ADVERTISEMENT

ಬೆಳಗಾವಿ | ಎಸ್‌ಡಿಎ ಆತ್ಮಹತ್ಯೆ: ಎಲ್ಲ ಸಿಬ್ಬಂದಿ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 0:05 IST
Last Updated 10 ನವೆಂಬರ್ 2024, 0:05 IST
<div class="paragraphs"><p>ರುದ್ರಣ್ಣ ಯಡವಣ್ಣವರ</p></div>

ರುದ್ರಣ್ಣ ಯಡವಣ್ಣವರ

   

ಬೆಳಗಾವಿ: ತಹಶೀಲ್ದಾರ್‌ ಕಚೇರಿಯಲ್ಲೇ ಎಸ್‌ಡಿಎ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಮಾಡಿಕೊಂಡು ಐದು ದಿನಗಳಾದರೂ ತಲೆಮರೆಸಿಕೊಂಡ ಮೂವರೂ ಆರೋಪಿಗಳನ್ನು ಪೊಲೀಸರು ಇನ್ನೂ ಬಂಧಿಸಿಲ್ಲ. ಇದರ ಮಧ್ಯೆ, ಕಚೇರಿಯ ಎಲ್ಲ ಸಿಬ್ಬಂದಿ ಮತ್ತು ವಾಟ್ಸ್ಆ್ಯಪ್‌ ಗ್ರೂಪ್‌ನ ಅಡ್ಮಿನ್‌ಗಳನ್ನು ಕರೆದ ವಿಚಾರಣೆ ಮಾಡಲಾಗುತ್ತಿದೆ.

‘ರುದ್ರಣ್ಣ ಅವರ ಮೊಬೈಲ್‌ನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಅಲ್ಲಿನ ಕರೆಗಳು, ವಾಟ್ಸ್‌ಆ್ಯಪ್‌ ಸಂದೇಶ, ವಿಡಿಯೊಗಳು ಸೇರಿ ಪ್ರತಿಯೊಂದನ್ನೂ ತಪಾಸಣೆ ಮಾಡಲಾಗುತ್ತಿದೆ. ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ’ ಎಂದು ನಗರ ಪೊಲೀಸ್‌ ಕಮಿಷನರ್ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಘಟನೆ ನಡೆದ ದಿನ ಶವವನ್ನು ನೋಡಲು ತಹಶೀಲ್ದಾರ್‌ ಬಸವರಾಜ ಅವರು ಕಚೇರಿಗೆ ಬಂದಿದ್ದರು. ಆದರೂ ಅವರನ್ನು ಏಕೆ ಬಂಧಿಸಲಿಲ್ಲ ಎಂಬ ಪ್ರಶ್ನೆ ಸಹಜವಾಗಿದೆ. ಆದರೆ, ಆಗ ಮೃತನ ಕುಟುಂಬದವರು ದೂರು ನೀಡಿರಲಿಲ್ಲ. ಬೆಳಿಗ್ಗೆ ಆತ್ಮಹತ್ಯೆಯಾಗಿದ್ದರೂ ಸಂಜೆಗೆ ದೂರು ನೀಡಿದರು. ಮೇಲಾಗಿ, ಇಂಥ ಪ್ರಕರಣಗಳಲ್ಲಿ ಸಾಕ್ಷ್ಯಗಳನ್ನು ಸಿದ್ಧಪಡಿಸಿಕೊಂಡೇ ಆರೋಪಿಗಳನ್ನು ಬಂಧಿಸಲಾಗುತ್ತದೆ’ ಎಂದು ಅವರು ತಿಳಿಸಿದರು.

‘ತಹಶೀಲ್ದಾರ್ ಬಸವರಾಜ ನಾಗರಾಳ, ಎಫ್‌ಡಿಎ ಅಶೋಕ ಕಬ್ಬಲಿಗೇರ ಮತ್ತು ಸೋಮು ದೊಡವಾಡೆ ಅವರ ಹೆಸರು ಬರೆದಿಟ್ಟು ರುದ್ರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಮೂವರೂ ಪರಾರಿಯಾಗಿದ್ದಾರೆ. ಇವರ ಬೆನ್ನಿಗೆ ಪ್ರಭಾವಿಗಳು ಇದ್ದಾರೆ. ಇದರಿಂದ ಸಾಕ್ಷ್ಯ ನಾಶ ಮಾಡುವ ಆತಂಕ ಇದೆ’ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.