ಬೆಳಗಾವಿ: ರಾಜ್ಯದ ಬಹುತೇಕ ನಿಗಮ, ಮಂಡಳಿಗಳ ನಿರ್ದೇಶಕ ಮತ್ತು ಸದಸ್ಯತ್ವ ಸ್ಥಾನಗಳ ನೇಮಕಾತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನೂ ಒಪ್ಪಿಗೆ ನೀಡದಿರುವುದು ಮುಖಂಡರು, ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ.
ಸರ್ಕಾರ ರಚನೆಯಾಗಿ ಒಂದೂವರೆ ವರ್ಷವಾದರೂ ದುಡಿದವರಿಗೆ ‘ಪ್ರತಿಫಲ’ ಸಿಕ್ಕಿಲ್ಲ ಎಂಬ ನೋವು ಕಾರ್ಯಕರ್ತರದ್ದು. ಗ್ರೇಡ್–1 ನಿರ್ದೇಶಕರೂ ಸೇರಿ ಅಂದಾಜು 700ಕ್ಕೂ ಹೆಚ್ಚು ನಿರ್ದೇಶಕ ಸ್ಥಾನಗಳು ಖಾಲಿ ಇವೆ.
ಆಗಸ್ಟ್ 3ರಂದು ಗೃಹಸಚಿವ ಜಿ.ಪರಮೇಶ್ವರ ನೇತೃತ್ವದಲ್ಲಿ ಎಲ್ಲ ನಿಗಮ, ಮಂಡಳಿಗಳ ನೇಮಕಾತಿ ಕುರಿತ ಸಭೆ ನಡೆದಿದೆ. ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್, ಸತೀಶ ಜಾರಕಿಹೊಳಿ, ಸಂತೋಷ ಲಾಡ್, ಡಾ. ಶರಣಪ್ರಕಾಶ ಪಾಟೀಲ, ರಾಜ್ಯಸಭೆ ಸದಸ್ಯ ಜೆ.ಸಿ. ಚಂದ್ರಶೇಖರ ಸೇರಿ 11 ಜನರ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಗ್ರೇಡ್–1 ನಿರ್ದೇಶಕರು, ನಿರ್ದೇಶಕರು ಹಾಗೂ ಸದಸ್ಯರ ಪಟ್ಟಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಿದೆ.
ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನೂ ಅಂಕಿತ ಹಾಕಿಲ್ಲ. ಅಕ್ಟೋಬರ್ 16ರಂದು ಅಂತಿಮ ನೇಮಕಾತಿ ಪಟ್ಟಿ ಹೊರಬೀಳಲಿದೆ ಎಂದು ಪಕ್ಷದ ನಾಯಕರು ಭರವಸೆ ನೀಡಿದ್ದರು. ಅದೂ ಹುಸಿಯಾಗಿದೆ. ಲಾಬಿ ಮಾಡಿದ ಕೆಲವರನ್ನು ಮಾತ್ರ ಕೆಲವು ಮಂಡಳಿಗಳಿಗೆ ನೇಮಿಸಿದ್ದಾರೆ ಎಂಬುದು ತಕರಾರು.
‘ನಿಗಮ, ಮಂಡಳಿ ಅಧ್ಯಕ್ಷರ ನೇಮಕದ ಬೆನ್ನಲ್ಲೇ ನಿರ್ದೇಶಕ, ಸದಸ್ಯ ಸ್ಥಾನಗಳನ್ನೂ ನೇಮಿಸಬೇಕಿತ್ತು. ಆರಂಭದಲ್ಲಿ ಗ್ಯಾರಂಟಿಗಳನ್ನು ಸಮರ್ಪಕ ಅನುಷ್ಠಾನ ಮಾಡಲು ಶ್ರಮಪಡಬೇಕು ಎಂದು ಸೂಚಿಸಿದರು. ನಂತರ ಲೋಕಸಭೆ ಚುನಾವಣೆ ನೆಪ ಹೇಳಿದರು. ವಾಲ್ಮೀಕಿ ಅಭಿವೃದ್ಧಿ ನಿಗಮ–ಮುಡಾ ಪ್ರಕರಣಗಳ ಗೊಂದಲ ಶುರುವಾದಾಗ ಮತ್ತೆ ವಿಳಂಬ ಮಾಡಿದರು. ಗಣೇಶ ಚತುರ್ಥಿ ಬಳಿಕ ಅಥವಾ ದಸರೆ ಬಳಿಕ ಪಟ್ಟಿ ಬಿಡಲಾಗುವುದು ಎಂದಿದ್ದರು. ಈಗ ಮತ್ತೆ ದೀಪಾವಳಿ ಬಳಿಕ ಎನ್ನುತ್ತಿದ್ದಾರೆ. ಅದಾದ ಬಳಿಕ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನೆಪವಿದೆ. ಒಂದೂವರೆ ವರ್ಷದಿಂದ ನೆಪ ಹೇಳುತ್ತಲೇ ಇದ್ದಾರೆ’ ಎಂದು ಕಾಂಗ್ರೆಸ್‌ನ ಕೆಲ ಮುಖಂಡರು ‘ಪ್ರಜಾವಾಣಿ’ ತಿಳಿಸಿದರು.
‘ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣ ಬೆಳಕಿಗೆ ಬಂದ ಮೇಲೆ ಸಿದ್ದರಾಮಯ್ಯ ಅವರು ಈ ನೇಮಕಾತಿಗಳ ಬಗ್ಗೆ ಹೆಚ್ಚು ಜಾಗರೂಕತೆ ವಹಿಸುತ್ತಾರೆ. ಯಾರದೋ ಒತ್ತಡಕ್ಕೆ, ಲಾಬಿಗೆ ಬಿದ್ದು ಅನರ್ಹರ ಕೈಗೆ ಅಧಿಕಾರ ಕೊಡಬಾರದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ’ ಎಂಬುದು ಕೆಲ ಮುಖಂಡರ ಹೇಳಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.