ಬೆಳಗಾವಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಚರಿಸುವ ಆಟೊಗಳಲ್ಲಿ ‘ಮೀಟರ್ ಆಧರಿತ ದರ’ ನಿಗದಿ ಮಾಡಬೇಕು ಎಂಬ ಬೇಡಿಕೆಗೆ ದಶಕ ಕಳೆದಿದೆ. ಆಟೊಗಳಲ್ಲಿ ಈಗಾಗಲೇ ಮೀಟರ್‌ಗಳಿವೆ. ಅದರೆ, ಜೀವ ಕಳೆದುಕೊಂಡಿವೆ. ರಿಕ್ಷಾವಾಲಾ ಎಷ್ಟು ದರ ಹೇಳುತ್ತಾರೋ ಅಷ್ಟಕ್ಕೆ ಚೌಕಾಶಿ ಮಾಡಿ, ಹಣ ಕೊಟ್ಟು ಪ್ರಯಾಣಿಸುವ ಪದ್ಧತಿಯೇ ಮುಂದುವರಿದಿದೆ. ಇದರಿಂದ ಪ್ರಯಾಣಿಕರಿಗೆ ಹೊರೆಯಾಗುತ್ತಿದ್ದು, ಮೀಟರ್ ಆಧರಿಸಿ ದರ ನಿಗದಿ ಮಾಡಬೇಕು ಎಂಬ ಕೂಗು ಕೇಳಿಬಂದಿದೆ.
ನಗರದಲ್ಲಿ ಆಟೊ ಸಂಚಾರಕ್ಕೆ ಒಂದು ಶಿಸ್ತು ತರಬೇಕು ಎಂಬ ಉದ್ದೇಶದಿಂದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮೀಟರ್ ವಿಚಾರ ಮತ್ತೆ ಎತ್ತಿದ್ದಾರೆ. ಆಟೊ ಚಾಲಕರು ಹೆಚ್ಚು ಹಣ ಪಡೆಯುತ್ತಿದ್ದಾರೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ, ಮೀಟರ್ ಚಾಲ್ತಿ ಮಾಡಬೇಕು ಎಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ಕೂಡ ನೀಡಿದ್ದಾರೆ.
2015ರಲ್ಲಿಯೇ ಎಲ್ಲ ಮಾದರಿಯ ಆಟೊಗಳ ಮೀಟರ್‌ಗೆ ಚಾಲ್ತಿ ನೀಡಲಾಗಿತ್ತು. ಕೆಲವೇ ತಿಂಗಳು ನಡೆದ ಈ ಪ್ರಯತ್ನ ನಂತರ ಗೊತ್ತಾಗದಂತೆಯೇ ಸ್ಥಗಿತಗೊಂಡಿತು. ಆಟೊ ಚಾಲಕರು ಮೀಟರ್ ಮೇಲೆ ಹೆಚ್ಚುವರಿ ಹಣ ಕೇಳಲು ಶುರು ಮಾಡಿದರು. ಇದರಿಂದ ಬೇಸತ್ತ ಪ್ರಯಾಣಿಕರು ಮೀಟರ್ ಉಸಾಬರಿಯೇ ಬೇಡವೆಂದು ಚೌಕಾಶಿಗೆ ಮುಂದಾದರು.
‘ಈಚೆಗಷ್ಟೇ ಧಾರವಾಡದಿಂದ ಬೆಳಗಾವಿಗೆ ಬಸ್ಸಿನಲ್ಲಿ ₹190 ಕೊಟ್ಟು ಬಂದೆ. ಬೆಳಗಾವಿ ಬಸ್ ನಿಲ್ದಾಣದಿಂದ ಬಿ.ಕೆ. ಕಂಗ್ರಾಳಿಗೆ ಹೋಗಲು ಆಟೊ ಚಾಲಕ ₹200 ಪಡೆದರು. ರಾತ್ರಿ 11.30 ಆಗಿದ್ದರಿಂದ ದುಪ್ಪಟ್ಟ ದರವಿದೆ ಎಂದು ಪೀಡಿಸಿ ಹಣ ಪಡೆದರು. 78 ಕಿ.ಮೀ ದೂರ ಬಸ್ಸಿನಲ್ಲಿ ಪ್ರಯಾಣಿಸಿದ್ದಕ್ಕಿಂತ 4 ಕಿ.ಮೀ ರಿಕ್ಷಾ ಪ್ರಯಾಣವೇ ದುಬಾರಿಯಾಗಿದೆ’ ಎಂದು ಪ್ರಯಾಣಿಕ ಉಮೇಶ ಮಲಕಾಚೆ ದೂರುತ್ತಾರೆ.
ನಗರದ ಸುತ್ತ ಇರುವ ಹಳ್ಳಿಗಳಿಂದ ಸಾವಿರಾರು ಮಹಿಳೆಯರು ನಗರಗಳಿಗೆ ಬರುತ್ತಾರೆ. ಶಿಕ್ಷಣ, ಉದ್ಯೋಗ, ಮಾರುಕಟ್ಟೆಗೆ ಬೆಳಗಾವಿಯನ್ನೇ ಅವಲಂಬಿಸಿದ್ದಾರೆ. ಬಡಾವಣೆಗಳಿಂದ, ಹೊರವಲಯದಿಂದ ಜೀವನೋಪಾಯ ಕೆಲಸಗಳಿಗೆ ಬರುವವರೆಲ್ಲ ಆಟೊಗಳನ್ನೇ ಅವಲಂಬಿಸಿದ್ದಾರೆ.
ಈಗ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣವಿದ್ದ ಕಾರಣ ಬಹಳಷ್ಟು ಹೊರೆ ಕಡಿಮೆಯಾಗಿದೆ. ಆದರೆ, ಬಸ್‌ಗಳು ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಬಂದರೂ ಕುಳಿತುಕೊಳ್ಳಲು ಆಸನ ಸಿಗುವುದಿಲ್ಲ. ಬಸ್ ಬರುವ ಮುಂಚೆಯೇ ರಿಕ್ಷಾ ಚಾಲಕರು ಸ್ಥಳಕ್ಕೆ ಹಾಜರಾಗಿರುತ್ತಾರೆ.
ದಾಖಲೆಗಲೇ ಇಲ್ಲ: ಆಟೊಗಳ ಪರವಾನಗಿ ನೀಡುವ ಮುನ್ನವೇ ಮೀಟರ್ ಅಳವಡಿಸುವುದು ಕಡ್ಡಾಯ. ಬಳಕ ಚಾಲಕರು ಅವುಗಳನ್ನು ಕಿತ್ತು ತೆಗೆಯುತ್ತಾರೆ. ಚಾಲನಾ ಪರವಾನಗಿ, ವಿಮೆ, ಸುರಕ್ಷತೆ ಸೇರಿದಂತೆ ಹಲವರ ಬಳಿ ದಾಖಲೆಗಳೇ ಇಲ್ಲ ಎಂಬುದು ಜನರ ದೂರು.
ಮೀಟರ್ ಅಳವಡಿಸಿದರೆ ಅನುಕೂಲ. ಮಹಿಳೆಯರಿಗೆ ಉಚಿತ ಬಸ್ ಇದ್ದರೂ ಸಮಯಕ್ಕೆ ಬರುವುದಿಲ್ಲ. ಆಟೊ ಚಾಲಕರ ಇದನ್ನೇ ಬಂಡವಾಳ ಮಾಡಿಕೊಂಡಿದ್ದಾರೆಕಾವೇರಿ ಖಿಲಾರಿ ಉದ್ಯೋಗಿ
ಮೀಟರ್ ಚಾಲ್ತಿ ಮಾಡಿದರೆ ನಮಗೂ ಒಳ್ಳೆಯದೇ. ಆದರೆ ಅದಕ್ಕಿರುವ ಅಡಚಣೆ ಸಮಸ್ಯೆಗಳನ್ನೂ ನಿವಾರಣೆ ಮಾಡಬೇಕು. ಇಲ್ಲದಿದ್ದರೆ ನಷ್ಟವಾಗುತ್ತದೆಮನ್ಸೂರ್ ಅಬ್ದುಲ್ ಗಫಾರ್ ಹೊನಗೇಕರ ಅಧ್ಯಕ್ಷ ಆಟೊ ಮಾಲೀಕರು ಹಾಗೂ ಚಾಲಕರ ಅಸೋಸಿಯೇಷನ್
ಜಿಲ್ಲಾಧಿಕಾರಿ ಅವರ ನಿರ್ದೇಶನದಂತೆ ಆಟೊಗಳಿಗೆ ಮೀಟರ್ ಅಳವಡಿಸಲಾಗುವುದು. ಆಟೊ ಚಾಲಕರು ಮಾಲೀಕರ ಸಭೆ ಕರೆದು ಚರ್ಚಿಸಲಾಗುವುದುನಾಗೇಶ ಮುಂಡಾಸ್ ಪ್ರಾದೇಶಿಕ ಸಾರಿಗೆ ಅಧಿಕಾರಿ
* ನಗರದಲ್ಲಿ ಎಲ್ಲ ಕಡೆಯೂ ‘ಶೇರಿಂಗ್’ ವ್ಯವಸ್ಥೆಗೆ ಜನ ಮುಗಿಬೀಳುತ್ತಾರೆ. ಮೀಟರ್ ಅಳವಡಿಸುವ ಮುನ್ನ ಶೇರಿಂಗ್ ವ್ಯವಸ್ಥೆ ಬಂದ್ ಮಾಡಿಸಬೇಕು.
* ಗ್ರಾಮೀಣ ಪ್ರದೇಶಕ್ಕೆ ಪರವಾನಗಿ ಪಡೆದವರೂ ನಗರದಲ್ಲಿ ಓಡಿಸುತ್ತಾರೆ. ನಗರದ ಪರವಾನಗಿ ಇದ್ದವರು ಏನು ಮಾಡಬೇಕು?
* ಕನಿಷ್ಠ ದೂರದ ದರವನ್ನು ₹30 ಮಾಡಲಾಗಿದೆ. ಇದು ಏಳು ವರ್ಷಗಳ ಹಿಂದಿನ ದರ. ಕನಿಷ್ಠ ದರವನ್ನೂ ಹೆಚ್ಚಿಸಬೇಕು.
* ಮೀಟರ್‌ಗಳ ದುರಸ್ತಿ ಮಾಡುವವರು ಒಬ್ಬರೂ ಬೆಳಗಾವಿಯಲ್ಲಿ ಇಲ್ಲ. ಜಿಲ್ಲಾಡಳಿತ ವ್ಯವಸ್ಥೆ ಮಾಡಬೇಕು.
* ಹೊಸ ಮೀಟರ್‌ಗಳಿಗೆ ಕನಿಷ್ಠ ₹10 ಸಾವಿರ ದರವಿದೆ. ರಿಯಾಯಿತಿ ದರದಲ್ಲಿ ಕೊಡಿಸಬೇಕು.
* ಹೊಸ ಆಟೊಗಳ ಪರವಾನಗಿ ನೀಡುವುದನ್ನು ನಿಲ್ಲಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.