ADVERTISEMENT

‘ಬೆಳಗಾವಿ’ ಬದಲಿಗೆ ‘ಬೆಲ್‌ಗಾಂ’: ಸ್ಪೈಸ್ ಜೆಟ್‌ ವಿರುದ್ಧ ಅಸಮಾಧಾನ

ಸ್ಪೈಸ್ ಜೆಟ್‌ ಕಂಪನಿ ವಿರುದ್ಧ ಕಾಟ್ಕರ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2022, 8:09 IST
Last Updated 15 ಮಾರ್ಚ್ 2022, 8:09 IST
ದೆಹಲಿಯ ವಿಮಾನನಿಲ್ದಾಣದಲ್ಲಿ ಬೆಳಗಾವಿ ಎನ್ನುವುದನ್ನು ತಪ್ಪಾಗಿ ನಮೂದಿಸಿರುವ ಚಿತ್ರ
ದೆಹಲಿಯ ವಿಮಾನನಿಲ್ದಾಣದಲ್ಲಿ ಬೆಳಗಾವಿ ಎನ್ನುವುದನ್ನು ತಪ್ಪಾಗಿ ನಮೂದಿಸಿರುವ ಚಿತ್ರ   

ಬೆಳಗಾವಿ: ಬೆಳಗಾವಿಯ ಹೆಸರನ್ನು ತಪ್ಪಾಗಿ ನಮೂದಿಸಿದ್ದಕ್ಕೆ ಇಲ್ಲಿನ ಸಾಹಿತಿ ಸರಜೂ ಕಾಟ್ಕರ್‌ ಅವರು ಸ್ಪೈಸ್ ಜೆಟ್‌ ವಿಮಾನಯಾನ ಕಂಪನಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಬೆಲಗಾವಿ ಅಥವಾ ಬೆಳ್‌ಗಾಂ ಎನ್ನುವುದು ಬೆಳಗಾವಿ ಎಂದು ಅಧಿಕೃತವಾಗಿ ಬದಲಾಗಿ ಹಲವು ವರ್ಷಗಳೇ ಕಳೆದಿವೆ. ವಿಮಾನ ನಿಲ್ದಾಣಗಳು, ರೈಲು ನಿಲ್ದಾಣ ಮೊದಲಾದ ಕಡೆಗಳಲ್ಲಿ ಬೆಳಗಾವಿ ಎಂದೇ ಬಳಸಲಾಗುತ್ತಿದೆ. ಆದರೆ, ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ಪೈಸ್‌ ಜೆಟ್‌ ವಿಮಾನಯಾನ ಕಂಪನಿಯು ತನ್ನ ಸೂಚನಾ ಫಲಕದಲ್ಲಿ ಪ್ರಯಾಣಿಕರಿಗೆ ಮಾಹಿತಿ ನೀಡುವಾಗ ಬೆಳಗಾವಿ ಎನ್ನುವುದನ್ನು ‘Belgaum’ ಎಂದೂ, ಹಿಂದಿಯಲ್ಲಿ ‘ಬೆಲ್‌ಗಾಂ’ ಎಂದೂ ಪ್ರದರ್ಶಿಸುತ್ತಿದೆ. ಇದು ಅಕ್ಷಮ್ಯವಾದುದು’ ಎಂದು ಸಾಮಾಜಿಕ ಜಾಲತಾಣದಲ್ಲಿ ದನಿ ಎತ್ತಿದ್ದಾರೆ.

‘ನಾನು ಮತ್ತು ಜೊತೆಗಿದ್ದ ಪ್ರಖ್ಯಾತ ಕಾದಂಬರಿಕಾರ ಬಾಳಾಸಾಹೇಬ ಲೋಕಾಪುರ ಅವರು ಕಂಪನಿಯ ನಡೆಯ ಬಗ್ಗೆ ಪ್ರತಿಭಟಿಸಿದೆವು. ಆ ಕಂಪನಿಯ ಸಿಬ್ಬಂದಿಗೆ ತಿಳಿಹೇಳಿದೆವು. ಅವರು ಈ ವಿಷಯವನ್ನು ಕಂಪನಿಯ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಹೇಳಿದರು. ಕನ್ನಡಿಗರೆಲ್ಲರೂ ಈ ವಿಷಯವನ್ನು ಸ್ಪೈಸ್‌ ಜೆಟ್‌ ಕಂಪನಿಯವರ ಗಮನಕ್ಕೆ ತರಬೇಕು’ ಎಂದು ಕೋರಿದ್ದಾರೆ.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ‘2015ರಲ್ಲಿ ಬೆಲಗಾಮ್ ಹೋಗಿ ಬೆಳಗಾವಿ ಎಂದು ಮರುನಾಮಕರಣವಾಗಿದೆ. ಸ್ಪೈಸ್ ಜೆಟ್ ಕಂಪನಿಯು ಇನ್ನೂ ಬೆಲಗಾಮ್ ಎಂದೇ ಬರೆದಿದ್ದರೆ ಅದರ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ. ಸರಜೂ ಕಾಟ್ಕರ್ ಅವರು ಸಾಹಿತಿಗಳನ್ನು ಕರೆದುಕೊಂಡು ಆ ಸಂಸ್ಥೆಯ ವಿರುದ್ಧ ಪ್ರತಿಭಟನೆ ಅಥವಾ ಧರಣಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಕನ್ನಡ ಹೋರಾಟಗಾರರು ಅವರಿಗೆ ಬೆಂಬಲ ನೀಡುತ್ತೇವೆ. ಕನ್ನಡದ ಅಸ್ಮಿತೆಯನ್ನು ಕಾಪಾಡಿಕೊಳ್ಳಬೇಕು’ ಎಂದು ತಿಳಿಸಿದ್ದಾರೆ.

ಹಿಂದೆ, ಸಾಂಬ್ರಾ ವಿಮಾನನಿಲ್ದಾಣದಲ್ಲಿ ಅಲ್ಲಿನ ಸಿಬ್ಬಂದಿ ಬೆಳಗಾವಿ ಎಂದು ಬಳಸದಿರುವುದಕ್ಕೆ ಮತ್ತು ಮಾಹಿತಿ ಫಲಕದಲ್ಲಿ ಕನ್ನಡ ಕಡೆಗಣಿಸಿದ್ದಕ್ಕೆ ಕನ್ನಡಿಗರಿಂದ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಎಚ್ಚೆತ್ತುಕೊಂಡಿದ್ದ ಅಧಿಕಾರಿಗಳು, ಲೋಪವನ್ನು ಸರಿಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.