ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಉಡುಪಿ ಪೊಲೀಸರ ತಂಡದವರು ತಾಲ್ಲೂಕಿನ ಹಿಂಡಲಗಾ ಗ್ರಾಮ ಪಂಚಾಯ್ತಿಗೆ ಸೋಮವಾರ ಭೇಟಿ ನೀಡಿ, ಪಿಡಿಒ ವಸಂತಕುಮಾರಿ ಕೆ. ಅವರಿಂದ ಮಾಹಿತಿ ಪಡೆದರು.
ಹಿಂಡಲಗಾ ಗ್ರಾಮದಲ್ಲಿ ₹ ಕೋಟಿ ಮೊತ್ತದ ಕಾಮಗಾರಿ ನಿರ್ವಹಿಸಿದ್ದಾಗಿ ಸಂತೋಷ್ ಹೇಳಿಕೊಂಡಿದ್ದರು. ಉಡುಪಿ ಠಾಣೆ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ, ಇನ್‌ಸ್ಪೆಕ್ಟರ್ ಶರಣಗೌಡ ಪಾಟೀಲ ನೇತೃತ್ವದ ತಂಡವು ಕಾಮಗಾರಿಗಳ ಕುರಿತು ಅಧಿಕಾರಿಯಿಂದ ಮಾಹಿತಿ ಪಡೆಯಿತು. ಕಾರ್ಯಾದೇಶ ಪತ್ರವಿಲ್ಲದೆ ಕೆಲಸ ನಡೆಸುವುದಕ್ಕೆ ಅವಕಾಶ ಕೊಟ್ಟಿದ್ದು ಏಕೆ ಎಂಬಿತ್ಯಾದಿ ಪ್ರಶ್ನೆಗಳನ್ನು ಅಧಿಕಾರಿಗಳು ಕೇಳಿದರು. ‘ಕಾಮಗಾರಿ ವೇಳೆ ನಾನು ಇಲ್ಲಿರಲಿಲ್ಲ. ಕೆಲವು ತಿಂಗಳ ಹಿಂದೆಯಷ್ಟೆ ಬಂದಿದ್ದೇನೆ’ ಎಂದು ಪಿಡಿಒ ತಿಳಿಸಿದರು ಎಂದು ಮೂಲಗಳು ತಿಳಿಸಿವೆ.
ಹಿಂದೆ ಪಿಡಿಒ ಇದ್ದವರು ಯಾರು, ಎಲ್ಲೆಲ್ಲಿ ಮತ್ತು ಯಾವ್ಯಾವ ಕಾಮಗಾರಿ ನಡೆದಿವೆ ಎಂಬಿತ್ಯಾದಿ ಮಾಹಿತಿಯನ್ನು ಅಧಿಕಾರಿಗಳು ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಈ ವೇಳೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗೇಶ ಮನ್ನೋಳಕರ ಇರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.