ಬೆಳಗಾವಿ: ಶಿಗ್ಗಾವಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಯಾಸೀರ ಅಹಮದ್ ಖಾನ್ ಪಠಾಣ ಇಲ್ಲಿನ ಕಾಂಗ್ರೆಸ್ ಭವನಕ್ಕೆ ಶನಿವಾರ ರಾತ್ರಿ ಆಗಮಿಸಿ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭೇಟಿಯಾದರು.
ಪಠಾಣ ಇಲ್ಲಿಗೆ ಬರುತ್ತಿದ್ದಂತೆ, ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪಕ್ಷದ ಗ್ರಾಮೀಣ ಜಿಲ್ಲಾ ಘಟಕದ ವತಿಯಿಂದಲೂ ಸನ್ಮಾನಿಸಲಾಯಿತು.
'30 ವರ್ಷಗಳಿಂದ ವನವಾಸ ಅನುಭವಿಸುತ್ತಿದ್ದ ಶಿಗ್ಗಾವಿ ಕ್ಷೇತ್ರದಲ್ಲಿ ನನ್ನಂಥ ಸಾಮಾನ್ಯ ಕಾರ್ಯಕರ್ತನನ್ನು ಸತೀಶ ಜಾರಕಿಹೊಳಿ ಗೆಲ್ಲಿಸಿದ್ದಾರೆ. ಅವರಿಗೆ ಸದಾ ಕೃತಜ್ಞನಾಗಿದ್ದೇನೆ' ಎಂದು ಪಠಾಣ ಹೇಳಿದರು.
ಸತೀಶ ಜಾರಕಿಹೊಳಿ, 'ಸಾಮಾನ್ಯ ಕಾರ್ಯಕರ್ತರ ಸಲಹೆ ಮೇರೆಗೆ ಚುನಾವಣೆ ಎದುರಿಸಿದ್ದರಿಂದ ನಮಗೆ ಗೆಲುವು ಸಿಕ್ಕಿದೆ. ಮಾಜಿ ಮುಖ್ಯಮಂತ್ರಿ ಪುತ್ರನ ಎದುರು ಸಾಮಾನ್ಯ ಕಾರ್ಯಕರ್ತ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಪಕ್ಷದ ಎಲ್ಲ ನಾಯಕರು, ಕಾರ್ಯಕರ್ತರಿಗೂ ಗೆಲುವಿನ ಶ್ರೇಯಸ್ಸು ಸಲ್ಲುತ್ತದೆ' ಎಂದರು.
'2028ರ ವಿಧಾನಸಭೆ ಚುನಾವಣೆಯಲ್ಲೂ ಗೆಲ್ಲುವ ದೃಷ್ಟಿಯಿಂದ ಎಲ್ಲ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಠಾಣ ಕೆಲಸ ಮಾಡಬೇಕು' ಎಂದು ಸಲಹೆ ನೀಡಿದರು.
ಶಾಸಕ ಆಸಿಫ್ ಸೇಠ್, ಕಾಂಗ್ರೆಸ್ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ರಾಹುಲ ಜಾರಕಿಹೊಳಿ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.