ಬೆಳಗಾವಿ: ‘ಬಿಜೆಪಿ ಎಸ್.ಸಿ ಮೋರ್ಚಾ ಕಾರ್ಯಕರ್ತ, ರಾಜ್ಯ ಕಾರ್ಯಕಾರಿಣಿ ಸದಸ್ಯ ಪೃಥ್ವಿ ಸಿಂಗ್ ಅವರ ಮೇಲೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಅವರ ಸಹಚರರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಆರೋಪಿಗಳನ್ನು ರಾತ್ರಿಯೇ ಬಂಧಿಸಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಬಿಜೆಪಿ ಪ್ರತಿಯೊಬ್ಬ ಕಾರ್ಯಕರ್ತ ಬೀದಿಗಿಳಿಯಬೇಕಾಗುತ್ತದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಸಿದರು.
ಇಲ್ಲಿನ ಕೆಎಲ್‌ಇ ಆಸ್ಪತ್ರೆಗೆ ಸೋಮವಾರ ರಾತ್ರಿ ಭೇಟಿ ನೀಡಿ ಪೃಥ್ವಿಸಿಂಗ್ ಅವರ ಆರೋಗ್ಯ ವಿಚಾರಿಸಿದ ಬಳಿಕ ಅವರು ಮಾತನಾಡಿದರು. ‘ಹಲ್ಲೆಗೆ ಕಾರಣ ಏನೆಂದು ಇನ್ನೂ ಗೊತ್ತಾಗಬೇಕಿದೆ. ಏನೇ ಇದ್ದರೂ ಆಡಳಿತ ಪಕ್ಷದ ಒಬ್ಬ ಜನಪ್ರತಿನಿಧಿಯ ವರ್ತನೆ ಖಂಡನಾರ್ಹ’ ಎಂದರು.
‘ಹಲ್ಲೆ ನಡೆದಾಗ ಚನ್ನರಾಜ ಕೂಡ ಕಾರಿನಲ್ಲಿದ್ದರು. ಅವರ ಬಲಗೈ ಬಂಟ ಸುದೀಪ ಜಾಧವ, ಆಪ್ತ ಕಾರ್ಯದರ್ಶಿ ಸದ್ಧಾಂ, ಗನ್‌ಮ್ಯಾನ್‌ಗಳು ಸೇರಿಕೊಂಡು ಮನೆಗೆ ಹೋಗಿ ಹೊರಗೆಳೆದು ಹೊಡೆದಿದ್ದಾರೆ ಎಂದು ಪೃಥ್ವಿ ಸಿಂಗ್ ಹೇಳಿದ್ದಾರೆ. ಈ ಘಟನೆ ವಿಡಿಯೊ ಮಾಡಿಕೊಳ್ಳಲು ಹೋದಾಗ ಅವರ ಮೊಬೈಲ್ ಕಿತ್ತುಕೊಂಡಿದ್ದಾರೆ. ಇದರಿಂದ ಪೃಥ್ವಿ ಸಿಂಗ್ ಹೆದರಿದ್ದಾರೆ. ರಕ್ಷಣೆ ಕೊಡಿಸುವಂತೆ ಕೇಳಿದ್ದಾರೆ’ ಎಂದರು.
‘ಈ ಘಟನೆಯನ್ನು ನಾವು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಹಲ್ಲೆ ಮಾಡಿದ ಚನ್ನರಾಜ ಬಹಳ ಪ್ರಭಾವಿ ವ್ಯಕ್ತಿ. ಮೇಲಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಸಹೋದರ. ಜನಪ್ರತಿನಿಧಿ ಆಗಿದ್ದೂ ಈ ರೀತಿ ಹಾಡಹಗಲೇ ಹಲ್ಲೆ ಮಾಡಿದ್ದಾರೆ. ಇವರು ಪ್ರಭಾವ ಬೀರಿ ಪ್ರಕರಣ ದಾರಿ ತಪ್ಪಿಸಬಹುದು. ಆದ್ದರಿಂದ ಸ್ಥಳೀಯ ಪೊಲೀಸರ ಮೇಲೆ ನಮಗೆ ನಂಬಿಕೆ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲೇ ಇದ್ದಾರೆ. ಅವರು ಇದ್ದಾಗಿಯೂ ಕಾಂಗ್ರೆಸ್ಸಿಗರು ಇಂಥ ಕೃತ್ಯ ಎಸಗಿದ್ದಾರೆ. ಆದ್ದರಿಂದ ಚನ್ನರಾಜ ಹಾಗೂ ಅವರ ಸಹಚರರನ್ನು ರಾತ್ರಿಯೇ ಬಂಧಿಸಬೇಕು’ ಎಂದು ಆಗ್ರಹಿಸಿದರು.
‘ಘಟನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ಕ್ರಮ ವಹಿಸಬೇಕು. ಇಲ್ಲದಿದ್ದರೆ ರಾಜ್ಯದ ಜನತೆಗೆ ಏನು ಸಂದೇಶ ಕೊಡುತ್ತೀರಿ’ ಎಂದೂ ವಿಜಯೇಂದ್ರ ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.