ಚಿಕ್ಕೋಡಿ: ‘ಬೆಳ್ಳಿ ಕೆಲಸಾನೇ ನಮ್ ಬದುಕಾಗೈತಿ. ದುಡಿಯಾಕ್ ಹೊಲಾ ಇಲ್ಲ; ಬ್ಯಾರೆ ಕೆಲಸಾ ಮಾಡಾಕ್ ಬರಾಂಗಿಲ್ಲ. ಎರಡ್ ವರ್ಷದಿಂದ ಕೊರೊನಾ ಲಾಕ್‍ಡೌನ್‍ದಾಗ ಬೆಳ್ಳಿ ಕೆಲಸಾ ಬಂದ್ ಆಗೇದ್. ನಾವ್ ಒಪ್ಪತ್ತಿನ ಊಟಕ್ಕೂ ಪರದಾಡೂ ಸ್ಥಿತಿ ಬಂದೈತಿ. ಸರ್ಕಾರದವರು ನಮ್ ಕಷ್ಟ–ನಷ್ಟಾನೂ ತಿಳಕೊಂಡು ನೆರವಿಗೆ ಬರತಾರೇನು ಅಂತ ಕಾಯಾಕತ್ತೇವಿ’.
– ಜೀವನ ನಿರ್ವಹಣೆಗಾಗಿ ಬೆಳ್ಳಿ ಆಭರಣ ತಯಾರಿಕೆ ಕಸುಬನ್ನೇ ನಂಬಿಕೊಂಡಿರುವ, ರಾಜ್ಯದ ಗಡಿಯಲ್ಲಿರುವ ನಿಪ್ಪಾಣಿ ತಾಲ್ಲೂಕಿನ ಮಾಂಗೂರ ಸೇರಿದಂತೆ ಸುತ್ತಲಿನ ಹತ್ತಾರು ಹಳ್ಳಿಗಳಲ್ಲಿ ನೂರಾರು ಕುಟುಂಬದವರು ಹೇಳುವ ವ್ಯಥೆಯ ಕಥೆ ಇದು.
‘ಚಂದೇರಿ ನಗರ’ ಎಂದೇ ಖ್ಯಾತಿಯಾಗಿರುವ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಹುಪರಿ ಪಟ್ಟಣದಿಂದ ಕೂಗಳತೆ ದೂರದಲ್ಲಿರುವ ನಿಪ್ಪಾಣಿ ತಾಲ್ಲೂಕಿನ ಮಾಂಗೂರ ಹಾಗೂ ಕುನ್ನೂರ, ಬಾರವಾಡ, ಕಾರದಗಾ ಮೊದಲಾದ ಗ್ರಾಮಗಳ ಮನೆ ಮನೆಗಳಲ್ಲೂ ಬೆಳ್ಳಿ ಆಭರಣಗಳನ್ನು ತಯಾರಿಸುವ ಕುಶಲಕರ್ಮಿಗಳಿದ್ದಾರೆ.
200ಕ್ಕೂ ಹೆಚ್ಚು ಘಟಕ:
70ರ ದಶಕದಿಂದೀಚೆಗೆ ಮಾಂಗೂರ ಗ್ರಾಮದಲ್ಲಿ ಬೆಳ್ಳಿ ಉದ್ಯಮ ಬೃಹತ್ತಾಗಿ ಬೆಳೆದಿದೆ. ಗ್ರಾಮದಲ್ಲಿ 200ಕ್ಕಿಂತಲೂ ಹೆಚ್ಚು ಬೆಳ್ಳಿ ಆಭರಣ ತಯಾರಿಕೆ ಘಟಕಗಳಿವೆ. ಅವೇ ಕುಶಲಕರ್ಮಿಗಳ ಜೀವನಾಧಾರವಾಗಿವೆ. ಆದರೆ, ಎರಡು ವರ್ಷಗಳಿಂದ ಕೊರೊನಾ ತಡೆಯಲು ಸರ್ಕಾರ ಲಾಕ್‍ಡೌನ್ ವಿಧಿಸುತ್ತಿರುವುದರಿಂದ ಆ ಘಟಕಗಳೇ ಬಂದ್ ಆಗಿರುವುದರಿಂದ ಕುಶಲಕರ್ಮಿಗಳಿಗೆ ಕೆಲಸ ಸಿಗುತ್ತಿಲ್ಲ. ಹೀಗಾಗಿ ಅಸಂಘಟಿತ ವಲಯದ ಈ ಕುಶಲಕರ್ಮಿಗಳು ಕುಟುಂಬ ನಿರ್ವಹಣೆಗಾಗಿ ಹೆಣಗಾಡುವಂತಾಗಿದೆ.
ಹುಪರಿಯ ಉದ್ಯಮಿಗಳು ಬೆಳ್ಳಿ ನೀಡಿ ನಿರ್ದಿಷ್ಟ ಆಭರಣಗಳನ್ನು ತಯಾರಿಸಿ ಕೊಡಲು ನೀಡುವ ಆರ್ಡರ್‌ಗೆ ಅನುಗುಣವಾಗಿ ಮಾಂಗೂರ ಗ್ರಾಮದ ಬೆಳ್ಳಿ ಆಭರಣ ತಯಾರಿಕೆ ಘಟಕಗಳ ಮಾಲೀಕರು ಕುಶಲಕರ್ಮಿಗಳನ್ನು ಬಳಸಿಕೊಂಡು ಆಭರಣಗಳನ್ನು ತಯಾರಿಸಿ ಉದ್ಯಮಿಗಳಿಗೆ ನೀಡುತ್ತಾರೆ. ಕುಶಲಕರ್ಮಿಗಳ ಕೆಲಸಕ್ಕೆ ಅನುಗುಣವಾಗಿ ದಿನಗೂಲಿ ಸಂಬಳ ನೀಡುತ್ತಾರೆ.
ಕಂಗಾಲಾಗಿದ್ದೇವೆ:
ಕುಶಲಕರ್ಮಿಯೊಬ್ಬ ದಿನವಿಡೀ ಬೆಳ್ಳಿ ಆಭರಣಗಳ ಜೋಡಣೆ, ಕುಸುರಿ ಕೆತ್ತನೆಯಿಂದ ₹200ರಿಂದ ₹300 ದುಡಿಯುತ್ತಾರೆ. ಮನೆಯಲ್ಲಿ ಮಹಿಳೆಯರೂ ಬಿಡುವಿನ ವೇಳೆಯಲ್ಲಿ ಬೆಳ್ಳಿ ಆಭರಣ ತಯಾರಿಸಿ ತಿಂಗಳಿಗೆ ಇಂತಿಷ್ಟು ಗಳಿಸುತ್ತಾರೆ. ಲಾಕ್‍ಡೌನ್‍ನಿಂದಾಗಿ ಉದ್ಯಮವೇ ಸ್ತಬ್ಧಗೊಂಡಿರುವುದರಿಂದ ಕುಶಲಕರ್ಮಿಗಳ ಬದುಕು ಸಂಕಷ್ಟಕ್ಕೀಡಾಗಿದೆ. 2ಸಾವಿರಕ್ಕೂ ಹೆಚ್ಚು ಕುಟುಂಬಗಳು ಕೆಲಸವಿಲ್ಲದೇ ಕಂಗಾಲಾಗಿವೆ. ನೆರೆಯ ಮಹಾರಾಷ್ಟ್ರದ ಐಎಂಡಿಸಿ ಕೈಗಾರಿಕೆಗಳೂ ಬಂದ್ ಆಗಿರುವುದರಿಂದ ಪರ್ಯಾಯ ಉದ್ಯೋಗವೂ ದೊರಕದೇ ದಿಕ್ಕು ತೋಚದಂತಾಗಿವೆ.
‘ದಿನವೀಡಿ ಬೆಳ್ಳಿ ಆಭರಣ ತಯಾರಿಕೆ ಉದ್ಯಮದಲ್ಲಿ ದುಡಿದು ಕುಟುಂಬ ನಿರ್ವಹಣೆ ಮಾಡುತ್ತೇವೆ. ಗ್ರಾಮದಲ್ಲಿ ಸಾವಿರಾರು ಕುಟುಂಬಗಳು ಇದೇ ವೃತ್ತಿ ನಂಬಿಕೊಂಡು ಹಲವು ವರ್ಷಗಳಿಂದ ಜೀವನ ಸಾಗಿಸುತ್ತಿವೆ. ಆದರೆ, ಕೊರೊನಾ ಕಂಟಕ ಎದುರಾಗಿರುವುದರಿಂದ ಕೆಲಸ ಸಿಗದೆ ಕುಟುಂಬ ನಿರ್ವಹಣೆಯೇ ಕಷ್ಟಕರವಾಗುತ್ತಿದೆ’ ಎಂದು ಅವರು ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.