ADVERTISEMENT

ಕನ್ನಡಿಗರ ವಿರುದ್ಧ ಪ್ರಚೋದನಕಾರಿ ಭಾಷಣ: ಸಂಜಯ್‌ ರಾವುತ್‌ಗೆ ನಿರೀಕ್ಷಣಾ ಜಾಮೀನು

​ಪ್ರಜಾವಾಣಿ ವಾರ್ತೆ
Published 3 ಮೇ 2023, 15:55 IST
Last Updated 3 ಮೇ 2023, 15:55 IST
ಸಂಜಯ ರಾವುತ್‌
ಸಂಜಯ ರಾವುತ್‌    

ಬೆಳಗಾವಿ: ಮಹಾರಾಷ್ಟ್ರದ ರಾಜ್ಯಸಭೆ ಸದಸ್ಯ ಹಾಗೂ ಶಿವಸೇನೆ ರಾಜ್ಯ ವಕ್ತಾರ ಸಂಜಯ್‌ ರಾವುತ್‌ ಅವರು ಇಲ್ಲಿನ 4ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಬುಧವಾರ ಹಾಜರಾಗಿ, ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಿದರು.

2018ರ ಮಾರ್ಚ್‌ 30ರಂದು ಇಲ್ಲಿನ ಭಾಗ್ಯನಗರದಲ್ಲಿ ವೆಬ್‌ಸೈಟ್‌ವೊಂದರ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ರಾವುತ್‌ ಕನ್ನಡಿಗರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ್ದರು. ‘ಕರ್ನಾಟಕದಲ್ಲಿ ಮಹಾರಾಷ್ಟ್ರದ ಒಂದು ಬಸ್‌ ಮೇಲೆ ದಾಳಿ ನಡೆಸಿದರೆ, ಮಹಾರಾಷ್ಟದಲ್ಲಿ ಕರ್ನಾಟಕದ 100 ಬಸ್‌ಗಳ ಮೇಲೆ ದಾಳಿ ಮಾಡಲಾಗುವುದು’ ಎಂದು ಹೇಳಿದ್ದರು. ಅವರ ವಿರುದ್ಧ ಟಿಳಕವಾಡಿ ಠಾಣೆ ಪೊಲೀಸರು ‘ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ’ ದೂರು ದಾಖಲಿಸಿದ್ದರು.

ರಾವುತ್‌ ಪರ ವಕೀಲ ಶಾಮಸುಂದರ್‌ ಪತ್ತಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮಾದರಿ ನೀತಿಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿ ರಾವುತ್‌ ಅವರಿಗೆ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್‌ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಿತ್ತು. ಬುಧವಾರ 4ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪ್ರಕ್ರಿಯೆ ಕ್ರಮಬದ್ಧಗೊಳಿಸಿದರು’ ಎಂದು ತಿಳಿಸಿದರು.

ADVERTISEMENT

ಸಂಜಯ್‌ ರಾವುತ್‌ ಮಾತನಾಡಿ, ‘ಇಂದು ನ್ಯಾಯಾಲಯಕ್ಕೆ ಹಾಜರಾಗಿ ನಿರೀಕ್ಷಣಾ ಜಾಮೀನು ಪಡೆದಿದ್ದೇನೆ. ಇದು ನ್ಯಾಯಾಂಗ ಪ್ರಕ್ರಿಯೆಯ ಒಂದು ಭಾಗ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.