ಬೆಳಗಾವಿ: ನೆತ್ತಿ ಸುಡುವ ಬಿಸಿಲು... ಹಣೆಗುಂಟ ಇಳಿಯುತ್ತಿದ್ದ ಬೆವರು... ಮನೆ ಮನೆಯ ಬಾಗಿಲಿಗೆ ತೆರಳಿ ಮತಯಾಚನೆ... ಉತ್ಸಾಹ ತುಂಬಲು ಮೊಳಗುತ್ತಿದ್ದ ಕಾಂಗ್ರೆಸ್ ಘೋಷಣೆಗಳು...
ಇದು ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬೆಳಗುಂದಿಯಲ್ಲಿ ಬುಧವಾರ ‘ಅಭ್ಯರ್ಥಿ ಜೊತೆ ಒಂದು ಸುತ್ತು’ ಹಾಕಿದ ‘ಪ್ರಜಾವಾಣಿ’ಗೆ ಕಂಡುಬಂದ ದೃಶ್ಯಗಳಿವು...
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಕಾಂಗ್ರೆಸ್ ಅಭ್ಯರ್ಥಿ ಡಾ.ವಿ.ಎಸ್. ಸಾಧುನವರ ಅವರನ್ನು ಮುಂದಿಟ್ಟುಕೊಂಡು ಸ್ಥಳೀಯ ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಯುವರಾಜ ಕದಂ ಸೇರಿದಂತೆ ಇತರ ಮುಖಂಡರು ಚುನಾವಣಾ ಪ್ರಚಾರ ನಡೆಸಿದರು.
ತಮ್ಮ ಖಾಸಗಿ ವಾಹನಗಳಲ್ಲಿ ಗ್ರಾಮದ ಶಿವಾಜಿ ವೃತ್ತದ ಬಳಿ ಮುಖಂಡರು ಬಂದಿಳಿದಾಗ ಮಧ್ಯಾಹ್ನ 12 ಹೊಡೆದಿತ್ತು. ಗ್ರಾಮಕ್ಕೆ ಬಂದ ಮುಖಂಡರನ್ನು ಸ್ಥಳೀಯ ಜನರು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಅಭ್ಯರ್ಥಿ ಸಾಧುನವರ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಕೇಸರಿ ಪೇಟಾ ಸುತ್ತಿದರು. ನಂತರ ಗ್ರಾಮದ ಸುತ್ತಾಟ ಆರಂಭವಾಯಿತು.
ಹಸ್ತಪ್ರತಿ ಹಂಚಿಕೆ:
ಪಕ್ಷದ ಕಾರ್ಯಕರ್ತರು ವಿಶೇಷವಾಗಿ ಯುವತಿಯರು, ಮನೆ ಮನೆಗೆ ತೆರಳಿ ಹಸ್ತಪ್ರತಿಗಳನ್ನು ಹಂಚಿದರು. ಬಿಸಿಲಿನಿಂದ ರಕ್ಷಣೆ ಪಡೆಯಲು ಕಾಂಗ್ರೆಸ್ ಪಕ್ಷದ ಚಿಹ್ನೆ ಇರುವ ಟೋಪಿಗಳನ್ನು ಹಾಕಿಕೊಂಡಿದ್ದರು. ಕೆಲವರು ಹಸ್ತಪ್ರತಿಗಳನ್ನೇ ‘ಛತ್ರಿ’ಯನ್ನಾಗಿಸಿಕೊಂಡಿದ್ದರು. ‘ಅಕ್ಕ (ಲಕ್ಷ್ಮಿ ಹೆಬ್ಬಾಳಕರ) ಬಂದಿದ್ದಾರೆ, ಹೊರಗೆ ಬನ್ನಿ’ ಎಂದು ಮನೆಯವರನ್ನು ಕರೆಯುತ್ತಿದ್ದರು. ಹೊರಗೆ ಬಂದವರ ಜೊತೆ ಲಕ್ಷ್ಮಿ ಪ್ರೀತಿ– ಗೌರವಾದರಗಳಿಂದ ಮಾತನಾಡಿಸುತ್ತಿದ್ದರು. ಸಾಧುನವರ ಅವರನ್ನು ಪರಿಚಯ ಮಾಡಿಸಿಕೊಡುತ್ತಿದ್ದರು.
ದಾದಾ, ಕಸ್ ಆಹೇ:
ಮನೆಯ ಜಗಲಿ ಮಂದೆ ಕುಳಿತಿದ್ದ ವಯಸ್ಸಾದ ಹಿರಿಯರನ್ನು ಕಂಡ ತಕ್ಷಣ ಲಕ್ಷ್ಮಿ ಹೆಬ್ಬಾಳಕರ ಅವರ ಬಳಿ ತೆರಳಿ ‘ದಾದಾ, ಕಸ್ ಆಹೇ‘ (ಹೇಗಿದ್ದೀರಾ ಅಣ್ಣಾ?) ಎಂದು ಕೇಳಿದರು. ಕಾಲಿಗೆ ಎರಗಿ ಆಶೀರ್ವಾದ ಪಡೆದರು. ‘ಇವರು ನಮ್ಮ ಪಕ್ಷದ ಅಭ್ಯರ್ಥಿ ಸಾಧುನವರ. ನಮ್ಮ– ನಿಮ್ಮಂಗೆ ಕೃಷಿ ಮನೆತನದವರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದಂಗೆ, ಈ ಸಲ ಇವರನ್ನು ಗೆಲ್ಲಿಸಬೇಕು. ಇವರು ನಿಮಗೆ ಪರಿಚಯ ಇಲ್ಲದಿರಬಹುದು. ಆದರೆ, ನನ್ನನ್ನು ನೋಡಿ, ಇವರಿಗೆ ವೋಟ್ ಹಾಕಿ’ ಎಂದು ವಿನಂತಿಸಿದರು.
ಪಕ್ಕದಲ್ಲಿಯೇ ನಿಂತಿದ್ದ ಸಾಧುನವರ, ಬಾಗಿ ಹಿರಿಯರಿಗೆ ನಮಸ್ಕರಿಸಿದರು.
ಗ್ರಾಮೀಣ ಕ್ಷೇತ್ರದ ಮೇಲೆಯೇ ಏಕೆ ಕಣ್ಣು?
‘ಬೆಳಗಾವಿ ನಗರದ ಅಭಿವೃದ್ಧಿಗಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ನೂರಾರು ಎಕರೆ ಫಲವತ್ತಾದ ಭೂಮಿಯನ್ನೇಕೆ ಬಲಿ ಕೊಡಲಾಗುತ್ತಿದೆ. ಹಾಲಿ ಸಂಸದ, ಬಿಜೆಪಿಯ ಸುರೇಶ ಅಂಗಡಿಯವರು ಬೆಳಗಾವಿಗೆ ರಿಂಗ್ ರೋಡ್ ತಂದಿದ್ದಾಗಿ ಹೇಳುತ್ತಿದ್ದಾರೆ. ಈ ರಿಂಗ್ ರೋಡ್‌ನಿಂದ ಸ್ಥಳೀಯರಿಗೆ ಯಾವ ಲಾಭವೂ ಇಲ್ಲ. ಆದರೆ, ಈ ರಿಂಗ್ ರೋಡ್ ನಿರ್ಮಾಣಕ್ಕಾಗಿ ಗ್ರಾಮೀಣ ಕ್ಷೇತ್ರದ ಕೃಷಿ ಭೂಮಿಯನ್ನೇ ಏಕೆ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ ? ಇಲ್ಲಿನ ರೈತರನ್ನಷ್ಟೇ ಏಕೆ ಬಲಿ ಕೊಡಲಾಗುತ್ತಿದೆ?’ ಎಂದು ಲಕ್ಷ್ಮಿ ಖಾರವಾಗಿ ಪ್ರಶ್ನಿಸಿದರು.
ನಿಮ್ಮ ಮಗಳ ಗೌರವ ನಿಮ್ಮ ಕೈಯಲ್ಲಿದೆ:
‘ಕಳೆದ ಬಾರಿ ನನಗೆ 1.20 ಲಕ್ಷ ಮತಗಳನ್ನು ನೀಡಿ ಆಯ್ಕೆ ಮಾಡಿದ್ದೀರಿ. ರಾಜ್ಯದಲ್ಲಿ ನನಗೆ ವಿಶೇಷ ಗೌರವ ತಂದುಕೊಟ್ಟಿದ್ದೀರಿ. ನಾಲ್ಕು ಜನರ ಜೊತೆ ತಲೆ ಎತ್ತಿ ಮಾತನಾಡುವ ಶಕ್ತಿ ನೀಡಿದ್ದೀರಿ. ನಿಮ್ಮ ಮಗಳ ಇದೇ ಗೌರವ ಉಳಿಯಬೇಕೆಂದರೆ ಸಾಧುನವರ ಅವರಿಗೆ ನನಗಿಂತ ಹೆಚ್ಚು ಮತಗಳನ್ನು ನೀಡಬೇಕು’ ಎಂದು ಕೈ ಮುಗಿದು ವಿನಂತಿ ಮಾಡಿಕೊಂಡರು.
ಸಾಧುನವರ ಅವರು ಹಿಂದಿ ಭಾಷೆಯಲ್ಲಿ ಮಾತನಾಡಿ, ಮತಯಾಚಿಸಿದರು. ಸುಮಾರು ಒಂದು ಗಂಟೆಯ ಪ್ರಚಾರದ ನಂತರ ಬಿಜಗರ್ಣಿ, ಸಂತಿ ಬಸ್ತವಾಡದತ್ತ ಪ್ರಯಾಣ ಬೆಳೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.