ADVERTISEMENT

ಅವರ ಫ್ಯಾಷನ್‌ ಶೋ ದುನಿಯಾ...!

ಸಂತೋಷ ಈ.ಚಿನಗುಡಿ
Published 29 ಜೂನ್ 2024, 23:34 IST
Last Updated 29 ಜೂನ್ 2024, 23:34 IST
<div class="paragraphs"><p>ಬೆಳಗಾವಿಯಲ್ಲಿ ನಡೆದ ಲಿಂಗತ್ವ ಅಲ್ಪಸಂಖ್ಯಾತರ ಫ್ಯಾಷನ್‌ ಶೋ ಝಲಕ್‌</p></div>

ಬೆಳಗಾವಿಯಲ್ಲಿ ನಡೆದ ಲಿಂಗತ್ವ ಅಲ್ಪಸಂಖ್ಯಾತರ ಫ್ಯಾಷನ್‌ ಶೋ ಝಲಕ್‌

   

ಚಪ್ಪಾಳೆ ತಟ್ಟಿ ಭಿಕ್ಷೆ ಬೇಡುತ್ತಿದ್ದ ಕೈಗಳು ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿವೆ. ಕೀಳಾಗಿ ಕಾಣಲಾಗುತ್ತಿದ್ದ ದೇಹಗಳಿಗೆ ಹೊಸ ಮೈಮಾಟ ಬಂದಿದೆ. ಗೇಲಿಗೆ ಗುರಿಯಾಗಿದ್ದ ನಡಿಗೆ ‘ಕ್ಯಾಟ್‌ವಾಕ್‌’ ಆಗಿದೆ. ಮೂದಲಿಕೆಗೆ ಕಾರಣವಾಗಿದ್ದ ಮುಖದ ಮೇಲೆ ಮಾದಕ ಕಳೆ ಬಂದಿದೆ. ವಿರೂಪಿ ಎಂದು ಕರೆಸಿಕೊಳ್ಳುತ್ತಿದ್ದವರು ಈಗ ರೂಪದರ್ಶಿಗಳು...

ಹೌದು. ಲಿಂಗತ್ವ ಅಲ್ಪಸಂಖ್ಯಾತರ ಬಾಳಲ್ಲಿ ಪರಿವರ್ತನೆಯ ಸಮಯ ಬಂದಿದೆ. ಅವಮಾನಕ್ಕೆ ಒಳಗಾದವರು ಮುಖ್ಯವಾಹಿನಿಯಲ್ಲಿ ಸಾಗುವ ಯತ್ನ ನಡೆಸಿದ್ದಾರೆ. ಕೀಳಾಗಿ ಕಾಣುತ್ತಿದ್ದ ಕಣ್ಣುಗಳು ಹುಬ್ಬೇರಿಸಿ ದಿಟ್ಟಿಸುವಂತೆ ಅವರು ಬದಲಾಗುತ್ತಿದ್ದಾರೆ.

ADVERTISEMENT

ಲಿಂಗತ್ವ ಅಲ್ಪಸಂಖ್ಯಾತರಲ್ಲಿ ಇಂಥ ಭರವಸೆ ಮೂಡಿಸಿದ್ದು ಬೆಳಗಾವಿಯಲ್ಲಿ ನಡೆದ ‘ಫ್ಯಾಷನ್‌ ಶೋ’! ಹದಿನೈದು ಮಂದಿ ಲಿಂಗತ್ವ ಅಲ್ಪಸಂಖ್ಯಾತರು ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕಿದರು.

ಇಂಥ ಹೊಸ ಸಾಧ್ಯತೆಯನ್ನು ತೋರಿಸಿಕೊಟ್ಟಿದ್ದು ಬೆಳಗಾವಿಯ ಕರ್ಮಭೂಮಿ ಫೌಂಡೇಷನ್‌. ರಾಜ್ಯದಲ್ಲಿ ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರ ಫ್ಯಾಷನ್‌ ಶೋ ಏರ್ಪಡಿಸುವ ಆಲೋಚನೆ ಫೌಂಡೇಷನ್‌ನ ನಿರ್ಮಾತೃ ಶ್ವೇತಾ ಪಾಟೀಲ ಅವರಿಗೆ ಬಂದಿತು.

ಶ್ವೇತಾ ಅವರ ಮನಸ್ಸಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಬದುಕಿಗೆ ಹೊಸ ಅರ್ಥ ಕೊಡಬೇಕು ಎಂಬ ತುಡಿತ ಇತ್ತು. ತಮ್ಮ ದೇಹದ ಬಗ್ಗೆ ಅವರಲ್ಲೇ ಕೀಳರಿಮೆ ಬೆಳೆದಿರುತ್ತದೆ. ಕೀಳರಿಮೆ ಇರುವಲ್ಲೇ ಯಶಸ್ಸಿನ ಗುಟ್ಟು ಇರುತ್ತದೆ ಎಂಬುದು ಶ್ವೇತಾ ಅವರ ನಂಬಿಕೆ. ದೇಹವನ್ನೇ ವಿಷಯವನ್ನಾಗಿಸಿಕೊಂಡು ಏನಾದರೂ ಮಾಡಬೇಕು ಎಂಬ ಆಲೋಚನೆ ಮಾಡಿದಾಗ ಹೊಳೆದಿದ್ದು ಫ್ಯಾಷನ್‌ ಶೋ.

ದುಡಿಯುತ್ತೇವೆ ಎಂದರೂ ಕೆಲಸ ಕೊಡುವವರಿಲ್ಲ, ನರ್ತಿಸುತ್ತೇವೆಂದರೆ ವೇದಿಕೆಗಳಿಲ್ಲ, ಸೇವೆ ಮಾಡಿ ಬದುಕುತ್ತೇವೆ ಎಂದರೂ ಜತೆ ಸೇರಿಸುವವರಿಲ್ಲ, ಕೊನೆ ಪಕ್ಷ ಮನೆಯ ಮೂಲೆಯಲ್ಲಿ ಬಿದ್ದಿರುತ್ತೇವೆ ಎಂದರೂ ಇಟ್ಟುಕೊಳ್ಳುವವರಿಲ್ಲ. ಹೆತ್ತವರೇ ಮಡಿಲಿನಿಂದ ಹೊರಹಾಕಿದ ಜೀವಗಳು ಅವು. ಸಮಾಜವಂತೂ ತಿರಸ್ಕಾರದ ಮುದ್ರೆ ಒತ್ತಿದೆ. ಅದೇ ಸಮಾಜದ ಮುಂದೆ ಫ್ಯಾಷನ್‌ ಪ್ರದರ್ಶನ ನೀಡುವ ಸವಾಲು ಸ್ವೀಕರಿಸಬೇಕಾಗಿತ್ತು. ಅವಮಾನಿಸಿದ ದೇಹಕ್ಕೆ ಗೌರವ ತಂದುಕೊಡುವಲ್ಲಿ ಶ್ವೇತಾ ಯಶಸ್ವಿಯೂ ಆದರು.

ತಿರಸ್ಕಾರದಿಂದ ಪುರಸ್ಕಾರ

ಶ್ವೇತಾ ಅವರ ಆಲೋಚನೆಗೆ ಜೊತೆಗೂಡಿದವರು ‘ಬಿ ಮಾಡೆಲಿಂಗ್‌ ಅಕಾಡೆಮಿ’ಯ ನಿಖಿತಾ ತರ್ಲೆ. ಅವರು ಲಿಂಗತ್ವ ಅಲ್ಪಸಂಖ್ಯಾತರಿಗೆ ಫ್ಯಾಷನ್‌ ಲೋಕವನ್ನು ಪರಿಚಯಿಸಿದರು. ಮೇಕಪ್‌ ಕಲಾವಿದೆ ಶ್ರೇಯಾ ವದನಗಳಿಗೆ ಗ್ಲಾಮರ್‌ ತಂದರು. ಚಲನಚಿತ್ರ ನಟರಾದ ವಂಶಿ ರಾವಿಕೃಷ್ಣ, ಆರ್‌.ಎನ್‌.ಕುಮಾರ್‌, ರೂಪದರ್ಶಿ ಸುವಿನಾ ಗೌಡ, ಫ್ಯಾಷನ್‌ ಡಿಸೈನರ್‌ ನವನೀತ್‌ ಪಾಟೀಲ, ಪ್ರೀತಿ ಪಾವಟೆ ಈ ಪ್ರತಿಭೆಗಳನ್ನು ಹೆಕ್ಕಿ ತೆಗೆದರು. ಮೇಕ್‌ ಮಿ ಸ್ಮೈಲ್‌ ಫೌಂಡೇಷನ್‌, ಏವಿಯೇಷನ್‌ ಏರ್‌ಹೋಸ್ಟಿಸ್‌ಗಳ ತಂಡ, ವಿಷನ್‌ ಫ್ಲಾಯಿಂಗ್‌, ಬ್ಲ್ಯಾಕ್‌ಕ್ಯಾಟ್‌ನ ಬೌನ್ಸರ್‌ಗಳು, ಕಾಲೇಜು ವಿದ್ಯಾರ್ಥಿಗಳು ಸ್ವಯಂ ಸೇವಕರಾದರು. ಈ ಎಲ್ಲ ಮನಸ್ಸುಗಳೂ ಉಚಿತವಾಗಿ ಕೆಲಸ ಮಾಡಿದವು.

ಆಡಿಷನ್‌ ಕರೆದಾಗ ಮೂವತ್ತು ಲಿಂಗತ್ವ ಅಲ್ಪಸಂಖ್ಯಾತರು ಬಂದರು. ಅಳೆದು ತೂಗಿ ಹದಿನೈದು ಜನರನ್ನು ಆಯ್ಕೆ ಮಾಡಲಾಯಿತು. ತರಬೇತಿಯ ಆರಂಭದಲ್ಲೇ ಹತ್ತು ಮಂದಿ ಹಿಂದಡಿ ಇಟ್ಟರು. ತಾವು ಊಹಿಸಲೂ ಆಗದ ಮಾರ್ಗದಲ್ಲಿ ಹೆಜ್ಜೆ ಹಾಕುವುದು ಅಸಾಧ್ಯ ಎಂದುಕೊಂಡರು. ಮತ್ತೆ ಕೌನ್ಸೆಲಿಂಗ್‌ ಮಾಡಿ ಅವರನ್ನು ಅಣಿಗೊಳಿಸಲಾಯಿತು.

ಗಡಸು ಮಾತು, ಒರಟು ವರ್ತನೆಗಳಿಂದ ಅವರನ್ನು ಹೊರತರುವುದು ಶ್ವೇತಾ ಅವರ ಮೊದಲ ಸವಾಲಾಗಿತ್ತು. ಅದಕ್ಕೆ ಆಯ್ಕೆ ಮಾಡಿಕೊಂಡಿದ್ದು ಧ್ಯಾನ ಮತ್ತು ಯೋಗ. ಎರಡು ತಿಂಗಳ ತರಬೇತಿ ಬಳಿಕ ತಮಗೇ ಅರಿವಿಲ್ಲದೆ ತಮ್ಮಲ್ಲಿ ಉಂಟಾದ ನಾಜೂಕಿನ ಬಾಳು ಅವರಲ್ಲಿ ಭರವಸೆ ಮೂಡಿಸಿತು. ಮುಂದೆ ಎದುರಾಗಿದ್ದು ಮಿತ ಆಹಾರ (ಡಯೆಟ್‌)ದ ಸವಾಲು. ಇದನ್ನು ಗೆದ್ದಿದ್ದು ಪವಾಡೇ ಸರಿ.

ಎಲ್ಲ ಅಡೆತಡೆಗಳನ್ನೂ ಮೀರಿ ಪ್ರದರ್ಶನ ನನಸಾಗಿದ್ದು ಬರೋಬ್ಬರಿ ಏಳು ತಿಂಗಳ ಬಳಿಕ.

ಝಗಮಗಿಸುವ ವೇದಿಕೆಯ ರ್‍ಯಾಂಪ್‌ ಮೇಲೆ ಲಲನಾಮಣಿಯರು ಬಳುಕಿದಾಗ ಪ್ರೇಕ್ಷಕರ ಗ್ಯಾಲರಿಯಿಂದ ಸಿಳ್ಳೆ, ಚಪ್ಪಾಳೆಗಳ ಭೋರ್ಗರೆತ. ಪಾಲಕರಲ್ಲಿ, ಸಮುದಾಯದವರಲ್ಲಿ ಹರ್ಷದ ಹೊನಲು.

ಲಿಂಗತ್ವ ಅಲ್ಪಸಂಖ್ಯಾತರ ಜೊತೆಗೆ ವೃತ್ತಿಪರ ಮಾಡೆಲ್‌ಗಳಾದ ತಲಾ ಹತ್ತು ಯುವಕರು, ಯುವತಿಯರೂ ಹೆಜ್ಜೆ ಹಾಕಿದರು. ಲಿಂಗತ್ವ ಅಲ್ಪಸಂಖ್ಯಾತರನ್ನಷ್ಟೇ ಪ್ರತ್ಯೇಕಿಸಿ ನೋಡಬಾರದು ಎಂಬ ಉದ್ದೇಶವೂ ಇದರ ಹಿಂದಿತ್ತು. ವೃತ್ತಿಪರ ರೂಪದರ್ಶಿಯರನ್ನೂ ಅವರು ನಾಚಿಸುವಂತೆ ಪ್ರದರ್ಶನ ನೀಡಿದರು. ಇಷ್ಟು ವರ್ಷ ತಮಗೆ, ತಮ್ಮ ಸಮುದಾಯಕ್ಕೆ ಇದ್ದ ಅಸ್ತಿತ್ವಕ್ಕೆ ಹೊಸ ಗುರುತು ನೀಡಿದ ಗೆಲುವು ಅವರದ್ದಾಯಿತು. ಈ ಪ್ರದರ್ಶನಕ್ಕೆ ‘ಭಾರತ್‌ ಅಚೀವರ್ಸ್‌ ಪ್ರಶಸ್ತಿ’ ಕೂಡ ಬಂದಿದೆ.

ಲಿಂಗತ್ವ ಅಲ್ಪಸಂಖ್ಯಾತರ ಬದುಕು ತಾವು ಮಾಡಿಕೊಂಡಿದ್ದಲ್ಲ; ದೇವೇಚ್ಛೆ ಎಂಬುದು ಅವರ ಗಾಢ ನಂಬಿಕೆ. ಅವರಿಗೆ ಆಪ್ತವಾಗಲಿ ಎಂಬ ಕಾರಣಕ್ಕೆ ಪ್ರದರ್ಶನದ ಹೆಸರನ್ನು ‘ವಿಲ್‌ ಆಫ್‌ ಗಾಡ್‌ (ದೇವೇಚ್ಚೆ)’ ಎಂದು ಇಟ್ಟಿದ್ದು ವಿಶೇಷ.

ಈ ಪ್ರದರ್ಶನದ ಬಳಿಕ ಕೆಲವರು ಮಾಡೆಲಿಂಗ್ ಅನ್ನೇ ವೃತ್ತಿಯನ್ನಾಗಿ ಸ್ವೀಕರಿಸಲು ಮುಂದಾಗಿದ್ದಾರೆ. ಕೆಲವರಿಗೆ ಸ್ಟಾರ್‌ ಹೋಟೆಲ್‌ಗಳಲ್ಲಿ, ವಾಣಿಜ್ಯ ಮಳಿಗೆಗಳಲ್ಲಿ ಕರೆದು ಕೆಲಸ ಕೊಡಲಾಗಿದೆ. ಜಾಹೀರಾತು ಸಂಸ್ಥೆಗಳಲ್ಲಿ ಅವಕಾಶಗಳು ಕಾದಿವೆ. ಹೀಗೆ ಇವರ ಬದುಕಲ್ಲಿ ಹೊಸ ಹೊಸ ದಾರಿಗಳು ತಾನೇ ತಾನಾಗಿ ತೆರೆದುಕೊಂಡಿವೆ.

ಮನುಷ್ಯನನ್ನು ಗುರುತಿಸಬೇಕಾದುದು ಲಿಂಗಾಧಾರಿತವಾಗಿ ಅಲ್ಲ; ಮನುಷ್ಯತ್ವದ ಮೇಲೆ ಎಂಬ ಸ್ಪಷ್ಟ ಸಂದೇಶ ನೀಡುವಲ್ಲಿ ಈ ರೂಪದರ್ಶಿಯರು ಯಶಸ್ವಿಯಾದರು.

‘ಐಡೆಂಟಿಟಿಯೇ ಇಲ್ಲದವರು’

ಯಾವುದೇ ಅಂಗವೈಕಲ್ಯ ಇದ್ದರೂ ಸರ್ಕಾರ ಗುರುತಿನಚೀಟಿ ನೀಡುತ್ತದೆ. ಆದರೆ, ನಮಗೆ ‘ಐಡೆಂಟಿಟಿ’ ಎಂಬುದೇ ಇಲ್ಲ. ಸಮಾಜ ಮಾತ್ರವಲ್ಲ; ಸರ್ಕಾರವೂ ತಿರಸ್ಕಾರ ಭಾವನೆ ಹೊಂದಿದೆ. ಮಹಿಳೆಯರಿಗೆ ಇರುವಂಥ ಮೀಸಲಾತಿ ನಮಗೆ ನೀಡಿಲ್ಲ. ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದರೆ ಸರ್ಕಾರ, ಸಮಾಜ ಧಿಕ್ಕರಿಸಿ ನಿಲ್ಲುತ್ತವೆ. ನಮ್ಮಂಥವರಿಗೆ ನಿತ್ಯವೂ ಹಾದಿಬೀದಿಯಲ್ಲಿ ಲೈಂಗಿಕ ದೌರ್ಜನ್ಯ ನಡೆಯುತ್ತದೆ.

ಶಾಲೆ–ಕಾಲೇಜುಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಮನವರಿಕೆ ಮಾಡುವ ಪಾಠಗಳು ಬೇಕು. ಆಗ ಸಮಾಜದ ದೃಷ್ಟಿಕೋನ ಬದಲಾಗಲು ಸಾಧ್ಯ. ‘ಹಸಿವಿನಿಂದ ಬಳಲುವ ಪ್ರಜೆ ದೇಶದ ದೊಡ್ಡ ಶತ್ರು’ ಎಂಬ ಮಾತಿದೆ. ಈ ದೇಶದ ಲಿಂಗತ್ವ ಅಲ್ಪಸಂಖ್ಯಾತರು ಹಸಿವಿನಿಂದ ಬಳಲುತ್ತಿದ್ದಾರೆ ಎಂಬುದನ್ನು ಸರ್ಕಾರಗಳು ಪರಿಗಣಿಸುತ್ತಲೇ ಇಲ್ಲ.

ಚಿನ್ನು, ತೃತೀಯ ಬಹುಮಾನ ಪಡೆದ ರೂಪದರ್ಶಿ

‘ಮಾಡೆಲಿಂಗ್‌ ಶಾಲೆ ಸೇರಿದ್ದೇನೆ’

ನನ್ನ ಹುಟ್ಟಿಗೆ ಅರ್ಥವೇ ಇಲ್ಲ ಅಂದುಕೊಂಡಿದ್ದೆ. ಒಂದೇ ಒಂದು ಫ್ಯಾಷನ್‌ ಶೋ ಅರ್ಥ ಕೊಟ್ಟಿತು. ಚಪ್ಪಾಳೆ ತಟ್ಟಿದಾಗ ಭಿಕ್ಷೆ ಹಾಕಿದ ಕೈಗಳೇ ಚಪ್ಪಾಳೆ ತಟ್ಟಿದ್ದು ಕಂಡು ದುಃಖ ಉಮ್ಮಳಿಸಿಬಂತು. ನನ್ನ ಬಗ್ಗೆ ನನಗೇ ಗೌರವ ಭಾವನೆ ಮೂಡುತ್ತಿದೆ. ನಮ್ಮ ಸಮುದಾಯ ಮಾತ್ರವಲ್ಲ; ಸಮಾಜದಲ್ಲೂ ಗೌರವ ಸಿಗುತ್ತಿದೆ. ನಾನೀಗ ಮಾಡೆಲಿಂಗ್‌ ತರಬೇತಿ ಶಾಲೆ ಸೇರಿಕೊಂಡಿದ್ದೇನೆ. ನಿಯಮಿತವಾಗಿ ಡಯೆಟ್‌ ಮಾಡುತ್ತಿದ್ದೇನೆ. ದೇಹ ಹುರಿಗೊಳಿಸುತ್ತಿದ್ದೇನೆ. ನಾನು ಶ್ರಮ ಹಾಕಬಲ್ಲೆ. ಮುಂದೆ ನನ್ನದೇ ಮಾಡೆಲಿಂಗ್‌ ಶಾಲೆ ತೆರೆಯಬೇಕು ಎಂಬ ಕನಸಿದೆ.

ಆಲಿಯಾ, ಮೊದಲ ಪ್ರಶಸ್ತಿ ಪಡೆದ ರೂಪದರ್ಶಿ

‘ಸಣ್ಣ ಅವಕಾಶ ಕೊಡಿ’

ಪುಣೆಯಲ್ಲಿ ಭಿಕ್ಷೆ ಬೇಡುತ್ತಿದ್ದ ನಾನು ಈಗ ರೂಪದರ್ಶಿ. ಅಪ್ಪ ತೀರಿಕೊಂಡ ಮೇಲೆ ಅಮ್ಮ ಮತ್ತು ನಾನು ಗೋಕಾಕದಲ್ಲಿ ವಾಸವಾಗಿದ್ದೇವೆ. ಎರಡು ಹೊಟ್ಟೆ ತುಂಬಿಸಿಕೊಳ್ಳುವುದಷ್ಟೇ ಗುರಿಯಾಗಿತ್ತು. ಆದರೆ, ಈ ರೂಪದರ್ಶಿ ಭೂಮಿಕೆ ನನ್ನಲ್ಲಿ ಕನಸು ಮೊಳೆಯುವಂತೆ ಮಾಡಿದೆ. ಪಾಶ್ಚಾತ್ಯ ಶೈಲಿಯ ನೃತ್ಯ ಕಲಿತಿದ್ದೇನೆ. ಭಿಕ್ಷೆ ಬೇಡಲು ಇಷ್ಟವಿಲ್ಲ. ಯಾರಾದರೂ ಕೆಲಸ ಕೊಟ್ಟರೆ ಸಾಕು; ವಿನಮ್ರತೆಯಿಂದ ಮಾಡುತ್ತೇನೆ. ಸಮಾಜದಲ್ಲಿ ಈಗ ಜನರೂ ಗೌರವ ಕೊಡುತ್ತಿದ್ದಾರೆ. ನಿಜವಾಗಿ ನನಗೆ ಬೇಕಿರುವುದು ಅವಕಾಶ.

–ದಿಲ್ಬರ್‌, ರನ್ನರ್‌ಅ‍ಪ್‌ ರೂಪದರ್ಶಿ

ರೂಪದರ್ಶಿ ದಿಲ್ಬರ್‌

ರೂಪದರ್ಶಿ ಚಿನ್ನು
ರೂಪದರ್ಶಿ ಆಲಿಯಾ
‘ಐಡೆಂಟಿಟಿಯೇ ಇಲ್ಲದವರು’
ಯಾವುದೇ ಅಂಗವೈಕಲ್ಯ ಇದ್ದರೂ ಸರ್ಕಾರ ಗುರುತಿನಚೀಟಿ ನೀಡುತ್ತದೆ. ಆದರೆ ನಮಗೆ ‘ಐಡೆಂಟಿಟಿ’ ಎಂಬುದೇ ಇಲ್ಲ. ಸಮಾಜ ಮಾತ್ರವಲ್ಲ; ಸರ್ಕಾರವೂ ತಿರಸ್ಕಾರ ಭಾವನೆ ಹೊಂದಿದೆ. ಮಹಿಳೆಯರಿಗೆ ಇರುವಂಥ ಮೀಸಲಾತಿ ನಮಗೆ ನೀಡಿಲ್ಲ. ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದರೆ ಸರ್ಕಾರ ಸಮಾಜ ಧಿಕ್ಕರಿಸಿ ನಿಲ್ಲುತ್ತವೆ. ನಮ್ಮಂಥವರಿಗೆ ನಿತ್ಯವೂ ಹಾದಿಬೀದಿಯಲ್ಲಿ ಲೈಂಗಿಕ ದೌರ್ಜನ್ಯ ನಡೆಯುತ್ತದೆ. ಶಾಲೆ–ಕಾಲೇಜುಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಮನವರಿಕೆ ಮಾಡುವ ಪಾಠಗಳು ಬೇಕು. ಆಗ ಸಮಾಜದ ದೃಷ್ಟಿಕೋನ ಬದಲಾಗಲು ಸಾಧ್ಯ. ‘ಹಸಿವಿನಿಂದ ಬಳಲುವ ಪ್ರಜೆ ದೇಶದ ದೊಡ್ಡ ಶತ್ರು’ ಎಂಬ ಮಾತಿದೆ. ಈ ದೇಶದ ಲಿಂಗತ್ವ ಅಲ್ಪಸಂಖ್ಯಾತರು ಹಸಿವಿನಿಂದ ಬಳಲುತ್ತಿದ್ದಾರೆ ಎಂಬುದನ್ನು ಸರ್ಕಾರಗಳು ಪರಿಗಣಿಸುತ್ತಲೇ ಇಲ್ಲ. ಚಿನ್ನು ತೃತೀಯ ಬಹುಮಾನ ಪಡೆದ ರೂಪದರ್ಶಿ
‘ಮಾಡೆಲಿಂಗ್‌ ಶಾಲೆ ಸೇರಿದ್ದೇನೆ’
ನನ್ನ ಹುಟ್ಟಿಗೆ ಅರ್ಥವೇ ಇಲ್ಲ ಅಂದುಕೊಂಡಿದ್ದೆ. ಒಂದೇ ಒಂದು ಫ್ಯಾಷನ್‌ ಶೋ ಅರ್ಥ ಕೊಟ್ಟಿತು. ಚಪ್ಪಾಳೆ ತಟ್ಟಿದಾಗ ಭಿಕ್ಷೆ ಹಾಕಿದ ಕೈಗಳೇ ಚಪ್ಪಾಳೆ ತಟ್ಟಿದ್ದು ಕಂಡು ದುಃಖ ಉಮ್ಮಳಿಸಿಬಂತು. ನನ್ನ ಬಗ್ಗೆ ನನಗೇ ಗೌರವ ಭಾವನೆ ಮೂಡುತ್ತಿದೆ. ನಮ್ಮ ಸಮುದಾಯ ಮಾತ್ರವಲ್ಲ; ಸಮಾಜದಲ್ಲೂ ಗೌರವ ಸಿಗುತ್ತಿದೆ. ನಾನೀಗ ಮಾಡೆಲಿಂಗ್‌ ತರಬೇತಿ ಶಾಲೆ ಸೇರಿಕೊಂಡಿದ್ದೇನೆ. ನಿಯಮಿತವಾಗಿ ಡಯೆಟ್‌ ಮಾಡುತ್ತಿದ್ದೇನೆ. ದೇಹ ಹುರಿಗೊಳಿಸುತ್ತಿದ್ದೇನೆ. ನಾನು ಶ್ರಮ ಹಾಕಬಲ್ಲೆ. ಮುಂದೆ ನನ್ನದೇ ಮಾಡೆಲಿಂಗ್‌ ಶಾಲೆ ತೆರೆಯಬೇಕು ಎಂಬ ಕನಸಿದೆ. ಆಲಿಯಾ ಮೊದಲ ಪ್ರಶಸ್ತಿ ಪಡೆದ ರೂಪದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.