ADVERTISEMENT

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ: ಪಾಲಿಕೆ ಸದಸ್ಯ, ಶಾಸಕರೂ ಆಗಿದ್ದ ಸಂಭಾಜಿ

ಆಗಿನ ಮುಖ್ಯಮಂತ್ರಿ ದಿ.ಎಸ್. ಬಂಗಾರಪ್ಪ ಅವರಿಗೆ ನಾಗರಿಕ ಸನ್ಮಾನ ಮಾಡಿದ್ದರು

ಎಂ.ಮಹೇಶ
Published 21 ಆಗಸ್ಟ್ 2021, 6:58 IST
Last Updated 21 ಆಗಸ್ಟ್ 2021, 6:58 IST
ಸಂಭಾಜಿ ಪಾಟೀಲ
ಸಂಭಾಜಿ ಪಾಟೀಲ   

ಬೆಳಗಾವಿ: ಇಲ್ಲಿನ ನಗರಪಾಲಿಕೆ ಚುನಾವಣೆಯಲ್ಲಿನ ಗೆಲುವು ಮತ್ತು ಅಲ್ಲಿಂದ ಗಳಿಸಿದ ಜನಪ್ರಿಯತೆಯನ್ನು ಏಣಿಯನ್ನಾಗಿ ಮಾಡಿಕೊಂಡು ವಿಧಾನಸಭೆ ಪ್ರವೇಶಿಸಿದ ಕೆಲವರಲ್ಲಿ ದಿವಂಗತ ಸಂಭಾಜಿ ಪಾಟೀಲ ಪ್ರಮುಖರೆನಿಸಿದ್ದಾರೆ.

ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಬೆಂಬಲಿತ ಸದಸ್ಯರಾಗಿ ಪಕ್ಷೇತರರಾಗಿ ಗೆದ್ದು ಅವರು ರಾಜಕೀಯವಾಗಿ ಮುಂದೆ ಬಂದಿದ್ದರು.

2013ರಲ್ಲಿ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದರು. ಇದಕ್ಕೂ ಮುಂಚೆ ಅವರು 4 ಬಾರಿ ಅಂದರೆ, 1990, 1992, 1993 ಹಾಗೂ 1994ರಲ್ಲಿ ಮೇಯರ್‌ ಸ್ಥಾನದಿಂದ ನಗರದ ಪ್ರಥಮ ಪ್ರಜೆಯಾಗಿ ಕೆಲಸ ಮಾಡಿದ್ದರು. ನಗರದ ಅಭಿವೃದ್ಧಿಗೆ ತಮ್ಮದೇ ರೀತಿಯಲ್ಲಿ ಕೊಡುಗೆಯನ್ನೂ ನೀಡಿದ್ದರು. 2004 ಮತ್ತು 2008ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ದಕ್ಷಿಣ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದರು. ನಂತರ ಪ್ರಯತ್ನಶೀಲರಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದರು.

ADVERTISEMENT

1991ರಲ್ಲಿ ಎಂಇಎಸ್‌ ಮುಖಂಡರ ಜೊತೆ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಮೊಟ್ಟ ಮೊದಲ ಬಾರಿಗೆ ಕನ್ನಡ ಭಾಷಿಕರಾದ ಸಿದ್ದನಗೌಡ ಪಾಟೀಲ ಅವರನ್ನು ನಗರದ ಮೇಯರ್‌ ಮಾಡಲು ಸಹಕರಿಸುವ ಮೂಲಕ ಗಮನಸೆಳೆದಿದ್ದರು. ಆ ಸಂದರ್ಭದಲ್ಲಿ ಕನ್ನಡ ಭಾಷಿಕರ ಹಾಗೂ ಮುಖಂಡರ ಪ್ರೀತಿಗೆ ಪಾತ್ರರಾಗಿದ್ದರು. ಅದೇ ವೇಳೆ ಎಂಇಎಸ್‌ನವರ ಕೆಂಗಣ್ಣಿಗೂ ಗುರಿಯಾಗಿದ್ದರು.

ಅಭಿವೃದ್ಧಿ ಪರವಾಗಿದ್ದರು:1990ರಲ್ಲಿ ಹಿಡಕಲ್‌ ಜಲಾಶಯದಿಂದ ಬೆಳಗಾವಿಗೆ ನೀರು ಪೂರೈಸುವ ಯೋಜನೆಯ ಅಡಿಗಲ್ಲು ಸಮಾರಂಭಕ್ಕೆ ಅಂದಿನ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಅವರನ್ನು ಕರೆಸಿದ್ದರು. ಇದರಿಂದಾಗಿ ಎಂಇಎಸ್‌ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದರು.

ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಅವರೊಂದಿಗೆ ಉತ್ತಮ ನಂಟು ಹೊಂದಿದ್ದರು. ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯದಿಂದ ಬೆಳಗಾವಿ ನಗರಕ್ಕೆ ನೀರು ತರುವುದರಲ್ಲಿ (ಕುಡಿಯುವ ಉದ್ದೇಶಕ್ಕೆ) ಸಂಭಾಜಿ ಅವರ ಪಾತ್ರ ಹಿರಿದಾಗಿದೆ. ಹೋದ ಚುನಾವಣೆಯಲ್ಲಿ ಅವರು ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.

‘ಬೆಳಗಾವಿಯಲ್ಲಿ ಭಾಷಾ ವಿವಾದ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದ್ದ ಸಂದರ್ಭದಲ್ಲಿ ಅವರು ಮೇಯರ್ ಆಗಿದ್ದರು. ಭಾಷಿಕ ವಿಷಯದಲ್ಲಿ ರಾಜಕೀಯ ಧ್ರುವೀಕರಣ ಆರಂಭವಾಗಿದ್ದೇ ಅವರಿಂದಲೇ ಎನ್ನಬಹುದು’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ನೆನೆದರು.

‘ಇಲ್ಲಿ ಮೇಯರ್‌ ಆಗಿದ್ದವರಲ್ಲಿ ಕರ್ನಾಟಕ ಸರ್ಕಾರದೊಂದಿಗೆ ಸಖ್ಯ ಬೆಳೆಸಿದ ಮೊದಲಿಗವರು. ಆಗಿನ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರನ್ನು ನಗರಕ್ಕೆ ಕರೆಸಿ, ಅಂಬೇಡ್ಕರ್ ಉದ್ಯಾನದಲ್ಲಿ ಭಗವಾಪೇಟ ತೊಡಿಸಿನಾಗರಿಕ ಸನ್ಮಾನವನ್ನೂ ನೀಡಿದ್ದರು. ಮುಖ್ಯಮಂತ್ರಿ ಬಂದರೆ ಕಪ್ಪು ಬಾವುಟ ಪ್ರದರ್ಶಿಸಿ ವಿರೋಧ ದಾಖಲಿಸುತ್ತಿದ್ದ ಕಾಲದಲ್ಲಿ ಮುಖ್ಯಮಂತ್ರಿಯನ್ನು ಆಹ್ವಾನಿಸಿ ಸನ್ಮಾನಿಸಿ ಗಮನಸೆಳೆದಿದ್ದರು’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ತಿಳಿಸಿದರು.

ಅಪಾರ ಕೊಡುಗೆ:‘ನಗರದ ಅಭಿವೃದ್ಧಿಗೆ ಅವರು ಅಪಾರ ಕೊಡುಗೆ ನೀಡಿದ್ದರು. ಇಲ್ಲಿ ಮೊದಲ ಕನ್ನಡ ಮೇಯರ್‌ ಮಾಡುವುದಕ್ಕೂ ಸಹಕರಿಸಿದ್ದರು. ಪರಿಣಾಮ ಎಂಇಎಸ್‌ನವರ ಕೋಪಕ್ಕೆ ಗುರಿಯಾಗಿದ್ದರು. ಅವರಿಂದ ಬಹಿಷ್ಕಾರಕ್ಕೂ ಒಳಗಾಗಿದ್ದರು. ಅದೇನೇ ಇದ್ದರೂ, ಪಾಲಿಕೆ ಸದಸ್ಯರಾಗಿದ್ದ ಸಮಯದಲ್ಲೇ ಶಾಸಕರಾಗಿಯೂ ಕೆಲಸ ಮಾಡಿದ್ದು ಅವರ ವಿಶೇಷತೆ’ ಎಂದು ತಿಳಿಸಿದರು.

ನಗರಪಾಲಿಕೆ ಸದಸ್ಯರಾದವರು, ನಂಬಿದ ವಿಚಾರಗಳಿಗೆ ಬದ್ಧರಾಗಿ ಮತ್ತು ನಗರದ ಅಭಿವೃದ್ಧಿಗೆ ಶ್ರಮಿಸಿದರೆ ರಾಜಕೀಯವಾಗಿ ಮುಂದೆ ಬರಬಹುದು ಎನ್ನುವುದಕ್ಕೆ ಸಂಭಾಜಿ ಪಾಟೀಲ ಉದಾಹರಣೆ ಆಗಿದ್ದಾರೆ.

ಇಲ್ಲಿನ ನಗರಪಾಲಿಕೆ ಸದಸ್ಯರಾಗಿ ಬಳಿಕ ವಿಧಾನಸಭೆಗೆ ಆಯ್ಕೆಯಾದವರ ಪಟ್ಟಿಯಲ್ಲಿ ರಮೇಶ ಕುಡಚಿ (ಕಾಂಗ್ರೆಸ್) ಹಾಗೂ ಎಂಇಎಸ್ ಬೆಂಬಲಿತ ಅರ್ಜುನರಾವ್ ಹಿಶೋಬಕರ ಇದ್ದಾರೆ (ಅವರು 1989ರಲ್ಲಿ ಆಯ್ಕೆಯಾಗಿದ್ದ ಬಿ.ಆರ್. ಮಹಗಾಂವಕರ ಅವರ ನಿಧನದಿಂದ ತೆರವಾಗಿದ್ದ ಬೆಳಗಾವಿ ಉತ್ತರ ಮತ ಕ್ಷೇತ್ರಕ್ಕೆ 1992ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.