ಐಗಳಿ: ‘ಶಾಲಾ ಮಕ್ಕಳು ದೇಶದ ದೊಡ್ಡ ಸಂಪತ್ತೆ ಹೊರತು ದೊಡ್ಡ ಕಟ್ಟಡವೋ ಅಥವಾ ಕಾರ್ಖಾನೆಯೋ ಅಲ್ಲ. ಹೀಗಾಗಿ ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಬೇಕು’ ಎಂದು ಅಥಣಿ ಗಚ್ಚಿನ ಮಠದ ಶಿವಬಸವ ಸ್ವಾಮೀಜಿ ಹೇಳಿದರು.
ಇಲ್ಲಿನ ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ರೂಪಿಸಿದ ಸ್ಮಾರ್ಟ್ ತರಗತಿ ಕೊಠಡಿಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಕಲಿಕೆಗೂ ಬಡತನಕ್ಕೂ ಸಂಬಂಧವಿಲ್ಲ. ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಪ್ರಶ್ನೆ ಕೇಳುವ ಮೂಲಕ ಶಿಕ್ಷಕರಿಂದ ಹೆಚ್ಚಿನ ವಿಷಯ ತಿಳಿದುಕೊಳ್ಳಬೇಕು. ಗ್ರಾಮೀಣ ಮಕ್ಕಳು ಸರ್ಕಾರದ ಸೌಲಭ್ಯ ಬಳಸಿಕೊಂಡು ಮುಂದೆ ಬರಬೇಕು’ ಎಂದು ಸಲಹೆ ನೀಡಿದರು.
‘ಹಿಂದೆ ಮಕ್ಕಳಿಗೆ ಮೊಬೈಲ್ ಫೋನ್ ಕೊಡಬೇಡಿ ಎನ್ನುತ್ತಿದ್ದರು. ಕೊರೊನಾ ಬಂದ ನಂತರ ಕೊಡುವ ಸ್ಥಿತಿ ಬಂದಿತು’ ಎಂದರು.
ಆದರ್ಶ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಪ್ಪಾಸಾಬ ತೆಲಸಂಗ, ‘2002ರಲ್ಲಿ ಸಂಸ್ಥೆ ಪ್ರಾರಂಭಿಸಲಾಯಿತು. ಈಗ 750 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 2020-21ನೇ ಸಾಲಿನಲ್ಲಿ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ₹ 7 ಲಕ್ಷ ಅನುದಾನದಲ್ಲಿ ಸ್ಮಾರ್ಟ್ ಕ್ಲಾಸ್ ಕೊಠಡಿ ಸಿದ್ಧವಾಗಿದೆ. ಪ್ರಾಧಿಕಾರದಿಂದ ವಸತಿನಿಲಯಕ್ಕೆ ₹ 40 ಲಕ್ಷ ಅನುದಾನ ಬಂದಿದ್ದು, ಕಾಮಗಾರಿ ಪ್ರಾರಂಭಿಸಲಾಗಿದೆ. ವಿಜ್ಞಾನ ಕಾಲೇಜು ಆರಂಭಿಸುವ ಗುರಿ ಇದೆ’ ಎಂದು ತಿಳಿಸಿದರು.
ತಾ.ಪಂ. ಸದಸ್ಯ ಯಲ್ಲಪ್ಪ ಮಿರ್ಜಿ, ಪಿ.ಕೆ.ಪಿ.ಎಸ್. ಉಪಾಧ್ಯಕ್ಷ ಅಪ್ಪಾಸಾಬ ಭೀ.ತೆಲಸಂಗ, ಕಲ್ಲಪ್ಪ ಕೊರಬು, ಮಲಗೌಡ ಪಾಟೀಲ, ಸುರೇಶ ಅಥಣಿ, ಬಸವರಾಜ ಚಮಕೇರಿ, ಮುಖ್ಯ ಶಿಕ್ಷಕ ಡಿ.ಎಲ್. ಕದಂ, ಶಿಕ್ಷಕರಾದ ಸದಾಶಿವ ನಾವಿ, ಮಹಾಬಲ ಮಾಕಾಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.