ADVERTISEMENT

ಹಗಲು– ರಾತ್ರಿ ಶಿವನದ್ದೇ ಧ್ಯಾನ

ಎಲ್ಲ ದೇವಸ್ಥಾನಗಳಲ್ಲೂ ಜನರ ಸಾಲು, ಇಡೀ ದಿನ ಭಜನೆ, ಶಿವನಾಮ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 16:06 IST
Last Updated 8 ಮಾರ್ಚ್ 2024, 16:06 IST
ಬೆಳಗಾವಿಯ ಕಪಿಲೇಶ್ವರ ಮಂದಿರದಲ್ಲಿ ಶಿವರಾತ್ರಿ ಅಂಗವಾಗಿ ಅಪಾರ ಭಕ್ತರು ಸೇರಿದ್ದರು
ಬೆಳಗಾವಿಯ ಕಪಿಲೇಶ್ವರ ಮಂದಿರದಲ್ಲಿ ಶಿವರಾತ್ರಿ ಅಂಗವಾಗಿ ಅಪಾರ ಭಕ್ತರು ಸೇರಿದ್ದರು   

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಶುಕ್ರವಾರ ಮಹಾಶಿವರಾತ್ರಿಯನ್ನು ಶ್ರದ್ಧೆ, ಭಕ್ತಿಯಿಂದ ಆಚರಿಸಲಾಯಿತು. ಹಗಲು–ರಾತ್ರಿ ಎನ್ನದೆ ಇಡೀ ದಿನ ಜನರು ಶಿವನ ದೇವಸ್ಥಾನಗಳಲ್ಲಿ ಕಾಲ ಕಳೆದರು.

ಇಲ್ಲಿನ ಕೆಎಲ್‌ಇ ಶಿವಾಲಯ, ಕಪಿಲೇಶ್ವರ ಮಂದಿರ, ಮಿಲಿಟರಿ ಮಹಾದೇವ ಮಂದಿರ, ಕಣಬರಗಿಯ ಸಿದ್ಧೇಶ್ವರ ಬೆಟ್ಟ, ಶಹಾಪುರದ ಮಹಾದೇವ, ಶಾಹುನಗರ ಶಿವ ಮಂದಿರ, ಶಿವಾಜಿನಗರದ ವೀರಭದ್ರೇಶ್ವರ ದೇವಸ್ಥಾನ, ಪೊಲೀಸ್ ಕೇಂದ್ರ ಸ್ಥಾನದಲ್ಲಿರುವ ವೀರಭದ್ರೇಶ್ವರ ದೇವಸ್ಥಾನ, ಸಂಗಮೇಶ್ವರ ನಗರ ಸಂಗಮೇಶ್ವರ ಮಂದಿರ, ಮಹಾಂತೇಶ ನಗರದ ಶಿವಾಲಯ, ಶಿವಶಕ್ತಿ ಕಾಲೊನಿ, ಸದಾಶಿವ ನಗರದ ಸದಾಶಿವ, ಸಹ್ಯಾದ್ರಿ ನಗರದ ಮಹಾಬಳೇಶ್ವರ, ಶಿವಬಸವ ನಗರದ ‍ಪಶುಪತಿ,  ರಾಮತೀರ್ಥ ನಗರದ ಶಿವಾಲಯ, ಬಿ.ಕೆ. ಕಂಗ್ರಾಳಿಯ ಕಲ್ಮೇಶ್ವರ ದೇಗುಲ, ರಾಮಲಿಂಗ ಖಿಂಡ ಗಲ್ಲಿಯ ರಾಮಲಿಂಗೇಶ್ವರ ದೇಗುಲದಲ್ಲಿ ಅಪಾರ ಸಂಖ್ಯೆಯ ಜನ ಸೇರಿ ಭಕ್ತಿಯಿಂದ ಪೂಜೆ ಸಲ್ಲಿಸಿದರು.

ಶಿವ ದೇವಸ್ಥಾನಗಳೂ ಸೇರಿದಂತೆ ಜಿಲ್ಲೆಯ ಎಲ್ಲ ದೇವಸ್ಥಾನಗಳಲ್ಲೂ ನಸುಕಿನ 4ರಿಂದಲೇ ಪೂಜಾ ಕೈಂಕರ್ಯಗಳು ಆರಂಭವಾದವು. ಪರಮಶಿವನಿಗೆ ರುದ್ರಾಭಿಷೇಕ, ಪುಷ್ಪಾಲಂಕಾರ, ಬಿಲ್ವಪತ್ರಿಗಳಿಂದ ಅಲಂಕರಿಸಲಾಯಿತು. ದೇವಸ್ಥಾನಗಳನ್ನು ತೋರಣ ಕಟ್ಟಿ ವಿದ್ಯುದ್ದೀಪಾಲಂಕಾರ ಮಾಡಲಾಗಿತ್ತು.

ADVERTISEMENT

ಕಪಿಲೇಶ್ವರ ಮಂದಿರದಲ್ಲಂತೂ ಕಿಲೋಮೀಟರ್‌ ಉದ್ದಕ್ಕೂ ಸರದಿ ಇತ್ತು. ರಾತ್ರಿ ಇಡೀ ಶಿವನಾಮ ಜಪ, ಶಿವಭಜನೆ, ಶಿವಸ್ತುತಿಗಳು ಸಾಂಗವಾಗಿ ನೆರವೇರಿದವು. ಬಹುಪಾಲು ಜನ ಉಪವಾಸ ವ್ರತ ಆಚರಿಸಿದ ಕಾರಣ ದೇವಸ್ಥಾನಗಳಲ್ಲಿ ಹಣ್ಣು, ಕರ್ಜೂರ, ಕಡಲೆ ಪ್ರಸಾದ ವಿತರಿಸಲಾಯಿತು.

ಮಹಿಳಾ ದಿನಾಚರಣೆಯೂ ಶಿವರಾತ್ರಿಯ ದಿನವೇ ಬಂದಿದ್ದರಿಂದ ಕೆಎಲ್‌ಇ ಶಿವಾಲಯದಲ್ಲಿ ಅರ್ಧನಾರೀಶ್ವರ ಮೂರ್ತಿ ಮಾಡಿದ್ದು ಗಮನ ಸೆಳೆಯಿತು.

ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸೇವಾಕೇಂದ್ರದಿಂದ ಶಿವರಾತ್ರಿ ಅಂಗವಾಗಿ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.