ADVERTISEMENT

ಬೆಳಗಾವಿ: ಕಣ್ಮನ ಸೆಳೆದ ಶಿವಾಜಿ ಜಯಂತಿ ಮೆರವಣಿಗೆ

ಸಂಭ್ರಮದಲ್ಲಿ ಮಿಂದೆದ್ದ ಜನರು, ಗಮನಸೆಳೆದ ಕಲಾವಿದರು

​ಪ್ರಜಾವಾಣಿ ವಾರ್ತೆ
Published 4 ಮೇ 2022, 15:37 IST
Last Updated 4 ಮೇ 2022, 15:37 IST
ಬೆಳಗಾವಿಯ ನರಗುಂದಕರ ಭಾವೆ ಚೌಕದಲ್ಲಿ ಶಿವಾಜಿ ಜಯಂತಿ ಮೆರವಣಿಗೆಗೆ ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ ಚಾಲನೆ ನೀಡಿದರು
ಬೆಳಗಾವಿಯ ನರಗುಂದಕರ ಭಾವೆ ಚೌಕದಲ್ಲಿ ಶಿವಾಜಿ ಜಯಂತಿ ಮೆರವಣಿಗೆಗೆ ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ ಚಾಲನೆ ನೀಡಿದರು   

ಬೆಳಗಾವಿ: ಅತ್ತ ಸೂರ್ಯ ಪಡುವಣ ದಿಕ್ಕಿಗೆ ಜಾರುತ್ತಲೇ ಇತ್ತ ನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಅಂಗವಾಗಿ ಆರಂಭವಾದ ರೂಪಕ ವಾಹನಗಳ ಮೆರವಣಿಗೆ ಕಣ್ಮನ ಸೆಳೆಯಿತು.

ಎತ್ತ ನೋಡಿದರೂ ಹಾರಾಡುತ್ತಿದ್ದ ಕೇಸರಿ ಬಾವುಟಗಳು, ಶಿವಾಜಿ ಇತಿಹಾಸ ಸಾರುವ ಕಲಾಕೃತಿಗಳು, ಜಾನಪದ ಕಲಾತಂಡಗಳ ಪ್ರದರ್ಶನ ಮೆರವಣಿಗೆ ಕಳೆ ಹೆಚ್ಚಿಸಿದವು. ಶಿವಾಜಿ ಬಾಲ್ಯ, ಶಿಕ್ಷಣ, ಯುದ್ಧಕಲೆ, ಪಟ್ಟಾಭಿಷೇಕ, ರಾಜತಾಂತ್ರಿಕತೆ ಮತ್ತಿತರ ಸನ್ನಿವೇಶಗಳನ್ನು ಬಿಂಬಿಸುವ ಕಿರುನಾಟಕಗಳು ಮನಸೆಳೆದವು. ವಿವಿಧ ಸಂಘ–ಸಂಸ್ಥೆಗಳವರು ಪ್ರದರ್ಶನ ನೀಡಿ ಪ್ರೇಕ್ಷಕರ ಮನಗೆದ್ದರು.

ಇಲ್ಲಿನ ನರಗುಂದಕರ ಭಾವೆ ಚೌಕದಲ್ಲಿ ಪಲ್ಲಕ್ಕಿಯಲ್ಲಿದ್ದ ಶಿವಾಜಿ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ದಕ್ಷಿಣ ಶಾಸಕ ಅಭಯ ಪಾಟೀಲ ಮತ್ತು ಉತ್ತರ ಶಾಸಕ ಅನಿಲ ಬೆನಕೆ ಮೆರವಣಿಗೆಗೆ ಚಾಲನೆ ನೀಡಿದರು.

ADVERTISEMENT

ಈ ವೇಳೆ ಮಾತನಾಡಿದ ಅಭಯ, ‘ಮೈಸೂರು ದಸರಾ ಮಾದರಿಯಲ್ಲಿ ಶಿವಾಜಿ ಜಯಂತಿಯನ್ನುಬೆಳಗಾವಿಯಲ್ಲಿ ಆಚರಿಸಲಾಗುತ್ತಿದೆ. 2ಸಾವಿರಕ್ಕೂ ಅಧಿಕ ಕಲಾವಿದರು ಭಾಗವಹಿಸಿದ್ದಾರೆ. ಇದಕ್ಕೆ ಇನ್ನಷ್ಟು ಪ್ರಚಾರ ನೀಡುವ ಅಗತ್ಯವಿದೆ. ಶಿವಾಜಿ ಮಹಾರಾಜರ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕಿದೆ’ ಎಂದರು.

ಅನಿಲ ಬೆನಕೆ ಮಾತನಾಡಿ, ‘ನಗರದಲ್ಲಿ ಶಿವಾಜಿ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮೆರವಣಿಗೆ ಸುಗಮವಾಗಿ ನಡೆಯಲೆಂದು ಆಡಳಿತ ವರ್ಗದವರು ವ್ಯವಸ್ಥೆ ಮಾಡಿದ್ದಾರೆ. ಮಂಡಳದವರು ನಿಗದಿತ ಸಮಯದಲ್ಲಿ ಮೆರವಣಿಗೆ ಪೂರ್ಣಗೊಳಿಸಿ ಸಹಕರಿಸಬೇಕು’ ಎಂದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ನಗರ ಪೊಲೀಸ್‌ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ, ಮಹಾನಗರಪಾಲಿಕೆ ಆಯುಕ್ತ ರುದ್ರೇಶ್ ಘಾಳಿ, ಎಂಇಎಸ್‌ ಮುಖಂಡ ದೀಪಕ ದಳವಿ, ಪ್ರಕಾಶ ಮರಗಾಲೆ, ವಿಜಯ ಮೋರೆ, ಶಿವಾಜಿ ಸುಂಠಕರ, ಶುಭಂ ಶೆಳಕೆ ಮತ್ತು ಸರಿತಾ ಪಾಟೀಲ ಇದ್ದರು.

ರಂಗೋಲಿ ಚಿತ್ತಾರ:ಮೆರವಣಿಗೆ ಮಾರ್ಗದಲ್ಲಿ ರಂಗೋಲಿ ಚಿತ್ತಾರ ಅರಳಿತ್ತು. ನರಗುಂದಕರ ಭಾವೆ ಚೌಕದಿಂದ ಹೊರಟ ಮೆರವಣಿಗೆ ಮಾರುತಿ ಗಲ್ಲಿ, ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತ, ರಾಮಲಿಂಗಖಿಂಡ ಗಲ್ಲಿ, ಟಿಳಕ ಚೌಕ್‌, ಹೇಮುಕೆಲಾನಿ ಚೌಕ್‌ ಮಾರ್ಗವಾಗಿ ಸಂಚರಿಸಿ ಕಪಿಲೇಶ್ವರ ದೇವಸ್ಥಾನ ತಲುಪಿತು. ಮೆರವಣಿಗೆ ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಜಿಲ್ಲೆಗಳು ಮಾತ್ರವಲ್ಲದೆ, ನೆರೆಯ ಮಹಾರಾಷ್ಟ್ರ ಮತ್ತು ಗೋವಾದಿಂದಲೂ ಸಾವಿರಾರು ಜನರು ಬಂದಿದ್ದರು. ಶಿವಾಜಿ ಅಭಿಮಾನಿಗಳು ಜೈಕಾರ ಕೂಗಿ ಸಂಭ್ರಮಿಸಿದರು. ಯುವಕ–ಯುವತಿಯರು, ಮಕ್ಕಳು ಕುಣಿದು ಕುಪ್ಪಳಿಸಿದರು.

ಮೆರವಣಿಗೆ ಮಾರ್ಗ, ಸುತ್ತಮುತ್ತಲಿನ ಪ್ರದೇಶ ಹಾಗೂ ನಗರದಾದ್ಯಂತ ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಗೂಡಂಗಡಿಗಳಲ್ಲಿ ವ್ಯಾಪಾರವೂ ಜೋರಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.