ಬೆಳಗಾವಿ: ನಿಷೇಧಾಜ್ಞೆ ಜಾರಿಯಲ್ಲಿರುವ ನಡುವೆಯೇ ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನದ ಎದುರು ಎಂಇಎಸ್ ಕಾರ್ಯಕರ್ತರು ಗುಂಪು ಗುಂಪಾಗಿ ಜಮಾಯಿಸಿ, ಶಿವಾಜಿ ಪರ ಜಯ ಘೋಷಣೆಗಳನ್ನು ಹಾಕುತ್ತಿದ್ದಾರೆ. ಅವರನ್ನು ತಡೆಯಲು ಹಾಗೂ ಚದುರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಒಂದು ಗುಂಪನ್ನು ಅಲ್ಲಿಂದ ಕಳುಹಿಸಿದರೆ ಇನ್ನೊಂದು ಗುಂಪು ಬರುತ್ತಿದೆ. ಈ ನಡುವೆ, ಶಿವಾಜಿ ಪ್ರತಿಮೆಗೆ ಎಂದಿನಂತೆ ಪೂಜೆ ಸಲ್ಲಿಸಬೇಕು ಎಂಬ ನೆಪ ಹೇಳಿಕೊಂಡು ಬಂದ ಎಂಇಎಸ್ ನಾಯಕಿಯರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ನಮ್ಮ ಧಾರ್ಮಿಕ ಭಾವನೆ ಗೌರವಿಸಿ, ನಾವು ಪೂಜೆ ಸಲ್ಲಿಸಿಯಷ್ಟೆ ವಾಪಸಾಗುತ್ತೇವೆ ಎಂದು ಪಟ್ಟು ಹಿಡಿದರು.
ಕೊನೆಗೂ ಅವರಿಗೆ ಪೊಲೀಸರು ಅವಕಾಶ ನೀಡಿದರು. ಗೇಟಿನ ಬೀಗ ತೆಗೆದು, ಉದ್ಯಾನ ಪ್ರವೇಶಕ್ಕೆ ಅನುವು ಮಾಡಿಕೊಟ್ಟರು.
ನಾಯಕಿಯರಾದ ಸರಿತಾ ಪಾಟೀಲ, ರೇಣು ಕಿಲ್ಲೇಕರ ನೇತೃತ್ವದಲ್ಲಿ ಆರು ಮಹಿಳೆಯರು ಶಿವಾಜಿ ಪ್ರತಿಮೆಗೆ ಹಾಲಿನ ಅಭಿಷೇಕ ಮಾಡಿದರು. ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಅವಮಾನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಳಿಕ ಉದ್ಯಾನದ ಒಳಕ್ಕೆ ಪ್ರವೇಶ ನೀಡುವಂತೆ ಆಗ್ರಹಿಸಿ ಬಿಜೆಪಿ ಮುಖಂಡ ಕಿರಣ ಜಾಧವ್ ಅವರು ಶ್ರೀರಾಮ ಸೇನೆ ಹಾಗೂ ಎಂಇಎಸ್ ಮುಖಂಡರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಅವರಲ್ಲೂ ಕೆಲವರನ್ನು ಪೊಲೀಸರು ಉದ್ಯಾನದ ಒಳ ಹೋಗಲು ಬಿಟ್ಟರು. ಅವರು ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.