ADVERTISEMENT

ತುಳಿತಕ್ಕೆ ಒಳಗಾದವರ ಸಮಾವೇಶ ತಪ್ಪಲ್ಲ- ಸಿದ್ದರಾಮಯ್ಯ ಪ್ರತಿಪಾದನೆ

ಶೆಫರ್ಡ್ಸ್‌ ಇಂಡಿಯಾ– ಇಂಟರ್‌ ನ್ಯಾಷನಲ್ ರಾಷ್ಟ್ರೀಯ ಸಮಾವೇಶದಲ್ಲಿ ಸಿದ್ದರಾಮಯ್ಯ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2023, 18:44 IST
Last Updated 3 ಅಕ್ಟೋಬರ್ 2023, 18:44 IST
ಬೆಳಗಾವಿಯಲ್ಲಿ ಮಂಗಳವಾರ ನಡೆದ ಶೆಫರ್ಡ್ಸ್‌ ಇಂಡಿಯಾ– ಇಂಟರ್‌ ನ್ಯಾಷನಲ್‌ 9ನೇ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿದ ಜನಸ್ತೋಮ
 ಪ್ರಜಾವಾಣಿ ಚಿತ್ರ
ಬೆಳಗಾವಿಯಲ್ಲಿ ಮಂಗಳವಾರ ನಡೆದ ಶೆಫರ್ಡ್ಸ್‌ ಇಂಡಿಯಾ– ಇಂಟರ್‌ ನ್ಯಾಷನಲ್‌ 9ನೇ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿದ ಜನಸ್ತೋಮ  ಪ್ರಜಾವಾಣಿ ಚಿತ್ರ   

ಬೆಳಗಾವಿ: ‘ತುಳಿತಕ್ಕೆ ಒಳಗಾದ ಸಮಾಜದವರ ಸಮಾವೇಶಗಳು ಸಂಘಟನಾ ಕೇಂದ್ರಿತವಾದದ್ದೇ ಹೊರತು ಜಾತಿವಾದಿ ಸಮಾವೇಶಗಳಲ್ಲ. ಎಲ್ಲಾ ಸೌಕರ್ಯ ಹೊಂದಿದವರೂ ಆಯೋಜಿಸುವಂತದ್ದು ಜಾತಿವಾದಿ ಸಮಾವೇಶಗಳು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.

ಶೆಫರ್ಡ್ಸ್‌ ಇಂಡಿಯಾ– ಇಂಟರ್‌ ನ್ಯಾಷನಲ್‌ ಸಂಘಟನೆ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ 9ನೇ ರಾಷ್ಟ್ರೀಯ ಸಮಾವೇಶದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಅವಕಾಶ ವಂಚಿತರು ಸಂವಿಧಾನಬದ್ಧ ಹಕ್ಕು ಪಡೆಯಲು ಇಂಥ ಸಮಾವೇಶ ಮಾಡುವುದು ತಪ್ಪಲ್ಲ ಎಂದು ರಾಮ ಮನೋಹರ ಲೋಹಿಯಾ ಹೇಳಿದ್ದಾರೆ. ಅದನ್ನು ನಂಬಿ ನಾನು ಭಾಗವಹಿಸಿದ್ದೇನೆ’ ಎಂದರು.

‘ಸಮಾಜವಾದಿ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಜಾತಿ ಸಮಾವೇಶದಲ್ಲಿ ಹೇಗೆ ಭಾಗವಹಿಸಿದರು ಎಂದು ಕೆಲವರು ಪ್ರಶ್ನಿಸುತ್ತಾರೆ. ನಾನು ಯಾವತ್ತೂ ಜಾತಿ ಮಾಡಿದವನಲ್ಲ, ನನ್ನ ಉಸಿರು ಇರುವವರೆಗೂ ಮಾಡುವುದಿಲ್ಲ. ನಾನು ಜಾತಿವಾದ ಮತ್ತು ಜಾತಿವಾದಿಗಳ ವಿರೋಧಿ’ ಎಂದರು.

ADVERTISEMENT

‘ನನ್ನ ಯಾವುದೇ ಯೋಜನೆ, ಕಾರ್ಯಕ್ರಮ ಒಂದು ಜಾತಿಗೆ ಸೀಮಿತವಾಗಿಲ್ಲ ಎಂಬುದನ್ನು ವಿರೋಧಿಸುವವರು ತಿಳಿಯಬೇಕು. ಜಾತಿಗಳ ಮಧ್ಯೆ ವೈಷಮ್ಯ ಹುಟ್ಟಿಸಿ, ಧರ್ಮಗಳ ಮಧ್ಯೆ ಹುಳಿ ಹಿಂಡಿ ಅಧಿಕಾರ ನಡೆಸುವ ಜಾಯಮಾನ ನನ್ನದಲ್ಲ’ ಎಂದು ಹೇಳಿದರು.

‘ಜಾತಿ ಮಾಡುವ ಯಾವುದೇ ಮಠ ನಾನು ನಂಬುವುದಿಲ್ಲ, ಬೆಂಬಲಿಸುವುದಿಲ್ಲ. ನಮ್ಮ ಕಾಗಿನೆಲೆ ಮಠ ನೋಡಿ. ಅದು ಎಲ್ಲ ಸಮಾಜದವರಿಗೂ ತೆರೆದುಕೊಂಡಿದೆ. ಅಲ್ಲಿ ಜಾತಿ ಎಂಬುದಿಲ್ಲ’ ಎಂದರು.

ಸಮಸಮಾಜದ ನಿರ್ಮಾಣ ಸಾಧ್ಯ:

‘ಅಶಕ್ತ ಸಮುದಾಯಗಳ ಜನ ಸಂಘಟಿತರಾಗದಿದ್ದರೆ, ಅಧಿಕಾರ ಹಿಡಿಯಲು ಆಗುವುದಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಹಲವು ಸಮುದಾಯದವರು ಇನ್ನೂ ವಿಧಾನಸೌಧದ ಮೆಟ್ಟಿಲು ಕೂಡ ನೋಡಿಲ್ಲ. ಎಲ್ಲ ಸಮುದಾಯಗಳು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಬೆಳೆದರೆ ಮಾತ್ರ ಸಮಸಮಾಜದ ನಿರ್ಮಾಣ ಸಾಧ್ಯ’ ಎಂದರು.

ಕಾಗಿನೆಲೆ ಕನಕ ಗುರು ಪೀಠದ ನಿರಂಜನಾನಂದ‍ಪುರಿ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ಸಿದ್ದರಾಮಾನಂದಪುರಿ ಸ್ವಾಮೀಜಿ ಹಾಗೂ ಅರ್ಜುನಾಭಾಯಿಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಸಮಾವೇಶ ಉದ್ಘಾಟಿಸಿದರು. ಸಂಘಟನೆಯ ಅಧ್ಯಕ್ಷ ಎಚ್‌.ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ದೇಶದ ವಿವಿಧೆಡೆಯಿಂದ ಹಲವು ಜನಪ್ರತಿನಿಧಿಗಳು, ಸಮಾಜದ ಮುಖಂಡರು ಸೇರಿದ್ದರು. ಕಿತ್ತೂರು ಕರ್ನಾಟಕ ಭಾಗದ ವಿವಿಧೆಡೆಯಿಂದ ಜನ ಸಾಗರೋಪಾದಿಯಲ್ಲಿ ಹರಿದುಬಂದರು.

ಬೆಳಗಾವಿಯಲ್ಲಿ ಮಂಗಳವಾರ ನಡೆದ ಶೆಫರ್ಡ್ಸ್‌ ಇಂಡಿಯಾ ಇಂಟರ್‌ನ್ಯಾಷನಲ್‌ನ 9ನೇ ರಾಷ್ಟ್ರೀಯ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಳ್ಳಿ ಗದೆ ಬೆಳ್ಳಿ ಕಿರೀಟ ನೀಡಿ ಸನ್ಮಾನಿಸಲಾಯಿತು ಪ್ರಜಾವಾಣಿ ಚಿತ್ರ
ಕುರುಬ ಗೊಲ್ಲ ಕೋಳಿ ಸಮಾಜಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕಿದೆ. ಕೇಂದ್ರ ಸರ್ಕಾರದ ಮೇಲೆ ನಿರಂತರ ಒತ್ತಡ ತರುತ್ತೇನೆ
–ಸಿದ್ದರಾಮಯ್ಯ ಮುಖ್ಯಮಂತ್ರಿ
ಹಾಲುಮತ ಸಮಾಜದ ಸಂಘಟನೆ ನೋಡಿ ಕೆಲವರಿಗೆ ನಡುಕ ಹುಟ್ಟಿದೆ. ಹುಳಿ ಹಿಂಡಲು ಕೆಲವರು ಕಾಯುತ್ತಿದ್ದಾರೆ. ಎಚ್ಚರವಾಗಿರಬೇಕು
ನಿರಂಜನಾನಂದ‍ಪುರಿ ಸ್ವಾಮೀಜಿ, ಕಾಗಿನೆಲೆ ಕನಕ ಗುರು ಪೀಠ ಕಾಗಿನೆಲೆ ಕನಕ ಗುರು ಪೀಠ

‘ಜಾತಿ ಗಣತಿ ವರದಿ ಇನ್ನೂ ನೀಡಿಲ್ಲ’

‘ಶಾಶ್ವತ ಹಿಂದುಳಿದ ಆಯೋಗವು ಜಾತಿ ಗಣತಿ ವರದಿಯನ್ನು ಇನ್ನೂ ನಮಗೆ ನೀಡಿಲ್ಲ. ವರದಿ ಕೇಳಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು. ‘ಜಾತಿ ಗಣತಿ ಹಾಗೂ ಸಾಮಾಜಿಕ ಆರ್ಥಿಕ ಸರ್ವೆಗೆ ನಾನೇ ಆದೇಶಿಸಿದ್ದೆ. ವರದಿ ಪೂರ್ಣಗೊಳ್ಳುವ ಮುನ್ನ ನಮ್ಮ ಅವಧಿ ಮುಗಿಯಿತು. ನಂತರ ಬಂದ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ವರದಿ ತೆಗೆದುಕೊಳ್ಳಲಿಲ್ಲ. ಹಾಗಾಗಿ ಅದು ಹಾಗೇ ಬಿದ್ದಿದೆ’ ಎಂದರು. ‘ವರದಿ ನೀಡುವುದು ಆಯೋಗದ ಈಗಿನ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರ ಕೆಲಸ. ಅವರು ಬಿಜೆಪಿ ಸರ್ಕಾರ ನೇಮಿಸಿದ ಅಧ್ಯಕ್ಷರಾಗಿದ್ದಾರೆ. ಇದೊಂದು ತೊಡಕಾಗಿದೆ’ ಎಂದರು.

ಸಮಾವೇಶದಲ್ಲಿ ಕೈಗೊಳ್ಳಲಾದ ನಿರ್ಣಯಗಳು

l ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು (ಜಾತಿವಾರು) ಬೇಗ ಪೂರ್ಣಗೊಳಿಸಿ ಸರ್ಕಾರಕ್ಕೆ ಸಲ್ಲಿಸಬೇಕು.

l ಕೇಂದ್ರ ಸರ್ಕಾರವು 1948ರ ಜನಗಣತಿ ಕಾಯ್ದೆಗೆ ತಿದ್ದುಪಡಿ ತಂದು, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಬೇಕು.

l ದೇಶದ 12 ಕೋಟಿಗೂ ಅಧಿಕ ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು.

l ಸಂಗೊಳ್ಳಿ ರಾಯಣ್ಣ ಅವರನ್ನು ಗಲ್ಲಿಗೇರಿಸಿದ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ನಂದಘಡವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಬೇಕು.

l ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಶೇ 33ರಷ್ಟು ರಾಜಕೀಯ ಮೀಸಲಾತಿ ನೀಡಿದ್ದು ಸ್ವಾಗತಾರ್ಹ. ಇದರಲ್ಲಿ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಮಹಿಳೆಯರಿಗೂ ಕಡ್ಡಾಯ ಮೀಸಲಾತಿ ಸಿಗುವಂತೆ ಶಾಸನ ರಚಿಸಬೇಕು.

l ಅಲೆಮಾರಿ ಕುರಿಗಾಹಿ ಮಕ್ಕಳ ಆರೋಗ್ಯ, ಶಿಕ್ಷಣಕ್ಕೆ, ಅನ್ನಕ್ಕಾಗಿ ಸಂಚಾರ ಆಸ್ಪತ್ರೆ, ಸಂಚಾರಿ ಶಾಲೆ, ಸಂಚಾರಿ ಕ್ಯಾಂಟೀನ್‌ ವ್ಯವಸ್ಥೆ ಮಾಡಬೇಕು.

l ಕುರಿ ಮೇಯಿಸಲು ಕಂದಾಯ ಭೂಮಿ ಮೀಸಲಿಡಬೇಕು.

l ಪ್ರಕೃತಿ ವಿಕೋಪದಿಂದ, ರೋಗಗಳಿಂದ ಕುರಿಗಳು ಸತ್ತರೆ ಸೂಕ್ತ ಪರಿಹಾರ ನೀಡುವ ಯೋಜನೆ ಜಾರಿ ಮಾಡಬೇಕು.

l ಕುರಿ ಹಾಗೂ ಕುರಿಗಾಹಿಗಳ ಸಲುವಾಗಿ ₹1,000 ಕೋಟಿ ಆವರ್ತನಿಧಿ ಇಡಬೇಕು.

l ಕೇಂದ್ರದ ಒಬಿಸಿ ಪಟ್ಟಿಯನ್ನು ಮರು ವರ್ಗೀಕರಣ ಮಾಡಿ ಶಿಕ್ಷಣ ಹಾಗೂ ಉದ್ಯೋಗ ಕಲ್ಪಿಸುವಲ್ಲಿ ನಿರ್ಧಾರ ಕೈಗೊಳ್ಳಬೇಕು.

l ಪ್ರತ್ಯೇಕ ಡೊಳ್ಳು ಪ್ರಾಧಿಕಾರ ರಚಿಸಬೇಕು

l ಕುರಿ ಹಾಗೂ ಕುರಿ ಉತ್ಪನ್ನಗಳ ಮಾರಾಟಕ್ಕೆ ಕೆಎಂಎಫ್‌ ಮಾದರಿ ಜಾರಿಗೊಳಿಸಬೇಕು.

ಬೆಳಗಾವಿಯಲ್ಲಿ ಮಂಗಳವಾರ ನಡೆದ ಶೆಫರ್ಡ್ಸ್‌ ಇಂಡಿಯಾ– ಇಂಟರ್‌ ನ್ಯಾಷನಲ್‌ 9ನೇ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿದ ಜನಸ್ತೋಮ ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.