ಸವದತ್ತಿ: ಪಟ್ಟಣದ ಹೃದಯ ಭಾಗದ ಗಿರಿಜನ್ನವರ ಓಣಿಯಲ್ಲಿನ ಉದಯಗಿರಿ ರಾಮಲಿಂಗೇಶ್ವರ ದೇವಸ್ಥಾನ ಪುರಾತನ ಐತಿಹ್ಯದ ಕುರುಹುಗಳನ್ನು, ಮುನ್ನೂರು ವರ್ಷಗಳ ಇತಿಹಾಸವನ್ನು ಸಾರಿ ಹೇಳುತ್ತಿದೆ. ಶ್ರೀರಾಮನವಮಿ ಸಂದರ್ಭದಲ್ಲಿ ಇಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.
17ನೇ ಶತಮಾನದಲ್ಲಿ ದಾನಶೂರರೆನಿಸಿದ್ದ ಶಿರಸಂಗಿ ದೇಸಾಯಿ ಅವರು ಪಟ್ಟಣದ ಮದ್ಯದಲ್ಲಿರುವ ದೇಸಾಯಿ ಕೋಟೆ ನಿರ್ಮಾಣದ ಸಂದರ್ಭದಲ್ಲಿ ಈ ದೇವಸ್ಥಾನ ನಿರ್ಮಿಸಿದರು ಎನ್ನಲಾಗುತ್ತಿದೆ.
ಕೋಟೆಯಲ್ಲಿರುವ ಕಲ್ಲುಗಳ ಆಕೃತಿ ಮತ್ತು ದೇವಸ್ಥಾನದ ಕಟ್ಟಡದ ಕಲ್ಲುಗಳ ಆಕೃತಿಗಳೆರಡೂ ಹೋಲುತ್ತವೆ. ಸಂಪೂರ್ಣ ಕಲ್ಲಿನಿಂದ ನಿರ್ಮಾವಾದ ದೇವಸ್ಥಾನದ ಗರ್ಭಗುಡಿಯಲ್ಲಿ ಈಶ್ವರನ ದೊಡ್ಡ ಮೂರ್ತಿ ಇದೆ. ಗರ್ಭ ಗುಡಿ ಎದುರಿಗೆ ದೊಡ್ಡದಾದ ನಂದಿ ವಿಗ್ರಹವಿದೆ. ಈ ವಿಗೃಹದ ನಾಲ್ಕೂ ದಿಕ್ಕಿಗೆ ವೀರಭದ್ರೇಶ್ವರ, ಮಹಾಗಣಪತಿ, ಮಹಾಲಕ್ಷ್ಮಿ ಹಾಗೂ ಕಾಳಬೈರವೇಶ್ವರ ದೇವರ ಕಲ್ಲಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಇವು ಆಕರ್ಷಣೀಯವಾಗಿವೆ.
ದೇವಸ್ಥಾನ ಅತ್ಯುತ್ತಮ ಕಳಸ ಹೊಂದಿದೆ. ಕಳಸದ ಸುತ್ತುವರಿದ ಭಾಗದಲ್ಲಿ ಹಿಂದೂ ಧರ್ಮದ ಎಲ್ಲ ದೇವರ ಮೂರ್ತಿಗಳನ್ನು ಕೆತ್ತಲಾಗಿದೆ. ವಿಶಾಲವಾದ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಲು ಪಾವಳಿ ಇದ್ದು, ಈ ದೇವಸ್ಥಾನದ ಪಕ್ಕದಲ್ಲಿಯೇ ಮತ್ತೊಂದು ಈಶ್ವರನ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿರುವ ಈಶ್ವರ ಮತ್ತು ನಂದಿ ವಿಗ್ರಹಗಳು ಹಲವು ವರ್ಷಗಳಿಂದ ಜಲಾವೃತದಲ್ಲಿವೆ. ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಆಂಜನೇಯ, ನಾಗದೇವತೆ, ಬನ್ನಿ ಮಹಾಕಾಳಿ ಸೇರಿದಂತೆ ಹಲವಾರು ದೇವರುಗಳೊಂದಿಗೆ ದೈವಿ ವೃಕ್ಷಗಳು ಇಲ್ಲಿವೆ.
ದೇವಸ್ಥಾನದ ಮುಂಭಾಗದ ಬಲಗಡೆ ಗದ್ದುಗೆ ಇದೆ. ಇದು ಪ್ರಭಾವಶಾಲಿ ಹಾಗೂ ಮಹಾನ್‌ಪುರುಷರ ಗದ್ದುಗೆ ಎನಿಸಿದೆ. ಇದು ಇಷ್ಟಾರ್ಥ ಸಿದ್ದಿ ಗದ್ದುಗೆ ಎಂಬ ಅಭಿಪ್ರಾಯ ಭಕ್ತರಲ್ಲಿದೆ. ಭಕ್ತರು ಈ ಗದ್ದುಗೆಯ ದರ್ಶನ ಪಡೆದು ಭಕ್ತಿಯನ್ನು ಸಮರ್ಪಿಸಿ ಸಮಸ್ಯೆಗಳ ಪರಿಹಾರಕ್ಕೆ ಪ್ರಾರ್ಥಿಸುವ ಪರಿಪಾಠವಿದೆ.
ಶ್ರೀರಾಮನವಮಿಯಂದು ಈ ದೇಗುಲ, ಕೆಂಚಲಾರಕೊಪ್ಪದಲ್ಲಿರುವ ಶ್ರೀರಾಮಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸೂರ್ಯವಂಶ ಕ್ಷತ್ರಿಯ (ಕಲಾಲ) ಸಮಾಜದವರು ಶ್ರೀರಾಮ ಪೂಜೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.