ADVERTISEMENT

ಜಾಗರಣೆಯ ದಿನ ಜಾಗೃತಿಯ ದಿನವಾಗಲಿ: ಬಸವರಾಜ ಜಗಜಂಪಿ

ಕಾರಂಜಿ ಮಠದಲ್ಲಿ ಶಿವಾನುಭವ ಗೋಷ್ಠಿ, ಮಹಾಶಿವರಾತ್ರಿ ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2024, 4:40 IST
Last Updated 10 ಮಾರ್ಚ್ 2024, 4:40 IST
ಬೆಳಗಾವಿಯ ಕಾರಂಜಿ ಮಠದಲ್ಲಿ ಶುಕ್ರವಾರ ಆಚರಿಸಲಾದ ಶಿವಾನುಭವ, ಶಿವರಾತ್ರಿಯಲ್ಲಿ ಪ್ರೊ.ಬಸವರಾಜ ಜಗಜಂಪಿ ಮಾತನಾಡಿದರು. ಗುರುಸಿದ್ಧ ಸ್ವಾಮೀಜಿ, ಅಲ್ಲಮಪ್ರಭು ಸ್ವಾಮೀಜಿ ಇತರರು ಪಾಲ್ಗೊಂಡಿದ್ದರು
ಬೆಳಗಾವಿಯ ಕಾರಂಜಿ ಮಠದಲ್ಲಿ ಶುಕ್ರವಾರ ಆಚರಿಸಲಾದ ಶಿವಾನುಭವ, ಶಿವರಾತ್ರಿಯಲ್ಲಿ ಪ್ರೊ.ಬಸವರಾಜ ಜಗಜಂಪಿ ಮಾತನಾಡಿದರು. ಗುರುಸಿದ್ಧ ಸ್ವಾಮೀಜಿ, ಅಲ್ಲಮಪ್ರಭು ಸ್ವಾಮೀಜಿ ಇತರರು ಪಾಲ್ಗೊಂಡಿದ್ದರು   

ಬೆಳಗಾವಿ: ‘ಶಿವರಾತ್ರಿ ಎಂದರೆ ಕೇವಲ ಜಾಗರಣೆಯ ದಿನವಲ್ಲ. ಇದು ಜಾಗೃತಿಯ ದಿನ. ಶಿವನೊಂದಿಗೆ ಕೊಡುವುದೇ ಉಪವಾಸ. ಶಿವಾಯ ನಮಃ ಪಂಚಾಕ್ಷರಿ ಮಂತ್ರದಲ್ಲಿ ಶಿವನ ಮಹತ್ವ ಹಾಗೂ ಮಾನಸಿಕ, ದೈಹಿಕ ಆರೋಗ್ಯದ ಗುಟ್ಟು ಇದೆ’ ಎಂದು ಸಾಹಿತಿ ಬಸವರಾಜ ಜಗಜಂಪಿ ಹೇಳಿದರು.

ಇಲ್ಲಿನ ಕಾರಂಜಿ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ 272ನೇ ಶಿವಾನುಭವ ಗೋಷ್ಠಿ ಹಾಗೂ ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ಕನ್ನಡ ಪ್ರಾಚೀನ ಸಾಹಿತ್ಯದಲ್ಲಿ ಕೂಡ ಶಿವರಾತ್ರಿ ಮಹಿಮೆಯನ್ನು ಕುರಿತು ಅನೇಕ ಕಥೆಗಳು, ಉಪಕಥೆಗಳು ಅನಾವರಣಗೊಂಡಿವೆ. ಶಿವ ಸೌಂದರ್ಯದ ರೂಪ. ಜಗದ ನಿರ್ಮಾತೃ. ವಚನಕಾರರು ಶಿವನನ್ನು ಜಗತ್ತಿನ ಚರಾಚರ ದಲ್ಲಿಯೂ ಕೂಡ ಕಂಡರು. ಅಂತಹ ಶಿವರಾತ್ರಿ ನಮ್ಮ ಬದುಕಿನ ಆತ್ಮ ಯೋಗವನ್ನು ಹೆಚ್ಚಿಸುತ್ತದೆ’ ಎಂದು ಹೇಳಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ರಾಘವೇಂದ್ರ ಕಾಗವಾಡ ಮಾತನಾಡಿ, ‘ಉಪವಾಸ, ಜಾಗರಣೆ, ಪೂಜೆಯು- ಶಿವರಾತ್ರಿಯ ಮಹತ್ವದ ಮೂರು ಅಂಗಗಳಾಗಿವೆ. ಒಂದು ಹಗಲು ಒಂದು ರಾತ್ರಿ ಸಂಸಾರದ ಜಂಜಾಟದಿಂದ ದೂರವಿದ್ದು ಶಿವಸ್ತುತಿ, ಶಿವಧ್ಯಾನದಲ್ಲಿ ಮಗ್ನವಾಗಿ ಬದುಕನ್ನು ಚಿರಂತನ ಗೊಳಿಸಬೇಕೆಂದು ವಚನಕಾರರು ದಾಸರು ಅಭಿವ್ಯಕ್ತಿಪಡಿಸಿದ್ದಾರೆ. ಧರ್ಮ– ಅರ್ಥ– ಕಾಮ ಮೋಕ್ಷಗಳನ್ನು ಶಿವಮಾರ್ಗದಲ್ಲಿ ಪೂರೈಸಿಕೊಂಡು ಈ ಬದುಕನ್ನು ಅರ್ಥಪೂರ್ಣಗೊಳಿಸಬೇಕೆ ಬುದೇ ಶಿವರಾತ್ರಿಯ ದಿವ್ಯ ಸಂದೇಶವಾಗಿದೆ’ ಎಂದು ನುಡಿದರು.

ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಸ್ವಾಮಿಗಳು ಆಶೀರ್ವಚನ ನೀಡಿ, ‘ಭಗವಂತ ನಮಗೆ ಸಾಕಷ್ಟು ಕಾಲಾವಕಾಶ ನೀಡಿದ್ದರೂ ನಮಗೆಲ್ಲ ಶಿವನನ್ನು ಸ್ಮರಿಸಲು ಸಾಧ್ಯವೇ ಆಗುತ್ತಿಲ್ಲ. ಶಿವಸ್ಮರಣೆ ಮಾತ್ರ ನಮ್ಮ ಬದುಕಿಗೆ ಚೈತನ್ಯವನ್ನು ಶಕ್ತಿ ಸಾಮರ್ಥ್ಯಗಳನ್ನು ತಂದುಕೊಡುತ್ತದೆ. ಮಠ– ಮಾನ್ಯಗಳು ಅಂತ ಶಿವ ದರ್ಶನವನ್ನ ಮಾಡುವ ಕೆಲಸವನ್ನು ಅನಾದಿಕಾಲದಿಂದಲೂ ಮಾಡಿಕೊಂಡು ಬರುತ್ತಿವೆ. ಮಕ್ಕಳಿಗೆ ಶಿವ ಧ್ಯಾನ ಶಿವಯೋಗವನ್ನು ಕಳಿಸಿಕೊಡುವುದು ಇಂದಿನ ಅನಿವಾರ್ಯ’ ಎಂದು ತಿಳಿಸಿದರು.

ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶೋಭಾ ಮಲ್ಲಿಕಾರ್ಜುನ ಜಾಬಿನ್ ವಚನ ಪ್ರಾರ್ಥನೆ ಸಲ್ಲಿಸಿದರು. ಶ್ರೀಕಾಂತ್ ಶಾನವಾಡ ಪ್ರಸ್ತಾವಿಕವಾಗಿ ಮಾತನಾಡಿದರು. ವಿ.ಕೆ. ಪಾಟೀಲ ವಂದಿಸಿದರು. ಎ.ಕೆ. ಪಾಟೀಲ ನಿರೂಪಿಸಿದರು.

ಮುಗಳಖೋಡದ ಯಲ್ಲಾಲಿಂಗೇಶ್ವರ ಮಠದಲ್ಲಿ ಶುಕ್ರವಾರ ರಾತ್ರಿ ನಡೆದ ಶಿವರಾತ್ರಿ ಕಾರ್ಯಕ್ರಮದಲ್ಲಿ ಮುರುಘರಾಜೇಂದ್ರ ಸ್ವಾಮೀಜಿ ಅವರು ಗದ್ದುಗೆಗೆ ಪುಷ್ಪಾರ್ಚನೆ ಮಾಡಿದರು

‘ಗುರುವಿನ ನಂಬಿದರೆ ನೆಮ್ಮದಿ’

ಮುಗಳಖೋಡ: ‘ಗುರು ಯಾವಾಗಲೂ ಸನ್ಮಾರ್ಗ ತೋರಿಸುತ್ತಾನೆ. ನೀವು ಗುರುವಿನ ಮೇಲೆ ನಂಬಿಕೆ ಇಟ್ಟು ನಡೆದುಕೊಂಡರೆ ನೆಮ್ಮದಿ ಶಾಂತಿ ಸಿಗುತ್ತದೆ’ ಎಂದು ಇಲ್ಲಿನ ಯಲ್ಲಾಲಿಂಗೇಶ್ವರ ಮಠದ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು. ಮಠದಲ್ಲಿ ಮಹಾ ಶಿವರಾತ್ರಿಯ ಅಂಗವಾಗಿ ಶುಕ್ರವಾರ ನಡೆದ ವಿಶೇಷ ಇಷ್ಟಲಿಂಗ ಪೂಜಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು ‘ತೋರಿಕೆ ಭಕ್ತಿ ಮಾಡದೇ ಶ್ರದ್ಧೆಯಿಂದ ಕೂಡಿರಬೇಕು. ಭಕ್ತಿ ಪ್ರಾರಂಭ ಮಾಡಿದರೆ ದೇವರು ಒಲಿಯುವವರೆಗೂ ಬಿಡಬಾರದು’ ಎಂದರು. ಸಂಜೆ ಪ್ರಾರಂಭವಾದ ಇಷ್ಟಲಿಂಗ ಪೂಜೆಯಲ್ಲಿ ವಿವಿಧ ನಾಮಾವಳಿಗಳು ಯಲ್ಲಾಲಿಂಗ ಗುರು ಸಿದ್ದರಾಮ ಹಾಗೂ ಶಿವ ನಾಮಸ್ಮರಣೆ ಮಾಡಲಾಯಿತು. ಶ್ರೀಗಳು ಸುವರ್ಣ ಕೀರಿಟ ಧಾರಣೆ ಮಾಡಿ ವಿವಿಧ ಬಗೆಯ ಪುಷ್ಪಗಳಿಂದ ಗದ್ದುಗೆ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ರಾತ್ರಿ ಯಲ್ಲಾಲಿಂಗೇಶ್ವರ ಕರ್ತೃಗದ್ದುಗೆಗೆ ರುದ್ರಾಭಿಷೇಕ ಜಪಗಳು ನಡೆದವು. ಅಪ್ಪಾಜಿ ಸಂಗೀತ ಕಲಾ ಬಳಗದವರಿಂದ ಸಂಗೀತ ಸೇವೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.