ಬೆಳಗಾವಿ: ಇಲ್ಲಿನ ಮಹಾನಗರಪಾಲಿಕೆ ಎದುರು ಕನ್ನಡಪರ ಹೋರಾಟಗಾರರು ಕನ್ನಡ ಧ್ವಜಸ್ತಂಭ ಸ್ಥಾಪಿಸಿ ಬಾವುಟ ಹಾರಿಸಿರುವುದನ್ನು ಖಂಡಿಸಿ, ನೆರೆಯ ಮಹಾರಾಷ್ಟ್ರದ ಶಿವಸೇನೆ ಕಾರ್ಯಕರ್ತರು ಭಗವಾಧ್ವಜಗಳೊಂದಿಗೆ ರಾಜ್ಯದ ಗಡಿ ಪ್ರವೇಶಿಸಲು ಗುರುವಾರ ಯತ್ನಿಸಿದ್ದಾರೆ.
ತಾಲ್ಲೂಕಿನ ಗಡಿಯಲ್ಲಿರುವ ಶಿನೋಳಿಯಲ್ಲಿ ಅವರು ಸೇರಿದ್ದಾರೆ. ಗಡಿಯಲ್ಲಿ ತಮ್ಮನ್ನು ತಡೆದ ಪೊಲೀಸರೊಂದಿಗೆ ಶಿವಸೇನೆ ಕಾರ್ಯಕರ್ತರು ವಾಗ್ವಾದಕ್ಕಿಳಿದರು. ಕನ್ನಡ ಧ್ವಜವನ್ನು ಕೂಡಲೇ ತೆರವುಗೊಳಿಸಬೇಕು. ಇಲ್ಲವಾದಲ್ಲಿ ನಾವು ಬೆಳಗಾವಿ ಮಹಾನಗರಪಾಲಿಕೆ ಎದುರು ಭಗವಾಧ್ವಜ ಸ್ಥಾಪಿಸುತ್ತೇವೆ ಎಂದು ಮುನ್ನುಗ್ಗಲು ಬಂದರು. ಜೈ ಭವಾನಿ, ಜೈಶಿವಾಜಿ ಎಂದು ಘೋಷಣೆ ಕೂಗುತ್ತಾ ರಾಜ್ಯದತ್ತ ನುಗ್ಗುತ್ತಿದ್ದರು. ಅವರನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ, ತಳ್ಳಾಟ–ನೂಕಾಟ ನಡೆಯಿತು. ಇದರಿಂದ ಆ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಮಹಾರಾಷ್ಟ್ರದ ಕೊಲ್ಹಾಪುರದ ಶಿವಸೇನೆ ಮುಖಂಡ ವಿಜಯ ದಾವಣೆ ನೇತೃತ್ವದಲ್ಲಿ ಕಾರ್ಯಕರ್ತರು ಜಮಾಯಿಸಿದ್ದಾರೆ.
ಈ ನಡುವೆ, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯವರು ನಗರದಲ್ಲಿ ಕೈಗೊಂಡಿದ್ದ ಮೆರವಣಿಗೆಯನ್ನು ಪೊಲೀಸರ ಕಟ್ಟುನಿಟ್ಟಿನ ಸೂಚನೆ ಮೇರೆಗೆ ಹಾಗೂ ಅನುಮತಿ ಸಿಗದ ಕಾರಣದಿಂದ ಮುಂದೂಡಿದ್ದಾರೆ. ಪೊಲೀಸ್ ಅಧಿಕಾರಿಗಳ ಸಲಹೆಯಂತೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರೊಂದಿಗೆ ಚರ್ಚಿಸುತ್ತಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ವಿಶೇಷವಾಗಿ ಮಹಾನಗರಪಾಲಿಕೆ ಮುಂಭಾಗದಲ್ಲಿ ಕನ್ನಡ ಧ್ವಜ ಹಾರಿಸಿರುವ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.ಬೆಳಗಾವಿಯಲ್ಲಿ ಎಂಇಎಸ್ ಮುಖಂಡರೊಂದಿಗೆಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸಭೆ ನಡೆಸುತ್ತಿದ್ದಾರೆ
ಈ ನಡುವೆ, ಮಹಾರಾಷ್ಟ್ರದ ಕೊಲ್ಹಾಪುರದ ಶಿವಸೇನೆ ಮುಖಂಡ ವಿಜಯ ದಾವಣೆ ಅವರಿಗೆ, ಗುರುವಾರ ಮಧ್ಯಾಹ್ನದಿಂದ ಅನ್ವಯವಾಗುವಂತೆ ನಗರ ಹಾಗೂ ತಾಲ್ಲೂಕು ಪ್ರವೇಶಿಸುವುದಕ್ಕೆ ನಿರ್ಬಂಧ ವಿಧಿಸಿ ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಆದೇಶ ಹೊರಡಿಸಿದ್ದಾರೆ. ಅವರು ಇಲ್ಲಿಗೆ ಬಂದು ಪ್ರಚೋದನಕಾರಿ ಭಾಷಣ ಮಾಡುವ ಸಾಧ್ಯತೆ ಇದೆ. ಇದರಿಂದ ಅಹಿತಕರ ಘಟನಗಳು ಮತ್ತು ಭಾಷಿಕ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಅದಕ್ಕೆ ಅವಕಾಶ ಕೊಡಬಾರದು ಮತ್ತು ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಬೇಕು ಎಂಬ ಉದ್ದೇಶದಿಂದ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಇಲ್ಲಿನ ಎಂಎಸ್ಎಸ್ ಹಾಗೂ ಶಿವಸೇನೆಯವರ ಕುಮ್ಮಕ್ಕಿನ ಮೇರೆಗೆ ಕೊಲ್ಹಾಪುರದ ಶಿವಸೇನೆ ಕಾರ್ಯಕರ್ತರು ಬರಲು ಯೋಜಿಸಿದ್ದರು ಎನ್ನಲಾಗುತ್ತಿದೆ.
23ರಂದು ಬೆಳಗಾವಿಗೆ ವಾಟಾಳ್, ಗೋವಿಂದ್ ತಂಡ
‘ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಗಡಿ ವಿವಾದ ಸಂಬಂಧ ನೀಡಿದ ಹೇಳಿಕೆಯ ವಿರುದ್ಧ ಪ್ರತಿಭಟಿಸಲು ಕನ್ನಡ ಹೋರಾಟಗಾರರಾದ ವಾಟಾಳ್ ನಾಗರಾಜ್ ಮತ್ತು ಸಾ.ರಾ. ಗೋವಿಂದ್ ನೇತೃತ್ವದ ತಂಡ ಜ. 23ರಂದು ಬೆಳಿಗ್ಗೆ 11ಕ್ಕೆ ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.