ಬೆಳಗಾವಿ: ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ. ಇದಕ್ಕೆ ಪೂರಕವಾಗಿ ಜಿಲ್ಲೆಯಲ್ಲಿ 12ರಿಂದ 13 ಕ್ಷೇತ್ರಗಳಲ್ಲಿ ಗೆಲ್ಲಲು ತಯಾರಿ ನಡೆಸಿದ್ದೇವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ತಿಳಿಸಿದರು.
ಇಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿದ ಅವರು, ‘ನಮ್ಮ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಗೋವಾದಲ್ಲಿ ಕಳೆದ ಸಲ 17 ಸೀಟು ಗೆಲ್ಲಲಾಗಿತ್ತು. ಇನ್ನೂ ಸ್ವಲ್ಪ ಆಸಕ್ತಿ ವಹಿಸಿದ್ದರೆ ಸರ್ಕಾರ ರಚಿಸಬಹುದಿತ್ತು. ಆದರೆ, ಕಾರಣಾಂತರಗಳಿಂದ ಸರ್ಕಾರ ರಚಿಸಲಿಲ್ಲ. ಕಾಂಗ್ರೆಸ್ ಮತ ಬ್ಯಾಂಕ್ ಅಲ್ಲಿದೆ. ಆದ್ದರಿಂದ ಈ ಬಾರಿ ಬಹುಮತದಿಂದ ಗೆಲುವು ಸಾಧಿಸಲಿದ್ದೇವೆ’ ಎಂದು ಹೇಳಿದರು.
‘ಬಿಜೆಪಿ ಬೆಳಗಾವಿ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಶಶಿಕಾಂತ ಪಾಟೀಲ ವಾಟ್ಸ್‌ಆ್ಯಪ್ ಗ್ರುಪ್‌ನಲ್ಲಿ ಅಶ್ಲೀಲ ಫೋಟೊ ಹಂಚಿಕೊಂಡಿದ್ದು ಖಂಡನೀಯ. ಅದು ಅಪರಾಧವೂ ಹೌದು. ಅವರ ವಿರುದ್ಧ ಕ್ರಮ ಜರುಗಿಸುವಂತೆ ಈಗಾಗಲೇ ಪಕ್ಷದಿಂದ ಪ್ರತಿಭಟನೆ ನಡೆಸಿದ್ದೇವೆ. ಜಿಲ್ಲಾಧಿಕಾರಿ ಕಚೇರಿಗೆ ದೂರು ಕೊಡಲಾಗಿದೆ. ಸೈಬರ್ ಕ್ರೈಂ ಪೊಲೀಸ್ ಠಾಣೆಗೂ ದೂರು ಸಲ್ಲಿಸಲಾಗುವುದು’ ಎಂದರು.
‘ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ಬಿಟ್ಟು ಎಲ್ಲಿಯೂ ಹೋಗಲ್ಲ. ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದಾರೆ. ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿಲ್ಲ. ನಮ್ಮ ಸರ್ಕಾರವಿದ್ದಾಗ ಮೂರು, ನಾಲ್ಕು ಜನ ಅಲ್ಪಸಂಖ್ಯಾತ ಸಮಾಜದವರೇ ಮಂತ್ರಿಗಳಾಗಿದ್ದರು. ನಾಮನಿರ್ದೇಶನ ಸಂದರ್ಭದಲ್ಲೂ ಆದ್ಯತೆ ಕೊಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.
‘ರಾಯಚೂರಿನಲ್ಲಿ ಗಣರಾಜ್ಯೋತ್ಸವಂದು ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಫೋಟೊಗೆ ಅವಮಾನ ಮಾಡಿರುವ ಅಲ್ಲಿನ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರ ನಡೆ ಸರಿಯಲ್ಲ. ಇದರಿಂದ ಜನರಿಗೆ ತಪ್ಪು ಸಂದೇಶ ಹೋಗುತ್ತದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.
‘ಮಹದಾಯಿ ಯೋಜನೆ ಅನುಷ್ಠಾನ ನಮ್ಮಿಂದ ಸಾಧ್ಯವಾಗಲಿಲ್ಲ. ಅದನ್ನು ಒಪ್ಪುತ್ತೇವೆ. ಹಾಗೆಂದು ಈ ಸರ್ಕಾರದವರೂ ಮಾಡಬಾರದೇ? ಏನೇ ಕಾನೂನು ತೊಡಕುಗಳಿದ್ದರೂ ಬಗೆಹರಿಸುವುದು ಸರ್ಕಾರದ ಜವಾಬ್ದಾರಿ. ಆ ಕೆಲಸವನ್ನು ಬಿಜೆಪಿಯವರು ಮಾಡಲಿ. ಇದಕ್ಕಾಗಿ ನಾವು ಹೋರಾಟ ನಡೆಸುವುದನ್ನು ಬಿಡುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.
ಪಕ್ಷದ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ ಮತ್ತು ಗೋವಾ ಚುನಾವಣಾ ವೀಕ್ಷಕ ಸುನೀಲ ಹನಮನ್ನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.