ADVERTISEMENT

ಮೂಡಲಗಿ: ರೇಷ್ಮೆ ತಂತ್ರಜ್ಞಾನಿ ಸೋನವಾಲಕರ

‘ಜೀವಮಾನ ಸಾಧನೆ’ ರಾಷ್ಟ್ರೀಯ ಪ್ರಶಸ್ತಿ ಸೇರಿ ಹಲವು ಪುರಸ್ಕಾರ

ಬಾಲಶೇಖರ ಬಂದಿ
Published 10 ನವೆಂಬರ್ 2024, 4:16 IST
Last Updated 10 ನವೆಂಬರ್ 2024, 4:16 IST
<div class="paragraphs"><p>ಟಿ.ಎನ್‌.ಸೋನವಾಲಕರ</p></div>

ಟಿ.ಎನ್‌.ಸೋನವಾಲಕರ

   

ಮೂಡಲಗಿ: ಬಾಲ್ಯದಲ್ಲಿ ಶಿಕ್ಷಣ ಪಡೆಯಲು ಅನುಕೂಲವಿಲ್ಲದೆ ಎಮ್ಮೆ ಕಾಯುತ್ತಿದ್ದ ಬಾಲಕ,
ಇಂದು ರೇಷ್ಮೆ ತಂತ್ರಜ್ಞಾನ ರಂಗ ದಲ್ಲಿ ಮಿಂಚಿದ್ದಾರೆ.  ರೇಷ್ಮೆ ತಂತ್ರಜ್ಞಾನ ಮತ್ತು ಉದ್ದಿಮೆ ಬೆಳವಣಿಗೆಗೆ ಅವರು ಕೈಗೊಂಡ ವಿವಿಧ ಸಂಶೋಧನೆಗಳು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದುಕೊಂಡಿವೆ.

ಇದು ಇಲ್ಲಿನ ತಮ್ಮಣ್ಣ ಸೋನವಾಲಕರ (ಟಿ.ಎನ್‌.ಸೋನವಾಲಕರ) ಅವರ ಯಶೋಗಾಥೆ. ವಯಸ್ಸು 91. ಆದರೆ, ರೇಷ್ಮೆ ತಂತ್ರಜ್ಞಾನ ರಂಗದ ಬೆಳವಣಿಗೆಗೆ ಅವರ ಮನಸ್ಸು ಇಂದಿಗೂ ತುಡಿಯುತ್ತದೆ.

ADVERTISEMENT

ಭಾರತದಲ್ಲಿ ಗುಣಮಟ್ಟದ ರೇಷ್ಮೆ ಸಿಗದೆ, ವಿದೇಶದಿಂದ ಆಮದು ಮಾಡಿಕೊಳ್ಳುವ  ಕಾಲವೊಂದಿತ್ತು. ರೈತರು ಬೆಳೆದ ರೇಷ್ಮೆ ಗೂಡಿನಿಂದ ನೂಲು ಬಿಡಿಸುವುದು ಸರಳವಾಗಿರಲಿಲ್ಲ. ಇದನ್ನು ಮನಗಂಡ ಸೋನವಾಲಕರ, ರೇಷ್ಮೆ ಗೂಡಿನಿಂದ ಸರಾಗವಾಗಿ ನೂಲು ಬಿಡಿಸುವ ಸುಧಾರಿತ ಯಂತ್ರ, ಪೆಡಲ್‌ ಸ್ಪಿನ್ನಿಂಗ್‌ ಯಂತ್ರಗಳನ್ನು ಆವಿಷ್ಕರಿಸಿದರು.

ಕೃಷಿ ಕುಟುಂಬದಲ್ಲಿ ಜನಿಸಿ, ಮುಂಬೈ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್‌ ವ್ಯಾಸಂಗ ಮಾಡಿದ ಅವರು, ಮೈಸೂರಿನ ಕೇಂದ್ರೀಯ ರೇಷ್ಮೆ ಮಂಡಳಿಯಲ್ಲಿ ಕಿರಿಯ ಸಂಶೋಧಕರಾಗಿದ್ದರು. 1982ರಲ್ಲಿ ಬೆಂಗಳೂರಿನಲ್ಲಿ ಕೇಂದ್ರೀಯ ರೇಷ್ಮೆ ತಾಂತ್ರಿಕ ಸಂಶೋಧನಾ ಸಂಸ್ಥೆ ಸ್ಥಾಪಿಸಿದರು.

ಹಲವು ಆವಿಷ್ಕಾರ: ಟಿ.ಎನ್‌.ಸೋನವಾಲಕರ ಅವರು, ಸುಧಾರಿತ ಟಸರ ನೂಲು ಬಿಚ್ಚುವಿಕೆ ಯಂತ್ರ, ಹಿಪ್ಪುನೆರಳೆ, ರೇಷ್ಮೆ ನೂಲು ಬಿಚ್ಚುವಿಕೆಗಾಗಿ ಸುಧಾರಿತ ಚರಕ, ಸುಧಾರಿತ ಪೆಡಲ್‌ ಸ್ಪಿನ್ನಿಂಗ್ ಯಂತ್ರ, ಚರಕ ಮತ್ತು ಕಾಟೇಜ್‌ ಬೆಸಿನ್‌ಗಳಿಗಾಗಿ ಸುಧಾರಿತ ಒಲೆಗಳು, ಹಿಪ್ಪುನೆರಳು ರೇಷ್ಮೆ ನೂಲು ಬಿಚ್ಚುವಿಕೆಗಾಗಿ ಕಾಟೇಜ್‌ ಬೆಸಿನ್ ಹೀಗೆ... ಹಲವು ಆವಿಷ್ಕಾರಗಳನ್ನು ಮಾಡಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ 105ಕ್ಕೂ ಅಧಿಕ ಪ್ರಬಂಧ ಮಂಡಿಸಿದ್ದಾರೆ. ಇಂಗ್ಲೆಂಡ್‌, ಜಪಾನ್, ಚೀನಾ, ಹಾಂಕಾಂಗ್, ಅಮೆರಿಕ, ಸಿಂಗಾಪುರ, ಫ್ರಾನ್ಸ್, ಇಟಲಿ, ನೇಪಾಳ, ಫಿಲಿಫೈನ್ಸ್, ಬಾಂಗ್ಲಾದೇಶ, ಶ್ರೀಲಂಕಾಕ್ಕೆ ಭೇಟಿ ನೀಡಿ, ತಮ್ಮ ಜ್ಞಾನ ಪ್ರಚುರಪಡಿಸಿದ್ದಾರೆ.

ಇತ್ತೀಚೆಗೆ ನಡೆದ ಕೇಂದ್ರ ಸರ್ಕಾರದ ಕೇಂದ್ರೀಯ ರೇಷ್ಮೆ ಮಂಡಳಿ ಸ್ಥಾಪನೆ ಅಮೃತ ಮಹೋತ್ಸವದ ಸಮಾರಂಭದಲ್ಲಿ ಅವರಿಗೆ ‘ಜೀವಮಾನ ಸಾಧನೆ’ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 1996ರಲ್ಲಿ ಫ್ರಾನ್ಸ್‌ನ ‘ಲೂಯಿ ಪಾಶ್ಚರ್ಯ’ ಅಂತರರಾಷ್ಟ್ರೀಯ ಪ್ರಶಸ್ತಿ, ಶೇಷ್ಠ ವಿಜ್ಞಾನಿ ಪ್ರಶಸ್ತಿ, ಎಮಿನೆಂಟ್‌ ಟೆಕ್ಸ್‌ಟೈಲ್‌ ಎಂಜಿನಿಯರ್‌ ಸೇರಿ ಹಲವು ಪ್ರಶಸ್ತಿಗಳು ಸಂದಿವೆ.

ಭಾರತವು ರೇಷ್ಮೆ ತಂತ್ರಜ್ಞಾನದಲ್ಲಿ ವಿಶ್ವಮಾನ್ಯವಾಗಿ ಗುರುತಿಸಿಕೊಳ್ಳುವಲ್ಲಿ ಟಿ.ಎನ್‌.ಸೋನವಾಲಕರ ಕೊಡುಗೆ ದೊಡ್ಡದು
ಪಿ. ಶಿವಕುಮಾರ, ಸದಸ್ಯ ಕಾರ್ಯದರ್ಶಿ, ಕೇಂದ್ರೀಯ ರೇಷ್ಮೆ ಮಂಡಳಿ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.