ಸವದತ್ತಿ: ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕಿನ ಹಿಟ್ಟಣಗಿ, ಸುತಗಟ್ಟಿ, ಗೋವನಕೊಪ್ಪ ಕೆ.ವೈ, ಭಮಗುಂಡಿಕೊಪ್ಪ ಮತ್ತು ಏಣಗಿ ಗ್ರಾಮಸ್ಥರು ಹಿಟ್ಟಣಗಿ ಗ್ರಾಮದಿಂದ ಪಾದಯಾತ್ರೆ ನಡೆಸಿ ಸುತಗಟ್ಟಿ ಕ್ರಾಸ್‌ನಲ್ಲಿ ಸುಮಾರು 5 ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟಿಸಿದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ, ಜಿಲ್ಲಾ ಪಂಚಾಯಿತಿಯಿಂದ ನಡೆದಿರುವ ₹ 60 ಲಕ್ಷ ವೆಚ್ಚದ ರಸ್ತೆ ಕಾಮಗಾರಿ ಸಂಪೂರ್ಣ ಹದಗೆಟ್ಟಿದೆ. ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರನ ವಿರುದ್ಧ ಕಠಿಣ ಕ್ರಮ ಕೈಗೊಂಡು ಉತ್ತಮ ರಸ್ತೆ ನಿರ್ಮಿಸಬೇಕು. 5 ಕಿ.ಮೀ ರಸ್ತೆ ಸಂಚಾರಕ್ಕೆ ಯೋಗ್ಯವಿಲ್ಲ. ಆದಾಗ್ಯೂ ಪಿಡಬ್ಲ್ಯೂಡಿ ಇಲಾಖೆಯಿಂದ ಕ್ರಮ ಜರುಗಿಸಿಲ್ಲ. ರಸ್ತೆ ತಡೆ ನಡೆಸುವ ಸುದ್ದಿಯಿಂದ ಕಾಮಗಾರಿ ಆರಂಭಿಸಲು ಮುಂದಾಗಿದ್ದಾರೆಎಂದರು.
ನೆಟ್‍ವರ್ಕ್ ಇಲ್ಲದೆ ಮಕ್ಕಳು ಆನ್‍ಲೈನ್ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಪಡಿತರ ವಿತರಣೆಯೂ ಸರಿಯಾಗಿ ಆಗುತ್ತಿಲ್ಲ. ಮಲಪ್ರಭಾ ಹಿನ್ನೀರಿನ ರೈತರ ಜಮೀನಿನಲ್ಲಿ ನೀರಾವರಿ ನಿಗಮದ ಹೆಸರಿದೆ. ನೋಟಿಸ್, ಪರಿಹಾರ ನೀಡದೇ ಅನ್ಯಾಯವೆಸಗಲಾಗಿದೆ. ವಿದ್ಯುತ್ ಅಭಾವದ ಕಾರಣ ರೈತರಿಗೆ ತೊಂದರೆ ಆಗಿದೆ ಎಂದರು.
ಚಿಕ್ಕ ಮಕ್ಕಳು ಸಹ ಉತ್ಸಾಹದಿಂದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬಸ್ ತಡೆಯಲೆತ್ನಿಸದರು. ಅಲ್ಲಲ್ಲಿ ಪ್ರತಿಭಟನಾ ನಿರತರೊಟ್ಟಿಗೆ ಸವಾರರ ಮಾತಿನ ಚಕಮಕಿ ನಡೆಯಿತು. ಟೈರ್‌ಗೆ ಬೆಂಕಿಯಿಡಲು ಯತ್ನಿಸಿದ ಯುವಕನ್ನು ಪಿಎಸೈ ಶಿವಾನಂದ ಗುಡಗನಟ್ಟಿ ತಡೆದರು.
ಅಲ್ಲಿಸಾಬ ನದಾಫ್, ಸುರೇಶ ಸಂಪಗಾವಿ, ಈರನಗೌಡ ಪಾಟೀಲ, ಬಸವರಾಜ ಹರ್ಲಾಪೂರ, ಮುದಕಪ್ಪ ಹೊಸೂರು, ರಿಯಾಜ್ ಪಠಾದ, ರುದ್ರಗೌಡ ಮಲ್ಲಾಪೂರ, ಸಿದ್ದನಗೌಡ ಪಾಟೀಲ, ಮಲೀಕ ದೊಡವಾಡ ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.