ಮಹತ್ಯೆ ಆಗಿದೆ. ಇದಕ್ಕೆ ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರವೇ ಕಾರಣ.
ಅರವಿಂದ ಬೆಲ್ಲದ, ವಿರೋಧ ಪಕ್ಷದ ಉಪನಾಯಕ ವಿಧಾನಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.