ADVERTISEMENT

ಸಣ್ಣ ಕತೆಗಳನ್ನು ಕೊಟ್ಟ ಕೀರ್ತಿ ಭಾರತದ್ದು :ಡಾ.ಚಂದ್ರಶೇಖರ ಕಂಬಾರ ಅಭಿಮತ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 19:45 IST
Last Updated 24 ಡಿಸೆಂಬರ್ 2019, 19:45 IST
ಅಥಣಿಯಲ್ಲಿ ಮಂಗಳವಾರ ನಡೆದ ಸಣ್ಣ ಕತೆಗಳ ಕುರಿತ ವಿಚಾರಸಂಕಿರಣವನ್ನು ಡಾ.ಚಂದ್ರಶೇಖರ ಕಂಬಾರ ಉದ್ಘಾಟಿಸಿದರು
ಅಥಣಿಯಲ್ಲಿ ಮಂಗಳವಾರ ನಡೆದ ಸಣ್ಣ ಕತೆಗಳ ಕುರಿತ ವಿಚಾರಸಂಕಿರಣವನ್ನು ಡಾ.ಚಂದ್ರಶೇಖರ ಕಂಬಾರ ಉದ್ಘಾಟಿಸಿದರು   

ಅಥಣಿ: ‘ಆಳವಾದ ನೆನಪು, ಶ್ರೇಷ್ಠ ಕನಸುಗಳಿದ್ದರೆ ಮಾತ್ರ ಆ ಭಾಷೆ ಹಾಗೂ ಜನಾಂಗ ಆಳವಾಗಿ ಬೇರೂರಿ ನೆಲೆಯೂರಬಲ್ಲದು’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಹೇಳಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಜೆ.ಎ. ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಇಲ್ಲಿ ಮಂಗಳವಾರ ಆಯೋಜಿಸಿದ್ದ ‘ಕನ್ನಡ ಸಣ್ಣ ಕತೆಗಳ ಉಗಮ ಮತ್ತು ಬೆಳವಣಿಗೆ’ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಪಾಶ್ಚಿಮಾತ್ಯ ಕತೆಗಳಲ್ಲಿ ದುರಂತ, ಸುಖಾಂತ್ಯದಲ್ಲಿ ಕೊನೆ ಕಾಣುವ ದೃಶ್ಯಗಳು ಇರುತ್ತವೆ. ಆದರೆ, ನಮ್ಮ ಭಾರತೀಯರು ರಚಿಸಿರುವ ಸಣ್ಣ ಕತೆಗಳು ಸಮಸ್ಯೆಗಳನ್ನು ಬಿಂಬಿಸುವ ಜೊತೆಗೆ ಪರಿಹಾರ ಕಂಡುಕೊಂಡು ಸುಖಾಂತ್ಯವಾಗುತ್ತವೆ. ಬ್ರಿಟಿಷರು ಸೂರ್ಯ ಮುಳಗದ ಸಾಮಾಜ್ರವನ್ನು ಕಟ್ಟಲು ಹೊರಟಾಗ ಧರ್ಮ ಪ್ರಚಾರ ಮಾಡುತಿದ್ದರು. ಆಗ ನಮ್ಮ ದೇಶದ ಪಂಚತಂತ್ರದ ಕತೆಗಳ ಪುಸ್ತಕವನ್ನು ಎಲ್ಲರಿಗೂ ತೋ‌ರಿಸುತ್ತಿದ್ದರು. ಈ ನಿಟ್ಟಿನಲ್ಲಿ ನೋಡಿದರೆ, ಪ್ರಪಂಚಕ್ಕೆ ಪ್ರಥಮವಾಗಿ ಸಣ್ಣ ಕತೆಗಳನ್ನು ಕೊಟ್ಟ ಕೀರ್ತಿ ಭಾರತದ್ದಾಗಿದೆ’ ಎಂದರು.

ADVERTISEMENT

ಅತ್ಯುತ್ತಮ ಪ್ರಕಾರ:

‘ಸಣ್ಣ ಕತೆಗಳು ಸಾಹಿತ್ಯದಲ್ಲಿ ಅತ್ಯುತ್ತಮ ಪ್ರಕಾರವಾಗಿವೆ. ಕತೆಗಳು ಆಳವಾದ ನೆನಪುಗಳನ್ನು ಒಳಗೊಂಡ ಕನಸುಗಳನ್ನು ಇಟ್ಟುಕೊಂಡಿರುತ್ತವೆ. ನಾವು ಕತೆಗಳನ್ನು ಕೇಳುವಾಗ ಅನಾದಿ ಕಾಲದ ನೆನಪುಗಳು, ಹೊಸ ಕನಸುಗಳನ್ನು ವಿವರಿಸುವಾಗ ಅಲ್ಲಿ ನಾನು, ನನ್ನದು ಎಂಬ ಎಲ್ಲ ಅಹಂಕಾರ ಮರೆತಿರುತ್ತೇವೆ. ರಸಾನುಭಾವ ನೀಡುವ ಕತೆಗಳನ್ನು ಪ್ರಪಂಚಕ್ಕೆ ನೀಡಿದ ಕೀರ್ತಿ ದೇಶಕ್ಕೆ ಸಲ್ಲುತ್ತದೆ’ ಎಂದು ಹೇಳಿದರು.

‘ಸಣ್ಣ ಕತೆಗಳಿಗೆ 10ಸಾವಿರ ವರ್ಷಗಳ ಇತಿಹಾಸವಿದೆ. ಶಿವ-ಪಾರ್ವತಿಯ ಕುರಿತು ಸಾವಿರಾರು ಕತೆಗಳು ಹಿಂದೆ ಇದ್ದವು. ಅವುಗಳ ಪೈಕಿ 2 ಲಕ್ಷ ಕತೆಗಳು ಮಾತ್ರ ಲಭ್ಯವಾಗಿವೆ ಎಂದು ಇತಿಹಾಸದಿಂದ ತಿಳಿದುಬಂದಿದೆ. ಸಣ್ಣ ಕತೆಗಳು ಜನಸಾಮಾನ್ಯರ ಮನ ‌ಮುಟ್ಟಿ ಸಮಾಜ ಪರಿವರ್ತನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ’ ಎಂದು ತಿಳಿಸಿದರು.

'ಕತೆಗಳು ಮಾನವೀಯತೆಯನ್ನು ಪ್ರಧಾನ ವಿಷಯವಾಗಿ ಇಟ್ಟುಕೊಂಡು ಬೆಳೆಯುತ್ತಿವೆ'

ಕತೆಗಾರ ಅಮರೇಶ ನಗಡೋಣಿ ಮಾತನಾಡಿ, ‘ನಮ್ಮ ಕತೆಗಳು ಮಾನವೀಯತೆಯನ್ನು ಪ್ರಧಾನ ವಿಷಯವಾಗಿ ಇಟ್ಟುಕೊಂಡು ಬೆಳೆಯುತ್ತಿವೆ. ಸಮಾಜದ ಏರುಪೇರು, ವಿರೋಧ ಮೊದಲಾದ ಏನೇ ವಿಷಯಗಳಿದ್ದರೂ ಅಂತಿಮವಾಗಿ ನಾವು ಕಾಣುವುದು ಮಾನವೀಯತೆ ಮತ್ತು ಸಮಾನತೆಯೇ ಆಗಿದೆ. ಸಣ್ಣ ಕತೆಗಳಲ್ಲಿ ವ್ಯಕ್ತಿಗಿಂತ, ಸಮಾಜ ಮುಖ್ಯವಾಗಿರುತ್ತದೆ. ಇಲ್ಲಿ ನೈತಿಕತೆ ಪ್ರಧಾನ ವಿಷಯವಾಗಿ ಪ್ರಸ್ತಾಪವಾಗಿರುತ್ತದೆ’ ಎಂದು ವಿಶ್ಲೇಷಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮನು ಬಳಿಗಾರ, ‘ಸಾಹಿತಿಗಳಿಂದ ಸಮಾಜ ಕಟ್ಟುವ ಕೆಲಸ ಆಗಬೇಕು. ಸಮಾಜದ ಪರಿವರ್ತನೆಯಲ್ಲಿ ಅವರ ಪಾತ್ರ ಮುಖ್ಯವಾಗಿದೆ’ ಎಂದರು.

ಜೆ.ಎ. ಶಿಕ್ಷಣ ಸಂಸ್ಥೆ ನಿಕಟಪೂರ್ವ ಅಧ್ಯಕ್ಷ ಅರವಿಂದ ದೇಶಪಾಂಡೆ ಮಾತನಾಡಿ, ‘ಗಡಿ ನಾಡು ಅಥಣಿಯಲ್ಲಿ ಕಸಾಪ ಹಾಗೂ ಸಾಹಿತ್ಯ ಅಕಾಡೆಮಿಗಳು ಹೆಚ್ಚಿನ ಕಾರ್ಯಕ್ರಮ ಹಮ್ಮಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಡಾ.ರಾಮ ಕುಲಕರ್ಣಿ, ಡಾ.ಸುಹಾಸ ಕುಲಕರ್ಣಿ, ಅನಿಲ ದೇಶಪಾಂಡೆ, ಎಲ್.ವಿ. ಕುಲಕರ್ಣಿ, ಆರ್.ಎಂ. ದೇವರಡ್ಡಿ, ಕೆ. ಸಿದ್ದಗಂಗಮ್ಮ, ನೀಲೇಶ ಝರೆ, ವಿ.ಪಿ. ಜಾಲಿಹಾಳ, ಅನಿಲ ತಳಕೇರಿ ಇದ್ದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕಾರ್ಯದರ್ಶಿ ಎಸ್.ಸಿ. ಮಹಾಲಿಂಗೇಶ್ವರ ಸ್ವಾಗತಿಸಿದರು. ಸದಸ್ಯ ಡಾ.ಬಾಳಾಸಾಬ ಲೋಕಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.