ಬೆಳಗಾವಿ: 'ಶಿವಮೊಗ್ಗದಲ್ಲಿ ಈದ್-ಮಿಲಾದ್ ಮೆರವಣಿಗೆ ವೇಳೆ ನಡೆದ ಗಲಾಟೆಗೆ ಹಿಂದೂ- ಮುಸ್ಲಿಂ ವಿಷಯವೇ ಕಾರಣ ಎಂದು ಹೇಳಲಾಗದು. ಅದಕ್ಕೆ ಬೇರೆ ಬೇರೆ ಕಾರಣಗಳಿರುತ್ತವೆ. ಪೊಲೀಸರ ತನಿಖೆ ನಂತರ ಸತ್ಯಾಂಶ ಹೊರಬರಲಿದೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಶಿವಮೊಗ್ಗದ ಯಾವುದೋ ಒಂದು ಮೂಲೆಯಲ್ಲಿ ಆಗಿರುವ ಘಟನೆ ಇದು. ಇದು ಇಡೀ ಶಿವಮೊಗ್ಗಕ್ಕೇ ಸಂಬಂಧಿಸಿದ್ದಲ್ಲ' ಎಂದರು.
'ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಈ ರೀತಿ ಘಟನೆ ಹೆಚ್ಚಿವೆ' ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಸತೀಶ, 'ಅವರು ಹೀಗೆಯೇ ಹೇಳುತ್ತಾರೆ. ಬಿಜೆಪಿಯವರ ಅಧಿಕಾರವಧಿಯಲ್ಲಿ ರಾಜ್ಯ ನೂರಕ್ಕೆ ನೂರರಷ್ಟು ಶಾಂತವಿತ್ತೇ? ಅವರ ಅವಧಿಯಲ್ಲಿ ಯಾವುದೇ ಘಟನೆ ನಡೆದಿಲ್ಲವೇ? ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲವೇ? ಯಾವ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿಲ್ಲವೇ?' ಎಂದು ಪ್ರಶ್ನಿಸಿದರು.
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದಕ್ಕೆ ಬಿಜೆಪಿಯವರು ವಿರೋಧ ವ್ಯಕ್ತಪಡಿಸಿದ ಕುರಿತು ಪ್ರತಿಕ್ರಿಯಿಸಿದ ಅವರು, 'ಈ ಹಿಂದೆ ಮುಖ್ಯಮಂತ್ರಿಯಿದ್ದಾಗ ಬಸವರಾಜ ಬೊಮ್ಮಾಯಿ ಅವರು ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಬಿಟ್ಟಿದ್ದರು. ಈಗ ಅವರೇ ನಮ್ಮ ವಿರುದ್ಧ ಭಾಷಣ ಮಾಡುತ್ತಾರೆ. ಮಾಧ್ಯಮದವರೂ ಇದನ್ನು ಪ್ರಶ್ನಿಸುವುದಿಲ್ಲ' ಎಂದರು.
ಬಿಹಾರ ಸರ್ಕಾರ ಜಾತಿಗಣತಿ ವರದಿ ಬಿಡುಗಡೆಗೊಳಿಸಿರುವುದನ್ನು ಸ್ವಾಗತಿಸಿದ ಸತೀಶ, 'ಕರ್ನಾಟಕದ ಜಾತಿ ಗಣತಿ ವರದಿಯೂ ಸುಮಾರು ವರ್ಷಗಳ ಹಿಂದೆ ಸಿದ್ಧವಾಗಿದೆ. ಅದನ್ನು ಬಿಡುಗಡೆಗೊಳಿಸುವಂತೆ ಒತ್ತಾಯವಿದೆ. ಈ ಬಗ್ಗೆ ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರ ನಿರ್ಧರಿಸಬೇಕಿದೆ' ಎಂದರು.
'ಈ ವರದಿ ಬಿಡುಗಡೆಗೊಳಿಸುವುದರಿಂದ ಯಾವ ಸಮುದಾಯದ ಕಲ್ಯಾಣಕ್ಕೆ ಏನೇನು ಕಾರ್ಯಕ್ರಮ ರೂಪಿಸಬೇಕು, ಹೆಚ್ಚಿನ ಅನುದಾನ ಕೊಡಬೇಕಾ? ಎಂಬುದು ಗೊತ್ತಾಗುತ್ತದೆ. 2018ರ ಚುನಾವಣೆ ವೇಳೆ ವರದಿ ಬಂದಿತ್ತು. ಆದರೆ, ಬಿಡುಗಡೆಗೊಳಿಸಲು ಆಗಿರಲಿಲ್ಲ.
ಈ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆ ನಡೆಯುತ್ತಿದೆ. ಜನಗಣತಿ ವರದಿಗೆ ₹200 ಕೋಟಿ ಖರ್ಚು ಮಾಡಿರಬಹುದು. ಬೇಗ ಈ ವರದಿ ಜಾರಿಯಾಗಲಿ' ಎಂದು ತಿಳಿಸಿದರು.
ಮಕರ ಸಂಕ್ರಾಂತಿ ನಂತರ ಸರ್ಕಾರ ಪತನವಾಗುತ್ತದೆ' ಎಂಬ ಬಿಜೆಪಿ ಮುಖಂಡ ಸಿ.ಪಿ.ಯೋಗೀಶ್ವರ ಹೇಳಿಕೆಗೆ ಉತ್ತರಿಸಿದ ಸತೀಶ, 'ಅಲ್ಲಿಯವರೆಗೂ ನಾವು ಇರುತ್ತೇವೆಯಲ್ಲ. ನಾವು ಮಾಜಿಯಾದ ಬಳಿಕ, ಈ ಪ್ರಶ್ನೆ ಕೇಳಿ. ಆಗ ಉತ್ತರಿಸುತ್ತೇವೆ' ಎಂದು ಹಾಸ್ಯಚಟಾಕಿ ಹಾರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.