ಬೆಳಗಾವಿ: ‘ಉಪಚುನಾವಣೆ ಬಳಿಕ ರಾಜ್ಯದಲ್ಲಿಮಹಾರಾಷ್ಟ್ರದ ರೀತಿಯಲ್ಲಿಯೇ ರಾಜಕೀಯ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ. ಕೆಲವು ಶಾಸಕರು ಪಕ್ಷಾಂತರ ಮಾಡಲಿದ್ದಾರೆ ಬದಲಾಯಿಸಲಿದ್ದಾರೆ’ ಎಂದು ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ ಭವಿಷ್ಯ ನುಡಿದರು.
ಇಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಉಪಚುನಾವಣೆ ನಂತರ ಪಕ್ಷಾಂತರ ಮಾಡುವ ಶಾಸಕರಿಗೆ ಬಹಳ ಬೇಡಿಕೆ ಬರಲಿದೆ. ಈ ನಿಟ್ಟಿನಲ್ಲಿ ಚರ್ಚೆಗಳೂ ನಡೆದಿವೆ’ ಎಂದರು.
‘ಉಪಚುನಾವಣೆಯಲ್ಲಿ ಕಾಂಗ್ರೆಸ್ 10 ಹಾಗೂ ಜೆಡಿಎಸ್ 2ರಲ್ಲಿ ಜಯ ಗಳಿಸಲಿವೆ. ಈ ಫಲಿತಾಂಶ ರಾಜ್ಯದಲ್ಲಿ ಮತ್ತೆ ಅತಂತ್ರ ಸ್ಥಿತಿ ನಿರ್ಮಾಣವಾಗಲು ಕಾರಣವಾಗಲಿದೆ. ಒಂದಿಷ್ಟು ಶಾಸಕರು ಪಕ್ಷ ಬದಲಾಯಿಸಲು ಮುಂದಾಗಿದ್ದಾರೆ’ ಎಂದು ತಿಳಿಸಿದರು.
‘ನಾನು ಯಾವುದೇ ಕಾರಣಕ್ಕೂ ಗೋಕಾಕದಿಂದ ಸ್ಪರ್ಧಿಸುವುದಿಲ್ಲ. ಯಮಕನಮರಡಿ ಕ್ಷೇತ್ರ ಬದಲಾಯಿಸುವ ಪ್ರಶ್ನೆಯೇ ಇಲ್ಲ. ಕಳೆದ ಚುನಾವಣೆಯಲ್ಲಿ ಪ್ರಚಾರ ನಡೆಸದಿದ್ದರೂ ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸಿದ್ದಾರೆ. ಹೀಗಾಗಿ, ಕ್ಷೇತ್ರ ಬಿಡುವ ಅಲೋಚನೆಯನ್ನೂ ಮಾಡುವುದಿಲ್ಲ’ ಎಂದು ವದಂತಿಗಳಿಗೆ ತೆರೆ ಎಳೆದರು.
‘ಗೋಕಾಕದಿಂದ ಲಖನ್ ಜಾರಕಿಹೊಳಿ ನಿಲ್ಲಿಸಲು ನಿರ್ಧರಿಸಲಾಗಿದೆ. ಪ್ರಚಾರ ಕೂಡ ಮಾಡುತ್ತಿದ್ದೇವೆ. ಅವರನ್ನು ಶಾಸಕರನ್ನಾಗಿ ಮಾಡುವುದೇ ನಮ್ಮ ಗುರಿ’ ಎಂದು ಹೇಳಿದರು.
‘ಗೋಕಾಕದಲ್ಲಿ ಸಿದ್ಧತೆ ಮಾಡಿಕೊಳ್ಳಿ ಎಂದು ಸಿದ್ದರಾಮಯ್ಯ ಕೂಡ ತಿಳಿಸಿದ್ದಾರೆ. ಟಿಕೆಟ್ ಅಂತಿಮವಾಗಿದೆ. ಬಿಜೆಪಿಯ ಅಶೋಕ ಪೂಜಾರಿ ಅವರನ್ನು ಕರೆತರುವ ಕುರಿತು ಕೂಡ ಚರ್ಚೆಯಾಗಿದೆ. ಆದರೆ, ಅವರು ನನ್ನೊಂದಿಗೆ ಮಾತನಾಡಿಲ್ಲ. ಈ ವಿಷಯದಲ್ಲಿ ಮಾಜಿ ಶಾಸಕ ಅಶೋಕ ಪಟ್ಟಣ ಅವರ ದ್ವೇಷದ ರಾಜಕಾರಣ ಕುರಿತು ಸದ್ಯಕ್ಕೆ ಚರ್ಚಿಸುವುದಿಲ್ಲ. ನಾನು ಕ್ಷೇತ್ರದ ಕೆಲಸದಲ್ಲಿ ಇದ್ದಿದ್ದರಿಂದ ಬೆಂಗಳೂರಿನಲ್ಲಿ ನಡೆದ ಪಕ್ಷದ ಸಭೆಗೆ ಹೋಗಲಾಗಲಿಲ್ಲ. ಬೆಳಗಾವಿ ಕಾಂಗ್ರೆಸ್‌ನಲ್ಲಿ ಮೊದಲಿನಿಂದಲೂ ಭಿನ್ನಮತವಿದೆ’ ಎಂದರು.
ಮಹಾರಾಷ್ಟ್ರದ ಚಂದಗಡದ ಎನ್‌ಸಿಪಿ ಶಾಸಕ ರಾಜೇಶ್ ಪಾಟೀಲ ತಮ್ಮನ್ನು ಭೇಟಿಯಾದ ಕುರಿತು ಪ್ರತಿಕ್ರಿಯಿಸಿದ ಅವರು, ‘ನಾವು ಮೊದಲಿನಿಂದಲೂ ರಾಜೇಶ್‌ಗೆ ಬೆಂಬಲ ಕೊಟ್ಟಿದ್ದೇವೆ. ಈಚೆಗೆ ನಡೆದ ಚುನಾವಣೆಯಲ್ಲೂ ನಮ್ಮವರು ಅವರ ಪರ ಪ್ರಚಾರ ಮಾಡಿದ್ದಾರೆ. ನಾವು ಅಲ್ಲಿ ರಮೇಶ ಜಾರಕಿಹೊಳಿ ಅಳಿಯ ವಿನಾಯಕ ಪಾಟೀಲ ವಿರುದ್ಧ ಕೆಲಸ ಮಾಡಿದ್ದೇವೆ. ಹೀಗಾಗಿ, ಕೃತಜ್ಞತೆ ಸಲ್ಲಿಸಲು ಅವರು ಬಂದಿದ್ದರು’ ಎಂದು ತಿಳಿಸಿದರು.
‘ಮಹಾರಾಷ್ಟ್ರದಲ್ಲಿ ಶಿವಸೇನೆ ಗಟ್ಟಿಯಾಗಿರುವುದರಿಂದ ಬಿಜೆಪಿಯ ಆಪರೇಷನ್ ಕಮಲದ ಅಟ ನಡೆಯಲಿಲ್ಲ. ಕಾಂಗ್ರೆಸ್ ಅಲ್ಲಿ ಎನ್‌ಸಿಪಿ ಸರ್ಕಾರ ರಚನೆಗೆ ಬೆಂಬಲ ನೀಡುತ್ತದೆಯೇ ಹೊರತು ಶಿವಸೇನೆಗಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.