ಬೆಳಗಾವಿ: ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇನಾ ಕಾರ್ಯಕರ್ತರು ಕರ್ನಾಟಕ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ, ಕನ್ನಡ ಬಾವುಟವನ್ನು ಮಂಗಳವಾರ ಸುಟ್ಟು ಹಾಕಿದ್ದಾರೆ. ಈ ಘಟನೆಯ ವಿಡಿಯೊ ಹಾಗೂ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ಪರ್ಯಾಯವಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿಯವರು (ಎಂಇಎಸ್) ಇಲ್ಲಿ ಹಮ್ಮಿಕೊಂಡಿದ್ದ ‘ಮಹಾಮೇಳಾವ’ ಸಂದರ್ಭದಲ್ಲಿ, ಆ ಸಂಘಟನೆಯ ಅಧ್ಯಕ್ಷ ದೀಪಕ ದಳವಿ ಅವರಿಗೆ ಕನ್ನಡಪರ ಹೋರಾಟಗಾರ ಸಂಪತ್‌ಕುಮಾರ್ ದೇಸಾಯಿ ಮಸಿ ಬಳಿದಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಶಿವಸೇನಾ ಕಾರ್ಯಕರ್ತರು ಕನ್ನಡ ಬಾವುಟವನ್ನು ಸುಟ್ಟು ಹಾಕಿದ್ದಾರೆ. ಕರ್ನಾಟಕದ ವಿರುದ್ಧಕ್ರಮ ಜರುಗಿಸಬೇಕು ಮತ್ತು ಗಡಿ ವಿವಾದವನ್ನು ಕೂಡಲೇ ಬಗೆಹರಿಸ ಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಬುಧವಾರಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ‘ಮಹಾರಾಷ್ಟ್ರದಲ್ಲಿ ಶಿವಸೇನಾ ಕಾರ್ಯಕರ್ತರು ಕನ್ನಡ ಧ್ವಜ ಸುಟ್ಟಿದ್ದು ಸರಿಯಲ್ಲ’ ಎಂದರು.
‘ಗಡಿಯಲ್ಲಿ ಕನ್ನಡಿಗರು-ಮರಾಠಿಗರು ಒಂದಾಗಿ ಬದುಕು ನಡೆಸುತ್ತಿದ್ದಾರೆ. ಇಲ್ಲಿ ಗದ್ದಲ ಸೃಷ್ಟಿಸಿ, ಶಾಂತಿ ಕದಡಲು ಯತ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.
‘ಎಂಇಎಸ್ ಮುಖಂಡ ದೀಪಕ ದಳವಿ ಅವರಿಗೆ ಮಸಿ ಬಳಿದ ಪ್ರಕರಣ ಸಂಬಂಧ ಕನ್ನಡ ಹೋರಾಟಗಾರನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅನುಮತಿ ಪಡೆಯದಿದ್ದರೂ ಎಂಇಎಸ್ ಮುಖಂಡರು ಮಹಾಮೇಳಾವ ನಡೆಸಿದ್ದು, ಈ ಕುರಿತು ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಈ ನಡುವೆ, ಎಂಇಎಸ್ ಅಧ್ಯಕ್ಷಗೆ ಮಸಿ ಬಳಿದ ವ್ಯಕ್ತಿಯ ವಿರುದ್ಧ ದಾಖಲಿಸಿರುವ ಕೊಲೆ ಯತ್ನ ಪ್ರಕರಣ ವಾಪಸ್ ಪಡೆಯುವಂತೆಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸಲಾಗುತ್ತಿದೆ.
***
ಮಹಾರಾಷ್ಟ್ರದಲ್ಲಿ ಶಿವಸೇನಾ ಕಾರ್ಯಕರ್ತರು ಕನ್ನಡ ಧ್ವಜ ಸುಟ್ಟಿದ್ದು ಸರಿಯಲ್ಲ.
–ಆರಗ ಜ್ಞಾನೇಂದ್ರ, ಗೃಹಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.