ಬೆಳಗಾವಿ: ನಗರ ಹಾಗೂ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಜನರು ಶ್ರೀರಾಮ ನವಮಿಯನ್ನು ಸಡಗರ ಹಾಗೂ ಭಕ್ತಿಭಾವದಿಂದ ಭಾನುವಾರ ಆಚರಿಸಿದರು.
ಕೋವಿಡ್–19 ಕಾರಣದಿಂದಾಗಿ ಕಳೆದ ಎರಡು ವರ್ಷಗಳು ಉತ್ಸವ ಮಂಕಾಗಿತ್ತು. ದೇವಸ್ಥಾನಗಳಿಗೆ ಸೀಮಿತವಾಗಿ ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಕೋವಿಡ್ ಕಾರ್ಮೋಡ ಕರಗಿದ್ದರಿಂದಾಗಿ ಸಂಭ್ರಮ ಜೋರಾಗಿತ್ತು.
ದೇವಾಲಯಗಳಲ್ಲಿ ವಿಶೇಷ ಪೂಜೆ– ಪುನಸ್ಕಾರಗಳು ನಡೆದವು. ಶ್ರೀರಾಮ ಮೂರ್ತಿಯನ್ನು ತೊಟ್ಟಿಲಲ್ಲಿರಿಸಿ ತೂಗುವ ಕಾರ್ಯಕ್ರಮಗಳು ದೇಗುಲಗಳಲ್ಲಿ ಜರುಗಿದವು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ನೂರಾರು ಮಂದಿ ಪಾಲ್ಗೊಂಡಿದ್ದರು.
ನಗರದ ರಾಮ್‌ದೇವ್‌ಗಲ್ಲಿ, ಕೇಳ್ಕರ್‌ಬಾಗ್‌ನಲ್ಲಿರುವ ಶ್ರೀರಾಮ ದೇವಾಲಯ, ಆಂಜನೇಯ ನಗರ, ಹನುಮಾನ್ ನಗರ, ಅನಗೋಳ, ಶಾಹುನಗರ ಮತ್ತು ಶ್ರೀನಗರದ ಸಾಯಿ ಮಂದಿರದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಕಣಬರ್ಗಿ, ರಾಮನಗರ, ಸಮರ್ಥನಗರ, ಭೋವಿ ಗಲ್ಲಿ ಹಾಗೂ ಚವಾಟ್ ಗಲ್ಲಿ ಮೊದಲಾದ ಕಡೆಗಳಲ್ಲೂ ಆಚರಿಸಲಾಯಿತು. ಮಧ್ಯಾಹ್ನ ಅನ್ನಪ್ರಸಾದ ವಿತರಣೆ, ಸಂಜೆ ಭಜನಾ ಕಾರ್ಯಕ್ರಮಗಳು ಜರುಗಿದವು.
ಶ್ರೀನಗರದ ವಂಟಮೂರಿಯ ಸಾಯಿ ಮಂದಿರದಲ್ಲಿ ಸಾಯಿ ಮಂದಿರ ಅಭಿವೃದ್ಧಿ ಸೇವಾ ಸಮಿತಿಯಿಂದ ಶ್ರೀರಾಮ ನವಮಿ ಜೊತೆಗೆ ಸಾಯಿ ಜಯಂತಿಯನ್ನೂ ಆಚರಿಸಲಾಯಿತು. ವಿಶೇಷ ಪೂಜೆ ಹಾಗೂ ಅಭಿಷೇಕ ನಡೆಯಿತು. ಮಹಿಳೆಯರಿಗೆ ಉಡಿ ತುಂಬಲಾಯಿತು. ಸಮಿತಿಯ ಅಧ್ಯಕ್ಷ ಎಸ್.ಎಸ್. ಕೌಜಲಗಿ ಹಾಗೂ ಕಾರ್ಯದರ್ಶಿ ಆರ್.ಪಿ. ಪಾಟೀಲ ನೇತೃತ್ವ ವಹಿಸಿದ್ದರು.
ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಬೆಳಗಾವಿ ಘಟಕದವರು ಬೈಕ್ ರ್‍ಯಾಲಿ ನಡೆಸಿದರು. ವಂಟಮೂರಿ ಸಾಯಿ ಮಂದಿರ ಬಳಿಯಿಂದ ಆರಂಭವಾದ ರ‍್ಯಾಲಿಯು ಶ್ರೀನಗರ ಉದ್ಯಾನ, ಧರ್ಮನಾಥ ವೃತ್ತ, ಹಾಲು ಒಕ್ಕೂಟ ರಸ್ತೆ, ದತ್ತ ಮಂದಿರ, ಕಣಬರ್ಗಿ ಕೆರೆ, ಆಟೊನಗರ, ಹರ್ಷ ಹೋಟೆಲ್ ಎದುರಿನ ರಸ್ತೆ ಮಾರ್ಗದಲ್ಲಿ ಕಾರ್ಯಕರ್ತರು ಸಂಚರಿಸಿದರು. ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಕಾಂತ ಕದಂ ನೇತೃತ್ವ ವಹಿಸಿದ್ದರು.
ಅದ್ಧೂರಿ ಶೋಭಾಯಾತ್ರೆ
ನಗರದ ಡಾ.ಬಿ.ಆರ್. ಅಂಬೇಡ್ಕರ್ ಉದ್ಯಾನದಿಂದ ಸಂಜೆ ನಡೆದ ಶ್ರೀರಾಮ, ಹನುಮಾನ್ ಬೃಹತ್ ಪ್ರತಿಮೆಯ ಅದ್ಧೂರಿ ಶೋಭಾಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಹಾಡುಗಳಿಗೆ ನರ್ತಿಸಿ ಸಂಭ್ರಮಿಸಿದರು. ಮೆರವಣಿಗೆಯುದ್ದಕ್ಕೂ ಕೇಸರಿ ಬಾವುಟಗಳು ರಾರಾಜಿಸಿದವು. ರಾತ್ರಿವರೆಗೂ ಮುಂದುವರಿಯಿತು.
ಬಹುತೇಕರು ಕೇಸರಿ ರುಮಾಲುಗಳನ್ನು ಕಟ್ಟಿಕೊಂಡು ಭಾಗವಹಿಸಿದ್ದರು. ಜೈ ಶ್ರೀರಾಮ್, ಜೈ ಹನುಮಾನ್ ಘೋಷಣೆಗಳು ಮೊಳಗಿದವು. ಕಾಲೇಜು ರಸ್ತೆ, ಬೋಗಾರ್‌ವೇಸ್ ಮೂಲಕ ತಿಲಕ ಚೌಕದವರೆಗೆ ಮೆರವಣಿಗೆ ಸಾಗಿತು. ಶ್ರೀರಾಮ ಸೇನಾ ಹಿಂದೂಸ್ತಾನ ಸಂಘಟನೆ ಅಧ್ಯಕ್ಷ ರಮಾಕಾಂತ ಕೊಂಡುಸ್ಕರ ಮೊದಲಾದವರು ನೇತೃತ್ವ ವಹಿಸಿದ್ದರು. ವಿವಿಧ ಕಲಾತಂಡಗಳು, ರೂಪಕಗಳು ಭಾಗವಹಿಸಿದ್ದರು.
ಶ್ರೀರಾಮ, ಲಕ್ಷ್ಮಣ, ಸೀತೆ, ಹನುಮಾನ್ ಮೊದಲಾದವರ ವೇಷ ಧರಿಸಿದ್ದ ಮಕ್ಕಳು ಸಾರೋಟಿನಲ್ಲಿ ಕುಳಿತಿದ್ದರು. ಮಕ್ಕಳು ತೆರದ ವಾಹನವೊಂದರಲ್ಲಿ ಮಲ್ಲಕಂಬ ಸಾಹಸ ಪ್ರದರ್ಶಿಸಿದರು. ಕೆಲ ಅಭಿಮಾನಿಗಳು ಚಿತ್ರನಟ ದಿವಂಗತ ಪುನೀತ್ ರಾಜ್‌ಕುಮಾರ್ ಫೋಟೊ ಪ್ರದರ್ಶಿಸಿ ಅಭಿಮಾನ ಮೆರೆದರು. ಕನ್ನಡ, ಮರಾಠಿ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.
ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಆಕರ್ಷಕ ದೀಪಗಳಿದ್ದ ಧ್ವನಿವರ್ಧಕದ ಸಾಮಗ್ರಿಗಳನ್ನು ಕ್ರೇನ್ ಮೂಲಕ ತಂದಿದ್ದು ವಿಶೇಷವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.