ADVERTISEMENT

ಬೆಳಗಾವಿ | ಅಭಿವೃದ್ಧಿಗೆ ಮತದಾನ, ಟೀಕೆಗೆ ತಿರುಗುಬಾಣ

ಮೌನವಾಗಿದ್ದೇ ಮತದಾರರ ಮನ ಗೆದ್ದ ಜಗದೀಶ ಶೆಟ್ಟರ್‌, ಸತೀಶ ಜಾರಕಿಹೊಳಿ

ಸಂತೋಷ ಈ.ಚಿನಗುಡಿ
Published 12 ಜೂನ್ 2024, 5:20 IST
Last Updated 12 ಜೂನ್ 2024, 5:20 IST
   

ಬೆಳಗಾವಿ: ‘ಮತದಾರನ ಮನದಾಳ ಅರ್ಥ ಮಾಡಿಕೊಳ್ಳುವುದು ಮೀನಿನ ಹೆಜ್ಜೆ ಎಣಿಸಿದಂತೆ’ ಎಂಬ ಮಾತಿದೆ. ಈ ಬಾರಿ ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭೆ ಕ್ಷೇತ್ರಗಳ ಚುನಾವಣೆಯಲ್ಲೂ ಮತದಾರ ಅದನ್ನು ಸಾಬೀತು ಮಾಡಿದ್ದಾನೆ. ‘ಅಭಿವೃದ್ಧಿ’ಗೆ ಮತದಾನ; ‘ಟೀಕೆ’ಗೆ ತಿರುಗುಬಾಣ ನೀಡಿದ್ದಾನೆ.

ಬೆಳಗಾವಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಮುಖಂಡರು ಜಗದೀಶ ಶೆಟ್ಟರ್‌ ವಿರುದ್ಧ ಟೀಕೆಗಳ ಹೊಳೆಯನ್ನೇ ಹರಿಸಿದರು.

ಆದರೆ, ಶೆಟ್ಟರ್‌ ಯಾವುದಕ್ಕೂ ಪ್ರತಿಕ್ರಿಯೆ ನೀಡಲಿಲ್ಲ. ಅದೇ ರೀತಿ ಚಿಕ್ಕೋಡಿ ಕ್ಷೇತ್ರದಲ್ಲಿ ಬಿಜೆಪಿ ನಾಯಕರು ಜಾರಕಿಹೊಳಿ ಕುಟುಂಬದ ವಿರುದ್ಧ ಆರೋಪಗಳ ಸುರಿಮಳೆಗೈದರು. ಸತೀಶ ಯಾವುದಕ್ಕೂ ಪ್ರತಿಕ್ರಿಯಿಸದೇ ಮತಜಾಲ ಹೆಣೆದರು.

ADVERTISEMENT

ಜಗದೀಶ ಶೆಟ್ಟರ್‌ ಅವರಿಗೆ ಟಿಕೆಟ್‌ ಖಾತ್ರಿಯಾದ ದಿನದಿಂದಲೇ ಕಾಂಗ್ರೆಸ್‌ ಅವರ ಮೇಲೆ ಮುಗಿಬಿದ್ದಿತು.

ಅದರಲ್ಲೂ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಶೆಟ್ಟರ್‌ ಮೇಲೆ ಟೀಕೆಗಳ ಸುರಿಮಳೆಯನ್ನೇ ಗೈದರು. ‘ಶೆಟ್ಟರ್‌ ಹೊರಗಿನ ವ್ಯಕ್ತಿ’ ಎಂಬ ವಾದವನ್ನು ಪದೇಪದೇ ಮತದಾರರ ತಲೆಯಲ್ಲಿ ‘ತುರುಕಲು’ ಯತ್ನಿಸಿದರು.

‘ಬೆಳಗಾವಿಯ ಜನ ಸ್ವಾಭಿಮಾನಿಗಳು. ಹೊರಗಿನ ವ್ಯಕ್ತಿಗೆ ಮತ ನೀಡುವುದಿಲ್ಲ. ಸ್ವಾಭಿಮಾನ ಬಿಟ್ಟುಕೊಡುವುದಿಲ್ಲ’ ಎಂದು ಮತದಾರರ ಮೇಲೂ ಹೊಣೆ ಹೊರಿಸಿದರು.

‘ಬೀಗರ ಮನೆಗೆ ಬಂದಿದ್ದೀರಿ ಶೆಟ್ಟರೆ, ಉಂಡು ವಾಪಸ್‌ ಹೋಗಿ. ಇಲ್ಲದಿದ್ದರೆ ಬೆಳಗಾವಿ ಮತದಾರರೇ ನಿಮ್ಮನ್ನು ಕಳಿಸಿಕೊಡುತ್ತಾರೆ’ ಎಂದೂ ಕುಟುಕಿದರು.

‘ಕೋವಿಡ್ ಸಂದರ್ಭದಲ್ಲಿ ಬೆಳಗಾವಿಗೆ ಬಂದ ಆಕ್ಸಿಜನ್‌ ಸಿಲಿಂಡರ್‌ಗಳನ್ನು ಹುಬ್ಬಳ್ಳಿಗೆ ಕಳುಹಿಸಿದರು. ಜನರಿಗೆ ರೆಮ್‌ಡಿಸಿವರ್‌ ಸಿಗದಂತೆ ಮಾಡಿದರು. ಐಟಿ ಪಾರ್ಕ್‌ ಧಾರವಾಡಕ್ಕೆ ಒಯ್ದರು. ಬೆಳಗಾವಿಗೆ ಮೋಸ ಮಾಡಿದರು’ ಎಂದೆಲ್ಲ ಲಕ್ಷ್ಮಿ ಹೆಬ್ಬಾಳಕರ ಟೀಕಾಸ್ತ್ರ ಪ್ರಯೋಗ ಮಾಡಿದರು.

ಅಭ್ಯರ್ಥಿ ಮೃಣಾಲ್‌ ಕೂಡ ಒಂದು ಹೆಜ್ಜೆ ಮುಂದೆ ಹೋಗಿ ‘ಮತ ಕೇಳಲು ಶೆಟ್ಟರ್‌ಗೆ ನಾಚಿಕೆ ಆಗುವುದಿಲ್ಲವೇ’ ಎಂದು ಪ್ರಶ್ನಿಸಿದರು. ‘ಬೆಳಗಾವಿಯಲ್ಲಿ ನಾಲ್ಕು ಬಾರಿ ಗೆದ್ದರೂ ಬಿಜೆಪಿ ಸಂಸದರೂ ಏನೂ ಅಭಿವೃದ್ಧಿ ಮಾಡಿಲ್ಲ. ಇವರಿಗೆ ಮತ ಕೇಳುವ ಅರ್ಹತೆ ಇಲ್ಲ’ ಎಂದು ಹೀಯಾಳಿಸಿದರು.

‘ಮೃದು ಸ್ವಭಾವಿ’ ಎಂದೇ ಹೆಸರಾದ ಮಾಜಿ ಸಂಸದೆ ಮಂಗಲಾ ಅಂಗಡಿ ಅವರೇ ಈ ಮಾತಿಗೆ ಖುದ್ದುಹೋಗಿದ್ದರು. ‘ಮೃಣಾಲ್‌ ಚಿಕ್ಕವನು. ಮೊದಲು ಹಿರಿಯರಿಗೆ ಗೌರವ ಕೊಡುವ ಸಂಸ್ಕಾರ ಕಲಿಯಬೇಕು. ನಂತರ ರಾಜಕೀಯ ಮಾಡಬೇಕು’ ಎಂಬ ತಿರುಗೇಟು ನೀಡಿದರು.

ಮತದಾರರಿಗೆ ಕಾಂಗ್ರೆಸ್‌ ಆರೋಪಗಳು ತುಸು ‘ಭಾರ’ವಾಗಿ ಪರಿಣಮಿಸಿದವು.

ಇಷ್ಟೆಲ್ಲ ನಡೆದರೂ ಶೆಟ್ಟರ್‌ ಮಾತ್ರ ಯಾವುದಕ್ಕೂ, ಯಾರಿಗೂ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಲಿಲ್ಲ. ಬೆಳಗಾವಿ ಬಗ್ಗೆ ತಾವು ಇಟ್ಟುಕೊಂಡ ಅಭಿವೃದ್ಧಿ ಕನಸುಗಳನ್ನು ಬಿಚ್ಚುತ್ತ ಹೋದರು. ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಮತ ಕೋರಿದರು. ಕಾಂಗ್ರೆಸ್‌ ನಾಯಕರನ್ನಾಗಲೀ, ಸಚಿವರನ್ನಾಗಲೀ, ಗ್ಯಾರಂಟಿ ಯೋಜನೆಗಳನ್ನಾಗಲೀ ಅವರು ಟೀಕಿಸಲಿಲ್ಲ. ಇದು ‘ಜಾಣ ನಡೆ’ ಎಂದು ಹಿರಿಯರು ವಿಶ್ಲೇಷಿಸುತ್ತಾರೆ.

ಯುವಜನರು ರಾಜಕಾರಣಕ್ಕೆ ಬರಬೇಕು. ಯುವ ಹೃದಯಗಳಲ್ಲಿ ದೂರದೃಷ್ಟಿ ಇರುತ್ತದೆ, ಆಧುನಿಕ ಕನಸುಗಳಿರುತ್ತವೆ. ‘ಅಪ್ಡೇಟ್‌’ ಆದ ಆಲೋಚನೆಗಳು ಇರುತ್ತವೆ... ಎಂಬುದು ಮತದಾರರ ಆಲೋಚನೆ. ಹೊಸಬರು ಕೂಡ ಮತ್ತದೇ ‘ಸಾಂಪ್ರದಾಯಿಕ’ ಆರೋಪ– ಪ್ರತ್ಯಾರೋಪಗಳಲ್ಲಿ ತೊಡಗುವುದನ್ನು ಮತದಾರ ಒಪ್ಪಿಕೊಳ್ಳುವುದಿಲ್ಲ ಎಂಬುದಕ್ಕೆ ಈ ಚುನಾವಣೆ ಉದಾಹರಣೆ.

ಚುನಾವಣೆ ನಡೆದ ಸಂದರ್ಭ, ಮತದಾನದ ದಿನ, ಮತ ಎಣಿಕೆಯ ದಿನ ಸಚಿವ ಸತೀಶ ಜಾರಕಿಹೊಳಿ ಅತ್ಯಂತ ನಿರುಮ್ಮಳವಾಗಿ ಓಡಾಡಿಕೊಂಡಿದ್ದರು!

ತಮ್ಮ ಪುತ್ರಿಯ ಭವಿಷ್ಯ ರೂಪಿಸುವ ಚುನಾವಣೆ ಇದು ಎಂಬ ಕಿಂಚಿತ್‌ ಆತಂಕವೂ ಅವರಲ್ಲಿ ಕಾಣಿಸದಂತೆ ವರ್ತಿಸಿದರು. ಮತದಾನದ ಮಾರನೇ ದಿನ ಗೋಕಾಕದ ಯೋಗಿಕೊಳ್ಳ ಪರಿಸರದಲ್ಲಿ ದಿನಗಳೆದರು. ಜನರೊಂದಿಗೆ ಅಂಗಡಿಗಳಲ್ಲಿ ಹರಟೆ ಹೊಡೆದರು. ಮತ ಎಣಿಕೆಯ ಹಿಂದಿನ ದಿನ ಆಪ್ತರೊಂದಿಗೆ ಸೇರಿ ಮೀನುಗಳಿಗೆ ತಿನಿಸು ಹಾಕಿದರು...

ಸತೀಶ ಜಾರಕಿಹೊಳಿ ಅವರ ಈ ನಿರುಮ್ಮುಳ ನಡೆಯೇ ಎದುರಾಳಿ ಪಡೆ ಗಲಿಬಿಲಿಗೊಳ್ಳುವಂತೆ ಮಾಡಿತು.

‘ಜಾರಕಿಹೊಳಿ ಕುಟುಂಬಕ್ಕೆ ದಾಸರಾಗಿ ಉಳಿಯಬೇಡಿ. ಅವರ ಮನೆಯ ತೊಟ್ಟಿಲಲ್ಲಿ ಇರುವ ಕೂಸುಗಳ ಕಾಲಿಗೂ ಬೀಳಬೇಡಿ’ ಎಂಬ ಕಿಡಿನುಡಿಯನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊರಹಾಕಿದ್ದರು. ‘ಜಾರಕಿಹೊಳಿ ಕುಟುಂಬ ತಮ್ಮ ಕ್ಷೇತ್ರದಲ್ಲಿ ಏನಾದರೂ ಮಾಡಿಕೊಳ್ಳಲಿ. ಇನ್ನೊಬ್ಬರ ಕ್ಷೇತ್ರಕ್ಕೆ ಬಂದು ಬಾಲ ಬಿಚ್ಚಬೇಡಿ’ ಎಂಬ ಟೀಕೆಯನ್ನು ಅಣ್ಣಾಸಾಹೇಬ ಪದೇಪದೇ ಮಾಡಿದ್ದರು.

ಸತೀಶ ಅವರೂ ಸೇರಿದಂತೆ ಕಾಂಗ್ರೆಸ್‌ನ ಯಾವೊಬ್ಬ ನಾಯಕ ಟೀಕೆಗಳಿಗೆ ಪ್ರತಿಕ್ರಿಯೆ ನೀಡಲಿಲ್ಲ.

ಅಭ್ಯರ್ಥಿ ಪ್ರಿಯಾಂಕಾ ಸಹ ಪ್ರಧಾನಿ ಮೋದಿ ಅವರನ್ನಾಗಲೀ, ಅಣ್ಣಾಸಾಹೇಬ ಜೊಲ್ಲೆ ಅವರನ್ನಾಗಲೀ ಟೀಕೆಗೆ ಗುರಿ ಮಾಡಲಿಲ್ಲ. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು, ತಂದೆಯ ಅಭಿವೃದ್ಧಿ ಕೆಲಸಗಳು, ಸಂಸತ್ತಿನಲ್ಲಿ ಯುವಧ್ವನಿಯ ಅಗತ್ಯ ಎಂಬುದನ್ನೇ ಪ್ರಚಾರಕ್ಕೆ ಬಳಸಿಕೊಂಡರು. ಈ ‘ಜಾಣ ನಡೆ’ಯೇ ಅವರು ಮತದಾ ರರಿಗೆ ಹತ್ತಿರವಾಗುವಂತೆ ಮಾಡಿತು ಎಂಬುದು ತಜ್ಞರ ಅಭಿಮತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.