ADVERTISEMENT

ಹಳ್ಳದಲ್ಲಿ ಏಳು ಭ್ರೂಣಗಳು ಪತ್ತೆ: ಮೂಡಲಗಿ ಪಟ್ಟಣದ ಮಧ್ಯದಲ್ಲೇ ಭೀಭತ್ಸ ಘಟನೆ

ಮುಚ್ಚಳ ಮುಚ್ಚಿದ ಪ್ಲಾಸ್ಟಿಕ್‌ ಡಬ್ಬದೊಳಗೆ ಪತ್ತೆಯಾದ ಭ್ರೂಣಗಳು

​ಪ್ರಜಾವಾಣಿ ವಾರ್ತೆ
Published 24 ಜೂನ್ 2022, 11:01 IST
Last Updated 24 ಜೂನ್ 2022, 11:01 IST
ಬೆಳಗಾವಿ ಜಿಲ್ಲೆಯ ಮೂಡಲಗಿಯ ಹಳ್ಳದಲ್ಲಿ ಭ್ರೂಣಗಳು ಪತ್ತೆಯಾದ ಭ್ರೂಣಗಳನ್ನು ನೋಡಲು ಸೇರಿದ ಜನ
ಬೆಳಗಾವಿ ಜಿಲ್ಲೆಯ ಮೂಡಲಗಿಯ ಹಳ್ಳದಲ್ಲಿ ಭ್ರೂಣಗಳು ಪತ್ತೆಯಾದ ಭ್ರೂಣಗಳನ್ನು ನೋಡಲು ಸೇರಿದ ಜನ   

ಮೂಡಲಗಿ: ಮೂಡಲಗಿ ಪಟ್ಟಣದೊಳಗೆ ಹರಿದ ಹಳ್ಳದಲ್ಲಿ ಶುಕ್ರವಾರ ಮಧ್ಯಾಹ್ನ, ಹತ್ಯೆ ಮಾಡಲಾದ ಏಳು ಭ್ರೂಣಗಳು ‍‍ಪತ್ತೆಯಾಗಿವೆ. ಈ ದೃಶ್ಯ ಕಂಡು ಪಟ್ಟಣದ ಜನ ಬೆಚ್ಚಿಬಿದ್ದರು.

ಹಳ್ಳಕ್ಕೆ ಬಟ್ಟೆ ತೊಳೆಯಲು ಬಂದ ಜನರಿಗೆ ಪ್ಲಾಸ್ಟಿಕ್‌ ಡಬ್ಬಗಳು ಕಂಡವು. ಹತ್ತಿರ ಹೋಗಿ ನೋಡಿದಾಗ ಅದರಲ್ಲಿ ಭ್ರೂಣಗಳನ್ನು ಹಾಕಿ, ಮುಚ್ಚಳ ಮುಚ್ಚಿದ್ದು ಗೊತ್ತಾಯಿತು. ವಿಷಯ ತಿಳಿದ ತಕ್ಷಣ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳ ಅಪಾರ ಜನ ಸೇರಿದರು.

ಪಟ್ಟಣದ ಬಸ್‌ ನಿಲ್ದಾಣಕ್ಕೆ ಹೊಂದಿಕೊಂಡು ಹರಿದ ಹಳ್ಳದಲ್ಲೇ ಭ್ರೂಣಗಳನ್ನು ಎಸೆಯಲಾಗಿದೆ. ಚಾಕೊಲೇಟ್‌ ಮಾರಾಟಕ್ಕೆ ಬಳಸುವ ಐದು ಪ್ಲಾಸ್ಟಿಕ್‌ ಡಬ್ಬಗಳಲ್ಲಿ, ಏಳೂ ಭ್ರೂಣಗಳನ್ನು ಒತ್ತೊತ್ತಾಗಿ ತುರುಕಲಾಗಿದೆ.

ADVERTISEMENT

ಸ್ಥಳಕ್ಕೆ ಬಂದ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಭ್ರೂಣಗಳಿದ್ದ ಡಬ್ಬಗಳನ್ನು ವಶಕ್ಕೆ ಪಡೆದರು. ಭ್ರೂಣಗಳನ್ನು ಸದ್ಯ ಮೂಡಲಗಿ ತಾಲ್ಲೂಕು ಆಸ್ಪತ್ರೆಯಲ್ಲಿ ಇಡಲಾಗಿದೆ.

ತನಿಖೆಗೆ ತಂಡ ರಚನೆ:ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಕೋಣಿ, ‘ಪತ್ತೆಯಾದ ಭ್ರೂಣಗಳು ಗರ್ಭಪಾತ ಮಾಡಿ ತೆಗೆದವು. ಭ್ರೂಣಲಿಂಗ ಪತ್ತೆ ಮಾಡಿದ ನಂತರ ಇಂಥ ಕೃತ್ಯ ಎಸಗಲಾಗಿದೆ. ತಕ್ಷಣಕ್ಕೆ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಭ್ರೂಣಗಳನ್ನು ಏಕೆ ಹತ್ಯೆ ಮಾಡಲಾಗಿದೆ, ಎಲ್ಲಿಂದ ತರಲಾಗಿದೆ, ಯಾವಾಗ ಹಳ್ಳಕ್ಕೆ ಎಸೆಯಲಾಗಿದೆ ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು’ ಎಂದರು.

‘ಈ ಭ್ರೂಣಗಳಲ್ಲಿ ಕೆಲವು ಐದು ತಿಂಗಳು ತುಂಬಿವೆ, ಮತ್ತೆ ಕೆಲವು ಏಳು ತಿಂಗಳಾಗಿವೆ. ಮೂಡಲಗಿ ಠಾಣೆಯಲ್ಲಿ ಕೇಸ್‌ ದಾಖಲಿಸುವ ಪ್ರಕ್ರಿಯೆ ಮುಗಿಸಿದ ನಂತರ ಬೆಳಗಾವಿಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ತರಲಾಗುವುದು. ಪರೀಕ್ಷೆಯ ನಂತರ ಪೂರ್ಣ ಪ್ರಮಾಣದ ಸಂಗತಿ ಗೊತ್ತಾಗಲಿದೆ’ ಎಂದು ಅವರು ‘‍ಪ್ರಜಾವಾಣಿ’ಗೆ ತಿಳಿಸಿದರು.

‘ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ತಡೆಗೆ ಈಗಾಗಲೇ ಒಂದು ತಂಡವಿದೆ. ಆದರೂ ಈ ಭ್ರೂಣಗಳ ಹತ್ಯೆಗೆ ಸಂಬಂಧಿಸಿದಂತೆ ಒಂದು ಪ್ರತ್ಯೇಕ ತಂಡ ರಚನೆ ಮಾಡಲಾಗುವುದು. ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ಗಂಭೀರವಾಗಿ ತನಿಖೆ ನಡೆಸಲಾಗುವುದು. ಅಪರಾಧಿಗಳು ತಪ್ಪಿಸಿಕೊಳ್ಳದಂತೆ ಎಚ್ಚರಿಕೆ ವಹಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.