ADVERTISEMENT

ಸರ್ಕಾರ ಕನ್ನಡವನ್ನು ಅನ್ನದ ಭಾಷೆಯಾಗಿ ಪರಿವರ್ತಿಸಬೇಕಿದೆ: ಸಿದ್ಧರಾಮ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 16:21 IST
Last Updated 3 ಅಕ್ಟೋಬರ್ 2024, 16:21 IST
<div class="paragraphs"><p>ನಾಡಹಬ್ಬ ಉತ್ಸವದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ&nbsp;ಗದುಗಿನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ</p></div>

ನಾಡಹಬ್ಬ ಉತ್ಸವದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗದುಗಿನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ

   

ಬೆಳಗಾವಿ: ‘ಇಂದು ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಕನ್ನಡ ಭಾಷೆಯನ್ನು ಆದ್ಯತೆ ಮೇರೆಗೆ ಬಳಸಬೇಕಿದೆ. ರಾಜ್ಯ ಸರ್ಕಾರವೂ ಕನ್ನಡವನ್ನು ಅನ್ನದ ಭಾಷೆಯಾಗಿ ಪರಿವರ್ತಿಸಬೇಕಿದೆ’ ಎಂದು ಗದುಗಿನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರದಿಂದ ಆರಂಭಗೊಂಡ ಐದು ದಿನಗಳ ನಾಡಹಬ್ಬ ಉತ್ಸವದ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ADVERTISEMENT

‘ಇಂದು ಪಾಲಕರಲ್ಲಿ ಇಂಗ್ಲಿಷ್‌ ವ್ಯಾಮೋಹ ಹೆಚ್ಚಾಗಿದೆ. ಅದೇ ಅನ್ನದ ಭಾಷೆಯೂ ಆಗಿದೆ. ಎಲ್ಲಿಯವರೆಗೆ ಕನ್ನಡವೂ ಅನ್ನದ ಭಾಷೆಯಾಗುವುದಿಲ್ಲವೋ, ಅಲ್ಲಿಯವರೆಗೆ ಜನರು ಕನ್ನಡದ ಬಗ್ಗೆ ಒಲವು ತೋರುವುದಿಲ್ಲ’ ಎಂದರು.

‘ಸೀರೆಗೆ ದಡಿ ಗಟ್ಟಿ ಇರುವಂತೆ, ನಾಡಿಗೆ ಗಟ್ಟಿ ಇರಬೇಕು. ಹಾಗಾಗಿ ಗಡಿಭಾಗದ ಬೆಳವಣಿಗೆಗೆ ಸರ್ಕಾರ ಕ್ರಮ ವಹಿಸಬೇಕು. ಗಡಿಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿರುವ ಕನ್ನಡ ಶಾಲೆಗಳ ಸುಧಾರಣೆಯತ್ತ ಗಮನಹರಿಸಬೇಕು’ ಎಂದರು.

‘ಯಾವ ಕಾಲಕ್ಕೂ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಲು ಬಿಡುವುದಿಲ್ಲ. ಇದು ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ. ಆದರೆ, ಗಡಿಗೆ ಸಂಬಂಧಿಸಿದ ಪ್ರಾಧಿಕಾರಗಳ ಅಧ್ಯಕ್ಷರು ಗಡಿಗಳನ್ನೇ ನಿರ್ಲಕ್ಷಿಸುತ್ತಿರುವುದು ಸರಿಯಲ್ಲ’ ಎಂದು ಬೇಸರಿಸಿದರು.

ಉದ್ಘಾಟಿಸಿದ ಸಂಸದ ಜಗದೀಶ ಶೆಟ್ಟರ್‌, ‘ಪ್ರಸ್ತುತ ಕಾಲಘಟ್ಟದಲ್ಲಿ ಕನ್ನಡ ಉಳಿಸಿ, ಬೆಳೆಸಿಕೊಂಡು ಹೋಗುವ ಕೆಲಸವಾಗಬೇಕಿದೆ. ಕನ್ನಡದ ಬಗ್ಗೆ ಜಾಗೃತಿ ಮೂಡಿಸಬೇಕಿದೆ’ ಎಂದರು.

‘ಗಡಿಯಲ್ಲಿ ಕನ್ನಡ ಕಟ್ಟುವ ಸಲುವಾಗಿ 97 ವರ್ಷಗಳಿಂದ ನಾಡಹಬ್ಬ ಉತ್ಸವ ಆಚರಿಸುತ್ತಿರುವುದು ಶ್ಲಾಘನೀಯ. ಈ ಭಾಗದಲ್ಲಿ ಕನ್ನಡದ ಬೆಳವಣಿಗೆಗೆ ನಾಗನೂರು ರುದ್ರಾಕ್ಷಿಮಠದ ಕೊಡುಗೆಯೂ ದೊಡ್ಡದಿದೆ’ ಎಂದರು.

ಮಾಜಿ ಸಂಸದೆ ಮಂಗಲಾ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಬಿ.ಎಸ್‌.ಗವಿಮಠ ಉಪನ್ಯಾಸ ನೀಡಿದರು. ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ಎಚ್‌.ಬಿ.ರಾಜಶೇಖರ, ಪ್ರಧಾನ ಕಾರ್ಯದರ್ಶಿ ಸಿ.ಕೆ.ಜೋರಾಪುರ, ಎಚ್‌.ಐ.ತಿಮ್ಮಾಪುರ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.