ADVERTISEMENT

ಆರ್ಥಿಕ ಸಂಕಷ್ಟದಿಂದಾಗಿ ಶಿಕ್ಷಣ ಮೊಟಕುಗೊಳಿಸಲು ನಿರ್ಧರಿಸಿದ್ದೆ: ಅನುಪಮಾ

ಬಡತನದ ಮಧ್ಯೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮೆರೆದ ಅನುಪಮಾ

​ಪ್ರಜಾವಾಣಿ ವಾರ್ತೆ
Published 8 ಮೇ 2023, 15:23 IST
Last Updated 8 ಮೇ 2023, 15:23 IST
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿನಿ ಅನು‍ಪಮಾ ಹಿರೇಹೊಳಿ ಅವರಿಗೆ ತಾಯಿ ರಾಜಶ್ರೀ ಸಿಹಿ ತಿನ್ನಿಸಿ ಸಂಭ್ರಮಿಸಿದರು/ಪ್ರಜಾವಾಣಿ ಚಿತ್ರ: ಬಸವರಾಜ ಶಿರಸಂಗಿ 
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿನಿ ಅನು‍ಪಮಾ ಹಿರೇಹೊಳಿ ಅವರಿಗೆ ತಾಯಿ ರಾಜಶ್ರೀ ಸಿಹಿ ತಿನ್ನಿಸಿ ಸಂಭ್ರಮಿಸಿದರು/ಪ್ರಜಾವಾಣಿ ಚಿತ್ರ: ಬಸವರಾಜ ಶಿರಸಂಗಿ    

ಇಮಾಮ್‌ಹುಸೇನ್‌ ಗೂಡುನವರ/ ಬಸವರಾಜ ಶಿರಸಂಗಿ

ಸವದತ್ತಿ(ಬೆಳಗಾವಿ ಜಿಲ್ಲೆ): ‘ಮನೆಗೆ ಆಧಾರವಾಗಿದ್ದ ತಂದೆ ಶ್ರೀಶೈಲ ಒಂದೂವರೆ ವರ್ಷದ ಹಿಂದೆ ಮೃತಪಟ್ಟಿದ್ದರಿಂದ ನಮಗೆ ದಿಕ್ಕೇ ತೋಚದಂತಾಯಿತು. ತಮಗೆ ಬರುವ ಮಾಸಿಕ ₹5 ಸಾವಿರ ಸಂಬಳದಲ್ಲಿ ನನ್ನನ್ನು ಮತ್ತು ತಮ್ಮನನ್ನು ಸಲಹುವ ಜತೆಗೆ, ಶೈಕ್ಷಣಿಕ ವೆಚ್ಚ ಭರಿಸಲು ತಾಯಿ ಪರದಾಡುವಂತಾಯಿತು. ಹಾಗಾಗಿ 9ನೇ ತರಗತಿಗೇ ಶಿಕ್ಷಣ ಮೊಟಕುಗೊಳಿಸಲು ತೀರ್ಮಾನಿಸಿದ್ದೆ. ಆದರೆ, ಛಲ ಬಿಡದ ತಾಯಿ ಓದುವಂತೆ ಪ್ರೋತ್ಸಾಹಿಸಿದರು. ಶಿಕ್ಷಕರು ಸೂಕ್ತ ಮಾರ್ಗದರ್ಶನ ನೀಡಿದರು. ಇದರ ಫಲವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲಿಗಳಾಗಿದ್ದಕ್ಕೆ ಸಂತಸವಾಗಿದೆ’

ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿದ ಸವದತ್ತಿಯ ಕುಮಾರೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಅನುಮಮಾ ಹಿರೇಹೊಳಿ ‘ಪ್ರಜಾವಾಣಿ’ ಎದುರು ಹೀಗೆ ಸಂಭ್ರಮಿಸಿದರು.

ADVERTISEMENT

ಇಲ್ಲಿನ ಅಕ್ಕಿ ಓಣಿಯಲ್ಲಿ ನೆಲೆಸಿದ ಅನುಪಮಾ ಅವರದ್ದು ಬಡ ಕುಟುಂಬ. ತಾಯಿಗೆ ಬರುವ ಅತ್ಯಲ್ಪ ಸಂಬಳ ಬಿಟ್ಟರೆ, ಬೇರೆ ಯಾವುದೇ ಆದಾಯವಿಲ್ಲ. ಆದರೂ, ಬಡತನದ ಮಧ್ಯೆ ಓದು ಮುಂದುವರಿಸಿದ ಆಕೆ ತನ್ನ ಪ್ರತಿಭೆ ಮೂಲಕ ಗಮನಸೆಳೆದಿದ್ದಾಳೆ. ಭವಿಷ್ಯದಲ್ಲಿ ಐಎಎಸ್‌ ಅಧಿಕಾರಿಯಾಗುವ ಕನಸು ಹೊತ್ತಿರುವ ಅನುಪಮಾ, ಪಿಯು ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆಯಲು ಕಾತರರಾಗಿದ್ದಾಳೆ. ಆದರೆ, ಮುಂದಿನ ಶಿಕ್ಷಣಕ್ಕೆ ಆರ್ಥಿಕ ಮುಗ್ಗಟ್ಟು ಎದುರಾಗಿದೆ.  ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ತಂದೆ ನಿಧನರಾಗಿದ್ದಾರೆ. ಕಿರಿಯ ಸಹೋದರ ಬಸವರಾಜ 8ನೇ ತರಗತಿ ಓದುತ್ತಿದ್ದಾನೆ.

‘ಕುಟುಂಬದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಹಾಗಾಗಿ ಇಂಥದ್ದೇ ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕೆಂದು ತೀರ್ಮಾನಿಸಿಲ್ಲ. ಸರ್ಕಾರ ಅಥವಾ ಸಂಘ–ಸಂಸ್ಥೆಯವರು ನೆರವಾದರೆ ಅವರಿಗೆ ಕೃತಜ್ಞಳಾಗಿರುತ್ತೇನೆ. ಉತ್ತಮ ಕಾಲೇಜಿನಲ್ಲಿ ಪ್ರವೇಶ ಪಡೆದು ಓದು ಮುಂದುವರಿಸಬೇಕೆನ್ನುವ ಆಸೆ ಹೊಂದಿದ್ದೇನೆ’ ಎಂದು ಅನುಪಮಾ ತಮ್ಮ ಮನದಾಳ ಬಿಚ್ಚಿಟ್ಟರು.

‘ನಮ್ಮ ತಂದೆಗೆ ನನ್ನನ್ನು ಐಎಎಸ್‌ ಅಧಿಕಾರಿಯನ್ನಾಗಿಸುವ ಆಸೆಯಿತ್ತು. ಅನಾರೋಗ್ಯ ಅವರನ್ನು ಬಲಿ ಪಡೆಯಿತು. ತಂದೆ ಕಳೆದುಕೊಂಡಿದ್ದರಿಂದ ಒತ್ತಡಕ್ಕೆ ಒಳಗಾಗಿದ್ದು ನಿಜ. ಆದರೆ, ಶಿಕ್ಷಕರು ಧೈರ್ಯ ತುಂಬಿದರು. ನಾನು ಶೈಕ್ಷಣಿಕ ವರ್ಷದ ಆರಂಭದಿಂದಲೇ ಅಧ್ಯಯನ ಆರಂಭಿಸಿದೆ. ಕ್ಲಿಷ್ಟಕರ ವಿಷಯಗಳನ್ನು ಪದೇಪದೆ ಓದಿ ಗೊಂದಲ ಬಗೆಹರಿಸಿಕೊಂಡೆ. ನಿರೀಕ್ಷೆಯಂತೆ ಅಂಕ ಸಿಕ್ಕಿದ್ದರಿಂದ ಖುಷಿಯಾಗಿದೆ. ನನ್ನ ಈ ಸಾಧನೆಯನ್ನು ತಾಯಿ ಹಾಗೂ ಗುರುಗಳಿಗೆ ಅರ್ಪಿಸುತ್ತೇನೆ’ ಎಂದು ಹೇಳಿದರು.

‘ಶೈಕ್ಷಣಿಕ ವರ್ಷವಿಡೀ ಯಾವುದೇ ಮದುವೆ, ಸಮಾರಂಭಗಳಲ್ಲಿ ಭಾಗವಹಿಸಲಿಲ್ಲ. ಶಾಲೆಯಲ್ಲಿ ಶಿಕ್ಷಕರ ಪಾಠ ಸಮಚಿತ್ತದಿಂದ ಆಲಿಸುತ್ತಿದ್ದೆ. ಶಾಲೆಗೆ ತೆರಳುವ ಮುನ್ನ, ಹಿಂದಿನ ದಿನ ಓದಿದ್ದನ್ನು ಮನನ ಮಾಡಿಕೊಳ್ಳುತ್ತಿದ್ದೆ. ಸಂಜೆ ಮನೆಗೆ ಮರಳಿದ ನಂತರವೂ, 6 ತಾಸು ಓದು ಮುಂದುವರಿಸುತ್ತಿದ್ದೆ. ಪರೀಕ್ಷಾ ಅವಧಿಯಲ್ಲಿ ಆರೋಗ್ಯದ ಕಡೆಯೂ ಲಕ್ಷ್ಯ ವಹಿಸಿದೆ’ ಎಂದು ತಿಳಿಸಿದರು.

ಮಗಳ ಸಾಧನೆ ಖುಷಿ ತಂದಿದೆ: ‘ನಮ್ಮ ಯಜಮಾನ್ರು ತೀರಿಹೋದ ನಂತರ, ಬದುಕಿನಲ್ಲಿ ಭರವಸೆಯನ್ನೇ ಕಳೆದುಕೊಂಡಿದ್ದೆ. ಈಗ ಮಗಳ ಸಾಧನೆ ಬದುಕಿಗೆ ಒಂದಿಷ್ಟು ಹೊಳಪು ತಂದಿದೆ. ಮಗಳ ಶಿಕ್ಷಣಕ್ಕೆ ಯಾರಾದರೂ ಗಣ್ಯರು ನೆರವಾದರೆ ಅಭಾರಿಯಾಗಿರುತ್ತೇವೆ’ ಎಂದು ಎಂ.ಎಂ.ಜೋಶಿ ಕಣ್ಣಿನ ಆಸ್ಪತ್ರೆಯಲ್ಲಿ ಹೆಲ್ತ್‌ ವರ್ಕರ್‌ ಆಗಿ ಕೆಲಸ ಮಾಡುತ್ತಿರುವ ತಾಯಿ ರಾಜಶ್ರೀ ಕೈಮುಗಿದರು.

‘ಅನುಪಮಾ ತುಂಬಾ ಪ್ರತಿಭಾವಂತೆ. ಏಕಾಗ್ರತೆಯಿಂದ ಅಭ್ಯಸಿಸುತ್ತಿದ್ದ ಅವಳ ಸಾಧನೆ ನಮ್ಮ ಶಾಲೆಗೂ ಹೆಮ್ಮೆ ತಂದಿದೆ. ಅವಳ ಮುಂದಿನ ಶಿಕ್ಷಣಕ್ಕೂ ಸಹಾಯ–ಸಹಕಾರ ಮಾಡುತ್ತೇವೆ’ ಎನ್ನುತ್ತಾರೆ ಮುಖ್ಯಾಧ್ಯಾಪಕ ನಾಗರಾಜ ಚಂದರಗಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.