ಬೆಳಗಾವಿ/ ರಾಮದುರ್ಗ: ‘ದೆಹಲಿಯಿಂದ ನನ್ನ ಬಳಿಗೆ ಬಂದಿದ್ದ ಕೆಲವರು, ನಿಮ್ಮನ್ನು ಮುಖ್ಯಮಂತ್ರಿ ಮಾಡ್ತೀವಿ ₹ 2,500 ಕೋಟಿ ಸಿದ್ಧವಿಟ್ಟುಕೊಳ್ಳಿ ಎಂದಿದ್ದರು’ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಹಿಂದುಳಿದ ವರ್ಗ 2ಎ ಮೀಸಲಾತಿಗೆ ಆಗ್ರಹಿಸಿ ಜಿಲ್ಲೆಯ ರಾಮದುರ್ಗದಲ್ಲಿ ಗುರುವಾರ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಶುಕ್ರವಾರ ವೈರಲ್ ಆಗಿದೆ.
‘₹ 2,500 ಕೋಟಿ ಎಂದರೆ ಏನೆಂದು ತಿಳಿದಿದ್ದೀರಿ?! ಅಷ್ಟು ಹಣ ಹೆಂಗ್ ಇಡೋದು? ಕೋಣೆಯಲ್ಲಾ, ಗೋದಾಮಿನಲ್ಲಾ?! ಎಂದು ಅವರಿಗೆ ಕೇಳಿದ್ದೆ’ ಎಂದಿದ್ದಾರೆ.
‘ಹೀಗೆ... ಬಹಳ ಮಂದಿ ಕಳ್ಳರು ಬರುತ್ತಾರೆ. ಟಿಕೆಟ್ ಕೊಡಿಸ್ತೀವಿ ಎಂದು ಮೋಸ ಮಾಡುತ್ತಾರೆ. ನಾನು ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಜೊತೆ ಕೆಲಸ ಮಾಡಿದವನು. ಎಲ್.ಕೆ. ಆಡ್ವಾಣಿ, ರಾಜನಾಥ್‌ಸಿಂಗ್, ಅರುಣ್ ಜೇಟ್ಲಿ ನನ್ನ ಹೆಸರಿಡಿದು ಕರೆಯುತ್ತಿದ್ದರು. ನನ್ನಂತಹ ವ್ಯಕ್ತಿಗೇ ₹ 2,500 ಕೋಟಿ ಸಜ್ಜು ಮಾಡ್ಕೊಳಿ ಎನ್ನುತ್ತಾರಲ್ಲಾ? ನಡ್ಡಾ, ಅಮಿತ್ ಶಾ ಅವರ ಮನೆಗೆ ಕರೆದುಕೊಂಡು ಹೋಗುತ್ತೇವೆ ಎನ್ನುತ್ತಾರೆ. ಹಿಂಗೆಲ್ಲಾ ನಡೆಯುತ್ತದೆ’ ಎಂದು ತಿಳಿಸಿದ್ದಾರೆ.
‘ರಾಜಕಾರಣದಲ್ಲಿ ಯಾರೂ ಅಲ್ಲಿಗೆ–ಇಲ್ಲಿಗೆ ಹೋಗಿ ಹಾಳಾಗಬೇಡಿ. ಟಿಕೆಟ್ ಕೊಡಿಸುತ್ತೇವೆ, ದೆಹಲಿಗೆ ಕರೆದುಕೊಂಡು ಹೋಗುತ್ತೇವೆ, ಸೋನಿಯಾ ಗಾಂಧಿ ಭೇಟಿ ಮಾಡಿಸುತ್ತೇವೆ, ಜೆ.ಪಿ. ನಡ್ಡಾರ ಬಳಿಗೆ ಕರೆದೊಯ್ಯುತ್ತೇವೆ ಎಂದೆಲ್ಲಾ ಕರೆಯುತ್ತಾರೆ. ಅಂಥವರ ಬಗ್ಗೆ ಎಚ್ಚರದಿಂದಿರಿ’ ಎಂದಿದ್ದಾರೆ.
‘ಚುನಾವಣೆ ಸಮೀಪಿಸುತ್ತಿದ್ದಂತೆಯೇ ಎಲ್ಲವೂ ಆರಂಭವಾಗುತ್ತದೆ. ಸಾಮೂಹಿಕ ವಿವಾಹ ಮಾಡಿಸ್ತೀವಿ ಎಂದು ಬರುತ್ತಾರೆ. ಮುಂದೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಾರೆ. ನೋಟ್‌ಬುಕ್ ವಿತರಣೆ, ತಾಳಿ ಭಾಗ್ಯ ಎಂದು ಮತ್ತೇನೇನೋ ಮಾಡುತ್ತಾರೆ. ನಾಟಕ ಚಾಲೂ ಆಗಿದೆ. ಇನ್ನೊಂದು ವರ್ಷ ಯಾರ್‍ಯಾರು ಏನೇನು ಭಾಗ್ಯ ಕೊಡುತ್ತಾರೋ ತಗೊಳ್ಳಿ. ಮತ ಮಾತ್ರ ಚಲೋ ಭಾಗ್ಯ ಇರುವವರಿಗೆ ಕೊಡಿ’ ಎಂದು ಸಲಹೆ ನೀಡಿದ್ದಾರೆ.
‘ಸಾಮಾಜಿಕ ಕಾರ್ಯಕರ್ತರು ದಿಢೀರನೆ ಹುಟ್ಟಿಕೊಳ್ಳುವ ಸಮಯವಿದು’ ಎಂದು ಟೀಕಿಸಿದ್ದಾರೆ.
‘ನಾನು ರೊಕ್ಕ ಬಿಚ್ಚುವುದಿಲ್ಲ; ಆದರೂ ಮಂದಿ ಮತ ಹಾಕ್ತಾರೆ. ಅವನು ಏನಿದ್ದರೂ ಮುಂದೆ ಒದರ್ತಾನ್ರಿ, ಬೆನ್ನಾಗ ಚಾಕು ಹಾಕಲ್ಲ ಅಂತಾರೆ. ನಾನು ಯಾರಿಗೂ ಕಿರಿಕಿರಿ ಮಾಡುವವನಲ್ಲ. ವಿಜಯಪುರದಲ್ಲಿ ಎಂತಹ ಕ್ಷೇತ್ರದಲ್ಲಿ ಆರಿಸಿ ಬಂದಿದ್ದೇನೆ? ಹೆಚ್ಚೂ ಕಡಿಮೆ ಪಾಕಿಸ್ತಾನ ಇದ್ದಂತೆ ಇರುವುದು. ಅಲ್ಲಿ ಆರಿಸಿ ಬಂದಿದ್ದೇನೆ. ಏಕೆಂದರೆ ಅವರದ್ದು (ಮುಸ್ಲಿಮರದ್ದು) ಲಕ್ಷ ಮತವಿದ್ದರೆ, ನಮ್ದು ಒಂದೂವರೆ ಲಕ್ಷ ಮತಗಳಿವೆ. ನಮ್ಮ ಮಂದಿ ಹೊರಗೆ ಬರುತ್ತಿರಲಿಲ್ಲ. ಹೊರಗೆ ಬಾರದಿದ್ದರೆ ಪಾಕಿಸ್ತಾನ ಆಗುತ್ತೆ ನೋಡಿ ಎಂದೆ, ಆಗ ಬಂದು ಮತ ಹಾಕಿದರು’ ಎಂದು ಹೇಳಿದ್ದಾರೆ.
‘ಮೀಸಲಾತಿ ಹೋರಾಟದಲ್ಲಿ ನಮ್ಮೊಂದಿಗಿದ್ದ ಸ್ವಾಮೀಜಿಯೊಬ್ಬ ₹ 10 ಕೋಟಿ ತಗೊಂಡು ಶ್ರೀಗುರು ಬಸವಲಿಂಗಾಯ ನಮಃ ಎಂದು ಕುಳಿತಿದ್ದಾರೆ. ಬೋಗಸ್ ಹಾಗೂ ಮೋಸ ಮಾಡುವ ಕಂಪನಿಯದು’ ಎಂದು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.