ಬೆಳಗಾವಿ: ಇಲ್ಲಿನ ಅನಗೋಳದ ಕನಕದಾಸ ಕಾಲೊನಿಯಲ್ಲಿ ಪ್ರತಿಷ್ಠಾಪಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಶನಿವಾರ ಬೆಳಗಿನ ಜಾವ 3ರ ಸುಮಾರಿಗೆ ಭಗ್ನಗೊಳಿಸಿದ್ದಾರೆ.
ಮುಖದ ಭಾಗವನ್ನು ವಿರೂಪಗೊಳಿಸಿದ್ದಾರೆ. ಇದಕ್ಕಾಗಿ ತಲ್ವಾರ್ ಬಳಸಿದ್ದಾರೆ. ಪ್ರತಿಮೆಯಲ್ಲಿದ್ದ ಖಡ್ಗವನ್ನು ಕಿತ್ತು ಹಾಕಿದ್ದಾರೆ ಎಂದು ಗೊತ್ತಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ್ದ ತಿಲಕವಾಡಿ ಠಾಣೆ ಪೊಲೀಸರು ಪ್ರತಿಮೆಯನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ. ರಾಯಣ್ಣ ಅಭಿಮಾನಿಗಳು ಪ್ರತಿಭಟನೆ ನಡೆಸುವ ಸಾಧ್ಯತೆ ಇರುವುದರಿಂದ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ತಿಲಕವಾಡಿ ಪೊಲೀಸ್ ಠಾಣೆ ಬಳಿ ಅಭಿಮಾನಿಗಳು ಜಮಾಯಿಸುತ್ತಿದ್ದಾರೆ.
ಕನ್ನಡ ಹೋರಾಟಗಾರರ ಪ್ರತಿಭಟನೆ
ಬೆಳಗಾವಿನಗರದ ಅನಗೋಳದ ಕನಕದಾಸ ಕಾಲೊನಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಪ್ರತಿಮೆಯನ್ನು ಮರು ಪ್ರತಿಷ್ಠಾಪಿಸಬೇಕು ಎಂದುಆಗ್ರಹಿಸಿ ತಿಲಕವಾಡಿ ಪೊಲೀಸ್ ಠಾಣೆ ಎದುರು ಕನ್ನಡ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ.ಠಾಣೆ ಸುತ್ತಲಿನ ಪರಿಸರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಪ್ರತಿಭಟನೆ ಹಿಂದಕ್ಕೆ
ಅನಗೋಳದ ಕನಕದಾಸ ಕಾಲೊನಿಯಲ್ಲಿ ರಾಯಣ್ಣನ ಪ್ರತಿಮೆ ಭಗ್ನಗೊಳಿಸಿದವರ ವಿರುದ್ಧ ಕ್ರಮ ಜರುಗಿಸುವುದಾಗಿ ಪೊಲೀಸರು ಭರವಸೆ ನೀಡಿದ್ದರಿಂದ ಕನ್ನಡ ಹೋರಾಟಗಾರರು ಪ್ರತಿಭಟನೆ ಹಿಂಪಡೆದಿದ್ದಾರೆ.ತ್ವರಿತವಾಗಿ ಆರೋಪಗಳನ್ನು ಬಂಧಿಸದಿದ್ದರೆ ಮತ್ತೆ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ರಾಯಣ್ಣನ ನಾಮಫಲಕಕ್ಕೆ ಕೇಸರಿ ಬಣ್ಣ
ಬೆಳಗಾವಿತಾಲ್ಲೂಕಿನ ಸುಳಗಾ ಗ್ರಾಮದ ಸಂಭಾಜಿ ಗಲ್ಲಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರಿನ ನಾಮಫಲಕಕ್ಕೆ ಕೇಸರಿಬಣ್ಣ ಎರಚಲಾಗಿದೆ.ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಾವಾಗ ಆಗಿದೆ ಎನ್ನುವುದು ಖಚಿತವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.