ಬೆಳಗಾವಿ: ‘ಮಲ್ಲಿಕಾರ್ಜುನ ಖರ್ಗೆ ನಮ್ಮ ಪಕ್ಷದ ಸರ್ವೋಚ್ಛ ನಾಯಕರು. ಕೆಲಸವಿದ್ದಾಗ ಅವರನ್ನು ಭೇಟಿಯಾಗುವುದು ಸಹಜ. ಸತೀಶ ಜಾರಕಿಹೊಳಿ ಅವರು ಖರ್ಗೆ ಭೇಟಿಯಾಗಿದ್ದರಲ್ಲಿ ಏನೂ ವಿಶೇಷ ಇಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ಸಚಿವ ಸತೀಶ ಜಾರಕಿಹೊಳಿ ಹೆಸರು ಕೇಳಿಬರುತ್ತಿರುವ ವಿಚಾರವಾಗಿ, ಇಲ್ಲಿ ಶುಕ್ರವಾರ ಸುದ್ದಿಗಾರರಿಗೆ ಅವರು ಹೀಗೆ ಪ್ರತಿಕ್ರಿಯಿಸಿದರು.
‘ಯಾರೇ ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿದ್ದರೂ, ನಮ್ಮ ಪಕ್ಷದ ಹೈಕಮಾಂಡ್‌ನವರು ತೀರ್ಮಾನ ಕೈಗೊಳ್ಳುತ್ತಾರೆ. ವರಿಷ್ಠರ ನಿರ್ದೇಶನ ಮತ್ತು 136 ಜನ ಶಾಸಕರ ಇಚ್ಛೆ ಮೇರೆಗೆ ಮುಖ್ಯಮಂತ್ರಿ ಆಯ್ಕೆ ನಡೆಯುತ್ತದೆ’ ಎಂದರು.
‘ಗೃಹಲಕ್ಷ್ಮಿ ಯೋಜನೆ ಟೀಕಿಸಿದ ಬಿಜೆಪಿಗರು, ಹರಿಯಾಣದಲ್ಲಿ ಗೃಹಲಕ್ಷ್ಮಿ ಮಾದರಿ ಯೋಜನೆ ಘೋಷಿಸಿದ್ದಾರೆ. ಕಾಂಗ್ರೆಸ್‌ನ ಎಲ್ಲ ಕಾರ್ಯಕ್ರಮಗಳನ್ನು ಆರಂಭದಲ್ಲಿ ಟೀಕಿಸುವ ಬಿಜೆಪಿಯವರು, ನಂತರ ಅದೇ ಮಾದರಿ ಯೋಜನೆ ಅನುಷ್ಠಾನಗೊಳಿಸುವ ಹವ್ಯಾಸ ರೂಢಿಸಿಕೊಂಡಿದ್ದಾರೆ. ಕಾಂಗ್ರೆಸ್‌ನ ಕಾಪಿ ರೈಟ್ ತೆಗೆದುಕೊಂಡಂತೆ ವರ್ತಿಸುತ್ತಾರೆ. ಕರ್ನಾಟಕದ ಮಾದರಿ ಗುಜರಾತ್ ಮಾದರಿ ಹಿಂದಿಕ್ಕಿ ಹೋಗುತ್ತಿರುವುದಕ್ಕೆ ಹೆಮ್ಮೆ ಇದೆ’ ಎಂದು ಹರ್ಷ ವ್ಯಕ್ತಪಡಿಸಿದರು.
‘ಗೃಹಲಕ್ಷ್ಮಿ ಯೋಜನೆಯಡಿ ಜುಲೈ, ಅಗಸ್ಟ್ ತಿಂಗಳ ಕಂತಿನ ಹಣ ಅ.7, 9ರಂದು ಜಮೆ ಆಗಲಿದೆ. ಸುಮಾರು ₹5 ಸಾವಿರ ಕೋಟಿ ಮೊತ್ತವನ್ನು ಗೃಹಲಕ್ಷ್ಮಿ ಯೋಜನೆಗೆ ಸಂದಾಯ ಮಾಡಿದ್ದು, ಈವರೆಗೆ 13 ತಿಂಗಳ ಹಣ ನೀಡಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಬೆಳಗಾವಿ ಸಚಿವರೊಬ್ಬರು ಭೂಕಬಳಿಕೆ ಮಾಡಿದ್ದಾರೆ’ ಎಂಬ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಆರೋಪಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮಿ, ‘ಆಧಾರ ರಹಿತವಾಗಿರುವ ಹೇಳಿಕೆಗೆ ಉತ್ತರಿಸುವ ಅಗತ್ಯತೆ ಇಲ್ಲ. ಯಾವಾಗ ಆಧಾರ ಸಹಿತವಾಗಿ ಮಾತನಾಡುತ್ತಾರೆಯೋ, ಆಗ ಉತ್ತರಿಸುತ್ತೇನೆ’ ಎಂದು ತಿರುಗೇಟು ಕೊಟ್ಟರು.
‘ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರನ್ನು ಹೊರಗಿಟ್ಟು ಸಭೆ ಮಾಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ಹಾಗಾಗಿ ಆ ವಿಚಾರವಾಗಿ ಮಾತನಾಡುವುದು ಸೂಕ್ತವಲ್ಲ. ಡಿಸಿಸಿ ಬ್ಯಾಂಕ್ ಚುನಾವಣೆಗೆ ಇನ್ನೂ ಒಂದು ವರ್ಷ ಸಮಯವಿದೆ. ಎಲ್ಲರಂತೆ ನಾವೂ ತಯಾರಿ ಮಾಡುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.