ADVERTISEMENT

ಮೂಡಲಗಿ: ಗೋಕಾವಿ ನಾಡಿನ ಸಾಂಸ್ಕೃತಿಕ ಸಿರಿ ಪ್ರೊ.ಅಕ್ಕಿ

ಬೆಳಗಾವಿ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಬಾಗಿನ ಭಾಗ್ಯ

ಬಾಲಶೇಖರ ಬಂದಿ
Published 22 ನವೆಂಬರ್ 2024, 4:03 IST
Last Updated 22 ನವೆಂಬರ್ 2024, 4:03 IST
ಪ್ರೊ.ಚಂದ್ರಶೇಖರ ಅಕ್ಕಿ
ಪ್ರೊ.ಚಂದ್ರಶೇಖರ ಅಕ್ಕಿ   

ಮೂಡಲಗಿ: ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘಟನೆಗಳಲ್ಲಿ ಐದು ದಶಕಗಳಿಂದ ತೊಡಗಿಸಿಕೊಂಡಿರುವ ಪ್ರೊ.ಚಂದ್ರಶೇಖರ ಅಕ್ಕಿ ನ. 23 ಮತ್ತು 24ರಂದು ಮೂಡಲಗಿಯಲ್ಲಿ ಜರುಗಲಿರುವ ಬೆಳಗಾವಿ ಜಿಲ್ಲೆಯ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಬಾಗಿನದ ಗೌರವ ಸಿಕ್ಕಿದೆ.

ಗೋಕಾಕ ತಾಲ್ಲೂಕಿನ ಶಿಲ್ತಿಭಾವಿ ಗ್ರಾಮದ ಕೃಷಿ ಮತ್ತು ಸಂಪ್ರದಾಯ ಕುಟುಂಬದಲ್ಲಿ 1948ರ ಜೂನ್‌ 1ರಂದು ಅವರು ಜನಿಸಿರುವರು. ತಂದೆ ದುಂಡಪ್ಪ ಸ್ವಾತಂತ್ರ ಹೋರಾಟಗಾರ, ತಾಯಿ ಅಂಬವ್ವ. ಪ್ರಾಥಮಿಕ ಶಿಕ್ಷಣವನ್ನು ಶಿಲ್ತಿಭಾವಿಯಲ್ಲಿ ಮುಗಿಸಿ, 1974ರಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ. ಪದವಿ ಮುಗಿಸಿದರು. ತಾವು ಪದವಿ ಕಲಿತ ಗೋಕಾಕದ ಜೆಎಸ್‌ಎಸ್‌ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ವೃತ್ತಿ ಪ್ರಾರಂಭಿಸಿದರು.

ಕಥೆ, ಕವನ, ವಿಮರ್ಶೆ, ಬರವಣಿಗೆಯ ಮೂಲಕ ಕಾಲೇಜು ಮತ್ತು ಗೋಕಾವಿ ನಾಡಿನಲ್ಲಿ ಸಾಹಿತ್ಯ, ಸಾಂಸ್ಕೃತಿಕ ಪರಿಸರ ಬೆಳೆಸಿದ ಕೀರ್ತಿ ಅವರದು. ಸಾವಿರಾರು ಶಿಷ್ಯ ವೃಂದಕ್ಕೆ ಪ್ರೀತಿಯ ಗುರು ಎನಿಸಿಕೊಂಡಿದ್ದಾರೆ.

ADVERTISEMENT

‘ಕಸಿ’ ಕಥಾ ಸಂಕಲನವು ಅವರೊಬ್ಬ ಸತ್ವಶಾಲಿ ಕಥೆಗಾರ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಕರ್ನಾಟಕ ಸರ್ಕಾರದಿಂದ ಪ್ರಕಟವಾದ ಸಂಸದೀಯ ಪಟು ಎ.ಆರ್. ಪಂಚಗಾಂವಿ, ಮಹಾದೇವಪ್ಪ ಮುನವಳ್ಳಿ ಅವರ ಚರಿತ್ರೆ, ನಿಂಗಣ್ಣ ಸಣ್ಣಕ್ಕಿ ಅವರ ಅಭಿನಂದನಾ ಗ್ರಂಥ ‘ಹಾಲುಬಾನ’, ಗೋಕಾವಿ ಸಂಸ್ಕೃತಿ ಸಂಪದ, ಬೆಳಗಾವಿ ಬೆಳಕು, ದಾಸೋಹಿ, ಕಥಾಂತರಂಗ, ವಿಮರ್ಶಾ ಸಂಚಯ ಈ ಎಲ್ಲ ಸಂಪಾದನೆ ಮಾಡಿದ್ದಾರೆ.

ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಸದಸ್ಯರಾಗಿ ಕಟ್ಟಿಮನಿ ಅವರ 10 ಸಾವಿರ ಪುಟಗಳ, 64 ಕೃತಿಗಳನ್ನೊಳಗೊಂಡ 15 ಸಂಪುಟಗಳ ಪ್ರಧಾನ ಸಂಪಾದನೆ ನಿಭಾಯಿಸಿ, ಎಂ.ಎಂ.ಕಲಬುರ್ಗಿ ಅವರ ಮೆಚ್ಚುಗೆಗೆ ಪಾತ್ರವಾದವರು. ವೈಚಾರಿಕ ಲೇಖನಗಳ ‘ಮಣ್ಣುಕೊಟ್ಟದ್ದು ಮತ್ತು ಇತರೆ ಕಥೆಗಳು’ ಮತ್ತು ‘ಬರೆದು ಬದುಕಿದ ಹಾದಿ’, ವ್ಯಕ್ತಿ ಪರಿಚಯಗಳಿರುವ ‘ಎತ್ತರದ ಏಣಿಗೆ’ ಕೃತಿಗಳು ಲೋಕಾರ್ಪಣೆಗೆ ಸಿದ್ಧವಾಗಿವೆ.

ಮೈತ್ರಿ ಮತ್ತು ಪೂರ್ಣಿಮಾ ಪ್ರಕಾಶನವನ್ನು ‌ಸ್ಥಾಪಿಸಿ ತಮ್ಮ ಪುಸ್ತಕಗಳು ಸೇರಿದಂತೆ ಸ್ನೇಹಿತರ ಮತ್ತು ಶಿಷ್ಯರ 16 ಕೃತಿಗಳನ್ನು ಪ್ರಕಟಿಸಿದ್ದಾರೆ.

2006ರಲ್ಲಿ ನಿವೃತ್ತರಾದ ಅವರಿಗೆ ಶಿಷ್ಯ ಬಳಗ ‘ಸಹೃದಯಿ’ ಅಭಿನಂದನಾ ಗ್ರಂಥ ಅರ್ಪಿಸಿದೆ. ಹಲವಾರು ಪ್ರಶಸ್ತಿ, ಸನ್ಮಾನಗಳು ಸಂದಿವೆ. 2016ರಲ್ಲಿ ಕಲ್ಲೋಳಿಯಲ್ಲಿ ಜರುಗಿದ ಅವಿಭಜಿತ ಗೋಕಾಕ ತಾಲ್ಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಕೂಡ ಅವರು ವಹಿಸಿದ್ದರು. 77ರ ಪ್ರಾಯದ ಅವರದು ಕನ್ನಡಕ್ಕಾಗಿ ಹೋರಾಡುವ ಹುಮ್ಮಸ್ಸು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.