ADVERTISEMENT

ಸವದತ್ತಿ: ಅಭಿನವಕುಮಾರ ಚನ್ನಬಸವ ಶ್ರೀ ಅಂತಿಮ ಯಾತ್ರೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 23:28 IST
Last Updated 8 ನವೆಂಬರ್ 2024, 23:28 IST
ಅಭಿನವ ಕುಮಾರ ಚನ್ನಬಸವ ಶ್ರೀ
ಅಭಿನವ ಕುಮಾರ ಚನ್ನಬಸವ ಶ್ರೀ   

ಸವದತ್ತಿ: ತಾಲ್ಲೂಕಿನ ನವಿಲುತೀರ್ಥ, ವಟ್ನಾಳ– ಗೊರವನಕೊಳ್ಳದ ಒಡಕ ಹೊಳಿಮಠ ಹಾಗೂ ಜಮಖಂಡಿಯ ಓಲೇಮಠದ ಪೀಠಾಧಿಪತಿ ಅಭಿನವ ಕುಮಾರ ಚನ್ನಬಸವ ಸ್ವಾಮೀಜಿ (62) ಗುರುವಾರ ತಡರಾತ್ರಿ ಗೊರವನಕೊಳ್ಳ ಮಠದಲ್ಲಿ ಲಿಂಗೈಕ್ಯರಾದರು.

ಪಾರ್ಥಿವ ಶರೀರವನ್ನು ಶುಕ್ರವಾರ ‍ಪಟ್ಟಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ, ಅಂತ್ಯಸಂಸ್ಕಾರಕ್ಕಾಗಿ ಜಮಖಂಡಿ ಓಲೇಮಠಕ್ಕೆ ಬೀಳ್ಕೊಡಲಾಯಿತು.

‌ವಟ್ನಾಳದಿಂದ ಆಗಮಿಸಿದ ಶ್ರೀಗಳ ಪಾರ್ಥಿವ ಶರೀರವನ್ನು ಪ್ರಥಮವಾಗಿ ಇಲ್ಲಿನ ಕಲ್ಮಠದಲ್ಲಿರಿಸಿ, ಹಲವು ಶ್ರೀಗಳ ಸಮ್ಮುಖದಲ್ಲಿ ಪೂಜಾ ವಿಧಿವಿಧಾನ ನೆರವೇರಿಸಲಾಯಿತು. ನಂತರ ಜಮಖಂಡಿ ಓಲೇಮಠಕ್ಕೆ ಬೀಳ್ಕೊಡಲಾಯಿತು. ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟಬಲ್ ಟ್ರಸ್ಟ್‌ನಿಂದ ಶೀಥಲ ಪೆಟ್ಟಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ADVERTISEMENT

‌ಶಿಗ್ಗಾವಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಕನ್ನಡ, ಸಂಸ್ಕೃತ, ಇಂಗ್ಲಿಷ, ಹಿಂದಿ ಭಾಷೆಗಳಲ್ಲಿ ಪಂಡಿತರಾಗಿದ್ದರು. ನಾಡಿನಾದ್ಯಂತ ಸಾವಿರಾರು ಪ್ರವಚನಗಳನ್ನು ನೀಡಿದ್ದರು. ಅವರು ಕಲ್ಮಠದಲ್ಲಿ ನಡೆಸಿದ ‘ಬಸವ ಪುರಾಣ ಪ್ರವಚನ’ವು ಇತಿಹಾಸದ ಪುಟ ಸೇರಿದೆ.

1962ರ ಜೂನ್ 15ರಂದು ಬೀದರಿನಲ್ಲಿ ಜನಸಿದ ಶ್ರೀಗಳು ವಾರಾಣಸಿ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌, ತಿರುಪತಿ ವಿಶ್ವವಿದ್ಯಾಲಯದಿಂದ ಸಂಸ್ಕೃತ ಸ್ನಾತಕೋತ್ತರ ಪದವಿ, ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದಿದ್ದರು. ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಶಿವಬಸವ ಶ್ರೀಗಳು 1985ರಲ್ಲಿ ಇವರನ್ನು ಸವದತ್ತಿಯ ಕಲ್ಮಠಕ್ಕೆ ಪಟ್ಟಾಧಿಕಾರಿಯಾಗಿ ನೇಮಿಸಿದ್ದರು. ಸಾಹಿತ್ಯ, ಕಾವ್ಯ, ವಿಮರ್ಶೆ, ಸಂಶೋಧನೆ, ಪ್ರವಾಸ ಕಥನ, ಅಧ್ಯಾತ್ಮ ಚಿಂತನ ಸೇರಿ 120 ಗ್ರಂಥ ರಚಿಸಿದ್ದಾರೆ.

ಸವದತ್ತಿಯಲ್ಲಿ ಶುಕ್ರವಾರ ಅಭಿನವ ಕುಮಾರ ಚನ್ನಬಸವ ಶ್ರೀಗಳ ಅಂತಿಮ ದರ್ಶನ ಪಡೆಯಲು ಅಪಾರ ಜನ ಸೇರಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.