ADVERTISEMENT

ಕಚೇರಿಯಲ್ಲಿ ಎಸ್‌ಡಿಎ ಆತ್ಮಹತ್ಯೆ: ಸವದತ್ತಿಗಿಂತ ಸಾವಿನ ಮನೆ ಹತ್ತಿರವಾಗಿತ್ತೇ?

ಸಂತೋಷ ಈ.ಚಿನಗುಡಿ
Published 12 ನವೆಂಬರ್ 2024, 4:44 IST
Last Updated 12 ನವೆಂಬರ್ 2024, 4:44 IST
ರುದ್ರಣ್ಣ ಯಡವಣ್ಣವರ
ರುದ್ರಣ್ಣ ಯಡವಣ್ಣವರ   

ಬೆಳಗಾವಿ: ಇಲ್ಲಿನ ತಹಶೀಲ್ದಾರ್‌ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಮಾಡಿಕೊಂಡು ವಾರವಾಗಿದೆ. ಈವರೆಗೆ ಆರೋಪಿಗಳ ಬಂಧನವಾಗಿಲ್ಲ. ಅವರ ಸಾವಿಗೆ ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿದೆ. ಆದರೆ, ಸಾವಿಗೆ ವರ್ಗಾವಣೆಯೊಂದೇ ಕಾರಣವೇ ಎಂಬ ಅನುಮಾನ ಕುಟುಂಬದವರನ್ನು ಕಾಡುತ್ತಿದೆ.

‘ತಹಶೀಲ್ದಾರ್‌ ಕಚೇರಿಯಲ್ಲಿ ರುದ್ರಣ್ಣ ಕಾರ್ಯವೈಖರಿ ತೃಪ್ತಿಕರವಾಗಿಲ್ಲ’ ಎಂಬ ಕಾರಣ ನೀಡಿ, ಸವದತ್ತಿಯ ಯಲ್ಲಮ್ಮ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಗೆ ವರ್ಗಾವಣೆ ಮಾಡಲಾಗಿತ್ತು. ನವೆಂಬರ್ 4ರಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ರುದ್ರಣ್ಣ ನವೆಂಬರ್ 5ರಂದು ಸವದತ್ತಿಗೆ ತೆರಳಿ, ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಆದರೆ, ಅದೇ ದಿನ ಬೆಳಿಗ್ಗೆ ತಹಶೀಲ್ದಾರ್‌ ಕೊಠಡಿಯಲ್ಲೇ ಅವರು ನೇಣಿಗೆ ಶರಣಾದರು.

‘ಮಗನಿಗೆ ಸವದತ್ತಿಗೆ ಹೋಗುವುದಕ್ಕಿಂತ ಸಾಯುವುದು ಸುಲಭವಾಗಿತ್ತೇ? ಕೆಲಸ ಬೇಡವಾಗಿದ್ದರೆ ರಾಜೀನಾಮೆ ಕೊಟ್ಟು ಮನೆಯಲ್ಲಿ ಇರುತ್ತಿದ್ದ. ಪತ್ನಿಗೂ ಸರ್ಕಾರಿ ನೌಕರಿ ಇದೆ. ಹೊಟ್ಟೆಗೆ ಬರವಿರಲಿಲ್ಲ. ಹಾಗಿದ್ದ ಮೇಲೆ ಸಾಯುವ ನಿರ್ಧಾರ ಮಾಡಲು ವರ್ಗಾವಣೆಯೊಂದೇ ಕಾರಣವೇ’ ಎಂಬ ಪ್ರಶ್ನೆಗಳು ರುದ್ರಣ್ಣ ತಾಯಿ ಮಲ್ಲವ್ವ ಅವರಿಗೆ ಕಾಡುತ್ತಿವೆ.

ADVERTISEMENT

ಸಚಿವರ ಆಪ್ತ ಸಹಾಯಕ ₹2 ಲಕ್ಷ ಏಕೆ ಪಡೆದಿದ್ದ? ಕೆಲಸ ಮಾಡುವ ಟೇಬಲ್ಲನ್ನು ತಹಶೀಲ್ದಾರ್‌ ಏಕೆ ಕಿತ್ತುಕೊಂಡಿದ್ದರು? ಭೂ ಖಾತೆ ಮಾಡಿ ಕೊಡುವ ವಿಚಾರವಾಗಿ ಬಂದ ಜಗಳ ಏನು? ಮುಂತಾದ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

ನ.4ರ ಸಂಜೆ 7.31ಕ್ಕೆ ತಹಶೀಲ್ದಾರ್‌ ಕಚೇರಿಯ ಸಿಬ್ಬಂದಿಯ ವಾಟ್ಸ್‌ಆ್ಯಪ್‌ ಗ್ರೂಪಿನಲ್ಲಿ ರುದ್ರಣ್ಣ ಸಾವಿನ ಸುಳಿವು ನೀಡಿದ್ದರು. ‘ನನ್ನ ಆತ್ಮಹತ್ಯೆಗೆ ತಹಶೀಲ್ದಾರ್ ಬಸವರಾಜ ನಾಗರಾಳ, ಎಫ್‌ಡಿಎ ಅಶೋಕ ಕಬ್ಬಲಗೇರಿ ಮತ್ತು ಸೋಮು ದೊಡವಾಡೆ ಅವರೇ ಕಾರಣ. ತಹಶೀಲ್ದಾರ್ ಕಿರುಕುಳ ನೀಡುತ್ತಿದ್ದಾರೆ. ಅವರ ಅಕ್ರಮಗಳ ವಿರುದ್ಧ ಎಲ್ಲರೂ ಜತೆಯಾಗಿ ಹೋರಾಡಿ’ ಎಂದು ಮೆಸೇಜ್‌ ಹಾಕಿದ್ದರು. ಅದರೊಂದಿಗೆ ತಮ್ಮ ವರ್ಗಾವಣೆಯ ಕಾಪಿಯನ್ನೂ ಶೇರ್‌ ಮಾಡಿದ್ದರು. ನ.5ರಂದು ಬೆಳಿಗ್ಗೆ ತಹಶೀಲ್ದಾರ್‌ ಕಚೇರಿಗೆ ಬಂದು ಆತ್ಮಹತ್ಯೆ ಮಾಡಿಕೊಂಡರು. 12 ತಾಸುಗಳ ಸಮಯವಿದ್ದರೂ ಯಾರೊಬ್ಬರೂ ಅವರನ್ನು ಉಳಿಸುವ ಗೋಜಿಗೆ ಹೋಗಲಿಲ್ಲ ಎಂಬುದೇ ಅಚ್ಚರಿ.

ಈ ಮೆಸೇಜ್‌ ಹಾಕಿದ ಬಳಿಕ ತಹಶೀಲ್ದಾರರು ರುದ್ರಣ್ಣನ್ನು ವಾಟ್ಸ್‌ಆ್ಯಪ್‌ ಗ್ರೂಪಿನಿಂದ ಹೊರಹಾಕಿದರು. ಆದರೆ, ಕನಿಷ್ಠ ಸೌಜನ್ಯಕ್ಕೂ ಪೊಲೀಸರಿಗೆ ಮಾಹಿತಿ ನೀಡಲಿಲ್ಲ ಎಂಬುದು ಕುಟುಂಬದವರ ದೂರು.

ಎಲ್ಲಿದ್ದಾರೆ ಆರೋಪಿಗಳು?: ರುದ್ರಣ್ಣ ಸತ್ತ ಬಳಿಕ ಸ್ವತಃ ಆರೋಪಿಗಳು ಕಚೇರಿಗೆ ಬಂದು ಶವ ನೋಡಿ ಹೋದರು. ಸ್ಥಳದಲ್ಲಿದ್ದ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಳ್ಳಲಿಲ್ಲ. ಮೂವರೂ ತಲೆಮರೆಸಿಕೊಂಡು ವಾರ ಕಳೆದಿದೆ.

ಜನಪ್ರತಿನಿಧಿಗಳು, ರಾಜಕಾರಣಿ ಗಳು ಕುಟುಂಬದವರಿಗೆ ಸಾಂತ್ವನ ಹೇಳಿ ಹೋಗುತ್ತಿದ್ದಾರೆ ಹೊರತು; ನ್ಯಾಯ ಕೊಡಿಸುವ ಇರಾದೆ ತೋರುತ್ತಿಲ್ಲ ಎಂಬುದು ಅವರ ಅಳಲು.

‘ಸಾಕ್ಷ್ಯ ಸಂಗ್ರಹ ನಡೆದಿದೆ’

‘ರುದ್ರಣ್ಣ ಕುಟುಂಬದವರು ಅಂದು ಬೇಗನೇ ದೂರು ನೀಡಲಿಲ್ಲ. ಹಾಗಾಗಿ, ಆರೋಪಿಗಳನ್ನು ವಶಕ್ಕೆ ಪಡೆಯಲು ಆಗಲಿಲ್ಲ. ಈಗ ಅವರ ಪತ್ತೆಗೆ ಜಾಲ ಬೀಸಲಾಗಿದೆ. ರುದ್ರಣ್ಣನ ಮೊಬೈಲ್‌ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಅಲ್ಲಿನ ಕರೆಗಳು, ವಾಟ್ಸ್‌ಆ್ಯಪ್‌ ಸಂದೇಶ, ವಿಡಿಯೊಗಳು ಸೇರಿ ಪ್ರತಿಯೊಂದನ್ನೂ ತಪಾಸಣೆ ಮಾಡಲಾಗುತ್ತಿದೆ. ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ’ ಎಂದು ನಗರ ಪೊಲೀಸ್‌ ಕಮಿಷನರ್ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಆರೋಪಿಗಳನ್ನು ಪರಾರಿಯಾಗಲು ಬಿಟ್ಟಿದ್ದರಿಂದ ಸಾಕ್ಷ್ಯ ನಾಶವಾಗಿರುವ ಸಾಧ್ಯತೆ ಹೆಚ್ಚು’ ಎಂದು ಬಿಜೆಪಿ ಮುಖಂಡರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.