ಖಾನಾಪುರ: ತಾಲ್ಲೂಕಿನ ಹಲವೆಡೆ ಮಳೆಯ ಕೊರತೆಯ ಪರಿಣಾಮ ಈ ಸಲದ ಬೇಸಿಗೆಯಲ್ಲಿ ಎಲ್ಲೆಡೆ ಜಲಕ್ಷಾಮ ತಲೆದೋರಿದೆ. ಪ್ರಾಣಿ– ಪಕ್ಷಿಗಳು, ಜಲಚರಗಳಿಗೂ ಕುಡಿಯುವ ನೀರಿನ ತೊಂದರೆ ಉದ್ಭವಿಸಿದೆ. ಆದರೆ ಪಟ್ಟಣದಿಂದ 8 ಕಿ.ಮೀ ದೂರದಲ್ಲಿರುವ ಸಣ್ಣ ಹೊಸೂರು ಗ್ರಾಮದ ವಿಶಾಲವಾದ ಕೆರೆ ನೀರಿನಿಂದ ತುಂಬಿ ಕಂಗೊಳಿಸುತ್ತಿದೆ. ಇದನ್ನು ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣ ಮಾಡಬೇಕಾದ ಅವಶ್ಯಕತೆ ಇದೆ.
ಈ ಕೆರೆಯಲ್ಲಿ ನೀರಿನ ಸಂಗ್ರಹದ ಪರಿಣಾಮ ಅಂಚಿನಲ್ಲಿ ನೂರಾರು ಬಿಳಿ ಕೊಕ್ಕರೆ, ರಾಜಹಂಸ, ಪಾರಿವಾಳ, ಗಿಳಿ, ನವಿಲು, ಗುಬ್ಬಿಗಳು ಸೇರಿದಂತೆ ಸಾವಿರಾರು ಪಕ್ಷಿಗಳು ತಮ್ಮ ದಾಹ ನೀಗಿಸಿಕೊಳ್ಳುತ್ತಿವೆ. ಸಣ್ಣ ನೀರಾವರಿ ಇಲಾಖೆಯ ಅಧೀನದ 10 ಎಕರೆ ವ್ಯಾಪ್ತಿಯ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಕೆರೆ ಸಣ್ಣ ಹೊಸೂರು ಗ್ರಾಮದ ಪೂರ್ವ ದಿಕ್ಕಿನಲ್ಲಿ ಅರ್ಧ ಕಿ.ಮೀ ದೂರದಲ್ಲಿ ತೋಪಿನಕಟ್ಟಿ ರಸ್ತೆಯ ಮೇಲಿದೆ.
ಸಣ್ಣ ಹೊಸೂರು, ನಿಡಗಲ್, ಭಂಡರಗಾಳಿ, ತೋಪಿನಕಟ್ಟಿ ಗ್ರಾಮಗಳ ನೂರಾರು ಜಾನುವಾರುಗಳ ಪಾಲಿಗೆ, ಈಜು ಕಲಿಯಲು ಆಸಕ್ತ ಯುವಕ– ಯುವತಿಯರಿಗೆ ಈ ಕೆರೆ ಈಜುಕೊಳವಾಗಿದೆ. ನಿತ್ಯ ಕೆರೆಯ ತಿಳಿನೀರಿನ ಮೇಲೆ ಈಜಾಡುವ ರಾಜಹಂಸ ಹಾಗೂ ಕೊಕ್ಕರೆಗಳ ಅಂದವನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿದೆ.
ಎಮ್ಮೆಗಳು ಎಳೆಯ ಬಿಸಿಲಿಗೆ ಮೈಯೊಡ್ಡಿ ಕೆರೆಯಲ್ಲಿ ತೇಲುವ ದೃಶ್ಯ ಹಾಗೂ ಎಮ್ಮೆಗಳ ಮೈಮೇಲೆ ಬಾನಾಡಿಗಳು ಕುಳಿತು ವಿಹರಿಸುವ ದೃಶ್ಯ ನಯನಮನೋಹರ.
ಚಿಕ್ಕಮಕ್ಕಳು ತಮ್ಮ ರಜಾ ದಿನಗಳಲ್ಲಿ ಈ ಕೆರೆಯ ಎತ್ತರದ ಒಡ್ಡಿನ ಮೇಲಿನಿಂದ ಕೆರೆಗೆ ಹಾರಿ ಈಜಾಡುತ್ತ ಮಜ್ಜನದ ಸುಖವನ್ನು ಅನುಭವಿಸುತ್ತಾರೆ. ಈ ಭಾಗದಲ್ಲಿ ಬೀಸುವ ತಂಗಾಳಿ ಬಿರು ಬಿಸಿಲಿನಲ್ಲಿ ತಣ್ಣನೆಯ ಅನುಭವವನ್ನು ನೀಡುತ್ತದೆ. ಒಟ್ಟಾರೆ ಸಣ್ಣ ಹೊಸೂರಿನ ಅಪರೂಪದ ದೊಡ್ಡ ಕೆರೆ ಜನ, ಜಾನುವಾರುಗಳು ಹಾಗೂ ಪ್ರಾಣಿ– ಪಕ್ಷಿಗಳ ದಾಹ ನೀಗಿಸುವ ಮೂಲಕ ಅಸಂಖ್ಯಾತ ಬಾನಾಡಿಗಳ ಆಶ್ರಯತಾಣವಾಗಿದೆ.
ತೋಪಿನಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಣ್ಣ ಹೊಸೂರು ಕೆರೆಯಲ್ಲಿ ನೀರು ಸಂಗ್ರಹವಿರುವ ಕಾರಣ ಕೆರೆ ಸುತ್ತಲಿನ 3 ಕಿ.ಮೀ ವ್ಯಾಪ್ತಿಯ ಸಣ್ಣ ಹೊಸೂರು ನಿಡಗಲ್ ಭಂಡರಗಾಳಿ ತೋಪಿನಕಟ್ಟಿ ಗ್ರಾಮಗಳ ಕೊಳವೆಬಾವಿಗಳ ಅಂತರ್ಜಲ ಮಟ್ಟ ಸುಧಾರಿಸಿದೆ. ಜೊತೆಗೆ ಕೆರೆಯ ಕೆಳಭಾಗದ ಜಮೀನುಗಳಲ್ಲಿ ರೈತರು ಬೇಸಿಗೆಯಲ್ಲೂ ಒಂದು ಬೆಳೆಯನ್ನು ಬೆಳೆಯುತ್ತಿದ್ದಾರೆ. ಈ ರೀತಿಯ ಕೆರೆಗಳು ಎಲ್ಲೆಡೆ ಇರಬೇಕು ಎಂಬ ಬಗ್ಗೆ ಚಿಂತನೆ ನಡೆಸಿದ್ದೇನೆ ಎನ್ನುತ್ತಾರೆ ಶಾಸಕ ವಿಠ್ಠಲ ಹಲಗೇಕರ.
‘ಸಣ್ಣ ಹೊಸೂರು ಕೆರೆ ಖಾನಾಪುರ ತಾಲ್ಲೂಕಿನ ದೊಡ್ಡ ಕೆರೆಗಳ ಪೈಕಿ ಒಂದಾಗಿದೆ. ಈ ಕೆರೆಯ ದಡದಲ್ಲಿ ಅಸಂಖ್ಯಾತ ಬಾನಾಡಿಗಳು ಆಶ್ರಯ ಪಡೆದಿವೆ. ಈ ಕೆರೆಯಲ್ಲಿ ವರ್ಷದ ಎಲ್ಲಾ ತಿಂಗಳು ನೀರು ಸಂಗ್ರಹವಿರುವ ಕಾರಣ ಪ್ರಾಣಿ-ಪಕ್ಷಿಗಳು ತಮ್ಮ ದಾಹ ನೀಗಿಸಿಕೊಳ್ಳುತ್ತಿವೆ’ ಎನ್ನುತ್ತಾರೆ ವಲಯ ಅರಣ್ಯ ಅಧಿಕಾರಿ ನಾಗರಾಜ ಬಾಳೇಹೊಸೂರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.