ADVERTISEMENT

ದೇಶಿ ಸಂಸ್ಕೃತಿ ಉಳಿಸಿ: ಸಂಸದ ಜಗದೀಶ ಶೆಟ್ಟರ್

ವೀರಭದ್ರೇಶ್ವರ ಜಯಂತಿ, ಧರ್ಮಸಭೆ ಸಮಾರಂಭ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2024, 14:26 IST
Last Updated 10 ಸೆಪ್ಟೆಂಬರ್ 2024, 14:26 IST
ರಾಮದುರ್ಗ ತಾಲ್ಲೂಕಿನ ಗೊಡಚಿ ಕ್ಷೇತ್ರದಲ್ಲಿ ರೇಣುಕಾಚಾರ್ಯ ಮಂದಿರ, ಗುರುಕುಲ ಮತ್ತು ಜ್ಞಾನ ಮಂಟಪ ಕಟ್ಟಡಕ್ಕೆ ಬೆಳಗಾವಿ ಸಂಸದ ಜಗದೀಶ ಶೆಟ್ಟರ್‌ ಸಸಿಗೆ ನೀರುಣಿಸಿ ಅಡಿಗಲ್ಲು ಹಾಕಿದರು
ರಾಮದುರ್ಗ ತಾಲ್ಲೂಕಿನ ಗೊಡಚಿ ಕ್ಷೇತ್ರದಲ್ಲಿ ರೇಣುಕಾಚಾರ್ಯ ಮಂದಿರ, ಗುರುಕುಲ ಮತ್ತು ಜ್ಞಾನ ಮಂಟಪ ಕಟ್ಟಡಕ್ಕೆ ಬೆಳಗಾವಿ ಸಂಸದ ಜಗದೀಶ ಶೆಟ್ಟರ್‌ ಸಸಿಗೆ ನೀರುಣಿಸಿ ಅಡಿಗಲ್ಲು ಹಾಕಿದರು   

ರಾಮದುರ್ಗ: ‘ಪಾಶ್ಚಿಮಾತ್ಯ ಸಂಸ್ಕೃತಿಗೆ ವಾಲಿಕೊಂಡಿರುವ ಯುವ ಜನಾಂಗವನ್ನು ಮರಳಿ ದೇಶೀಯ ಸಂಸ್ಕೃತಿಗೆ ತರುವ ಕೆಲಸ ಧಾರ್ಮಿಕ ಕೇಂದ್ರಗಳಿಂದ ನಡೆಯಬೇಕಿದೆ’ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

ತಾಲ್ಲೂಕಿನ ಗೊಡಚಿಯಲ್ಲಿ ಜಗದ್ಗುರು ರೇಣುಕಾಚಾರ್ಯ ಮಂದಿರ, ರೇಣುಕಾಚಾರ್ಯ ಗುರುಕುಲ, ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಜ್ಞಾನ ಮಂಟಪ ಕಟ್ಟಡದ ಶಂಕುಸ್ಥಾಪನೆ, ವೀರಭದ್ರೇಶ್ವರ ಜಯಂತಿ ಮತ್ತು ಧರ್ಮಸಭೆ ಸಮಾರಂಭವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿ, ಮೊದಲಿನಿಂದಲೂ ರಂಭಾಪುರಿ ಪೀಠ ಧರ್ಮ ಜಾಗೃತಿ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ ಎಂದರು.

ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಮಠಗಳು, ಮಂದಿರಗಳು, ಪೀಠಗಳು ಧಾರ್ಮಿಕ ಜಾಗೃತಿ ಕಾರ್ಯ, ಸಂಸ್ಕಾರ, ಪರಂಪರೆಯಿಂದ ಭಾರತಕ್ಕೆ ವಿಶ್ವಗುರು ಸ್ಥಾನ ತಂದುಕೊಟ್ಟಿವೆ. ಇಂದು ನಾಗರಿಕ ಸಮಾಜ ಅಧುನಿಕತೆಯ ಟಿವಿ ಮತ್ತು ಮೊಬೈಲ್‍ದಿಂದ ಸಂಸ್ಕಾರ ಕಡಿಮೆಯಾಗಿ ಧಾರ್ಮಿಕ ಕ್ಷೇತ್ರಗಳನ್ನು ಕಡೆಗಣಿಸಲಾಗುತ್ತಿದೆ. ಧರ್ಮಗುರುಗಳು ಜನರನ್ನು ಜಾಗೃತಗೊಳಿಸುವ ಅಗತ್ಯ ಇದೆ ಎಂದು ತಿಳಿಸಿದರು.

ADVERTISEMENT

ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಠಗಿಮಠ ಮಾತನಾಡಿ, ಪ್ರತಿಯೊಬ್ಬರು ದುಡಿದು ಗಳಿಸಿರುವ ಸಂಪತ್ತಿನಲ್ಲಿ ಸಾಧ್ಯವಾದಷ್ಟು ಸಮಾಜದ ಋಣ ತೀರಿಸಲು ಮಠ, ಮಂದಿರಗಳಿಗೆ ಮತ್ತು ಸಮಾಜಮುಖಿ ಕಾರ್ಯಗಳಿಗೆ ದಾನ ಕೊಡುವ ಮೂಲಕ ನೆಮ್ಮದಿಯ ಜೀವನ ನಡೆಸಬೇಕು ಎಂದು ತಿಳಿಸಿದರು.

ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯರು, ಬಾಳೆಹೊನ್ನೂರಿನ ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿದರು.

ವೇದಿಕೆಯಲ್ಲಿ ಕಟಕೋಳದ ವೀರಭದ್ರ ಶಿವಯೋಗಿ ಶಿವಾಚಾರ್ಯರು, ಕಿಲ್ಲಾ ತೊರಗಲ್‍ದ ಚನ್ನಮಲ್ಲ ಶಿವಾಚಾರ್ಯರು, ಮುಳ್ಳೂರಿನ ಚಂದ್ರಶೇಖರ ಶಿವಾಚಾರ್ಯರು, ಹೊಸ ಯರಗುದ್ರಿಯ ಸಿದ್ಧಪ್ರಭು ಶಿವಾಚಾರ್ಯರು, ಅಶೋಕ ಪೂಜಾರ, ಟಿ.ಪಿ.ಮುನವಳ್ಳಿ, ಮಾರುತಿ ತುಪ್ಪದ ಇದ್ದರು.

ರಾಜೇಶ ಬೀಳಗಿ ಸ್ವಾಗತಿಸಿದರು. ಮಲ್ಲಣ್ಣ ಯಾದವಾಡ ಪ್ರಾಸ್ತಾವಿಕ ಮಾತನಾಡಿದರು. ಗುರುಪಾದಯ್ಯ ಸಾಲಿಮಠ ನಿರೂಪಿಸಿ, ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.