ADVERTISEMENT

ರಾಜ್ಯ ಸರ್ಕಾರದಿಂದ ಕ್ಯಾಬಿನೆಟ್‌ ದುರುಪಯೋಗ: ಜಗದೀಶ ಶೆಟ್ಟರ್‌ ಆರೋಪ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2024, 9:41 IST
Last Updated 12 ಅಕ್ಟೋಬರ್ 2024, 9:41 IST
ಜಗದೀಶ ಶೆಟ್ಟರ್‌
ಜಗದೀಶ ಶೆಟ್ಟರ್‌   

ಬೆಳಗಾವಿ: ‘ಅಲ್ಪಸಂಖ್ಯಾತರ ಮತ ಗಟ್ಟಿಗೊಳಿಸುವ ಸಲುವಾಗಿ ಕಾಂಗ್ರೆಸ್‌ ಸರ್ಕಾರವು ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣ ಹಿಂದಕ್ಕೆ ಪಡೆಯುವ ನಿರ್ಣಯ ಕೈಗೊಂಡು, ಕಾನೂನುಬಾಹಿರ ಕೆಲಸ ಮಾಡಿದೆ. ಕ್ಯಾಬಿನೆಟ್‌ ದುರುಪಯೋಗ ಪಡಿಸಿಕೊಂಡಿದೆ’ ಎಂದು ಸಂಸದ ಜಗದೀಶ ಶೆಟ್ಟರ್‌ ಆರೋಪಿಸಿದರು.  

ಇಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಇದು ದಂಗೆ ಪ್ರಕರಣ. ಹಲವರು ಪೊಲೀಸ್ ಠಾಣೆ, ಮನೆಗಳ ಮೇಲೆ ದಾಳಿ ಮಾಡಿದ್ದರು. ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆಯಾಗಿತ್ತು. ಆದರೆ, ಪೊಲೀಸರ ಸಮಯಪ್ರಜ್ಞೆಯಿಂದ ದೊಡ್ಡ ದುರಂತ ತಪ್ಪಿತ್ತು. ಗಂಭೀರವಾದ ಈ ಪ್ರಕರಣ ಹಿಂದಕ್ಕೆ ಪಡೆಯುವ ಕುರಿತಾಗಿ ಸರ್ಕಾರವು ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯ ವಾಪಸ್‌ ಪಡೆಯದಿದ್ದರೆ, ಬಿಜೆಪಿಯಿಂದ ಉಗ್ರಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ಕೊಟ್ಟರು.

‘ಗೃಹ ಇಲಾಖೆ ಮೂಲಕ ಸಿದ್ದರಾಮಯ್ಯ ಈ ವಿಷಯವನ್ನು ಸಂಪುಟದ ಗಮನಕ್ಕೆ ತಂದಿದ್ದಾರೆ. ಆ ಕಡತದಲ್ಲಿರುವ ವಿಚಾರಗಳನ್ನು ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದ ಅವರು, ‘ಈ ಹಿಂದೆಯೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪಿಎಫ್‌ಐ ಮೇಲಿನ ಪ್ರಕರಣ ಹಿಂದಕ್ಕೆ ಪಡೆದಿತ್ತು. ಇದರಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು’ ಎಂದು ಆರೋಪಿಸಿದರು.

ADVERTISEMENT

‘ಸಿ.ಎಂ ಸ್ಥಾನಕ್ಕೆ ರಾಜೀನಾಮೆ ನೀಡದೆ ಭಂಡತನ ಪ್ರದರ್ಶಿಸುತ್ತಿರುವ ಸಿದ್ದರಾಮಯ್ಯ ಅವರು, ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ಪ್ರಯತ್ನಿಸುತ್ತಿದ್ದಾರೆ. ಸಾರ್ವಜನಿಕ ಹಿತಾಸಕ್ತಿಗಾಗಿ ನಡೆದ ಹೋರಾಟದಲ್ಲಿ ಭಾಗಿಯಾದವರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ನಾವು ಹಿಂದಕ್ಕೆ ಪಡೆದಿದ್ದೇವೆ. ಆದರೆ, ಈ ಪ್ರಕರಣ ಹಿಂದಕ್ಕೆ ಪಡೆಯುವಂಥದ್ದಲ್ಲ. ಇದನ್ನು ವಾಪಸ್‌ ಪಡೆಯುವುದಾದರೆ, ಮಹದಾಯಿ ಹೋರಾಟದಲ್ಲಿ ರೈತರ ಮೇಲೆ ಪ್ರಕರಣ ಏಕೆ ಹಿಂದಕ್ಕೆ ಪಡೆಯಲಿಲ್ಲ’ ಎಂದು ಪ್ರಶ್ನಿಸಿದರು.

‘ದುಷ್ಟರನ್ನು ಸಂಹರಿಸುವುದಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ದಿನಪತ್ರಿಕೆಯಲ್ಲಿ ಜಾಹೀರಾತು ಕೊಟ್ಟಿದೆ. ಆದರೆ, ಅದಕ್ಕೆ ವ್ಯತಿರಿಕ್ತವಾಗಿ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದರು.

‘ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಹೊಸ ಮುಖ್ಯಮಂತ್ರಿ ಸ್ವಾಗತಿಸಲಾಗುವುದು’ ಎಂಬ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಶೆಟ್ಟರ್‌, ‘ಯಾವ ಹಿನ್ನೆಲೆಯಲ್ಲಿ ವಿಜಯೇಂದ್ರ ಆ ರೀತಿ ಹೇಳಿದ್ದಾರೆ ಗೊತ್ತಿಲ್ಲ. ನನ್ನ ರಾಜಕೀಯ ಅನುಭವ ಆಧರಿಸಿ ಹೇಳುವುದಾದರೆ, ನಾಲ್ಕು ದಿನ ತಡವಾದರೂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟೇ ಕೊಡುತ್ತಾರೆ. ಮುಖ್ಯಮಂತ್ರಿ ಸ್ಥಾನದಲ್ಲಿ  ಮುಂದುವರಿಯಲು ಅವರಿಗೆ ನೈತಿಕತೆ ಇಲ್ಲ. ಈ ಸರ್ಕಾರ ಬೀಳಿಸಲು ನಾವು ‘ಆಪರೇಷನ್ ಕಮಲ’ ಮಾಡುತ್ತಿಲ್ಲ. ಸ್ವಯಂಕೃತ ಅಪರಾಧದಿಂದ ಪತನವಾಗಲಿದೆ’ ಎಂದರು

‘ಯಾರು ಮುಖ್ಯಮಂತ್ರಿ ಆಗಲೆಂದು ನೀವು ಬಯಸುತ್ತೀರಿ’ ಎಂಬ ಪ್ರಶ್ನೆಗೆ, ‘ಈಗಾಗಲೇ 8 ಜನರಿಂದ ಸಿ.ಎಂ ಸ್ಥಾನಕ್ಕಾಗಿ ಪೈಪೋಟಿ ನಡೆದಿದೆ. ಈ ಪೈಪೋಟಿಯಿಂದಲೇ ಸರ್ಕಾರ ಬೀಳಲಿದೆ’ ಎಂದರು.

ಕಳಸಾ–ಬಂಡೂರಿ, ಮಹದಾಯಿ ಯೋಜನೆ ಕಾಮಗಾರಿ ವಿಳಂಬವಾಗುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಶೆಟ್ಟರ್‌, ‘ಕೇಂದ್ರ ಪರಿಸರ ಇಲಾಖೆ ಸಚಿವರಿಗೆ ಭೇಟಿಯಾಗಿ ಈ ವಿಷಯ ಮನವರಿಕೆ ಮಾಡಿಕೊಟ್ಟಿರುವೆ. ಈ ಬಗ್ಗೆ ತ್ವರಿತವಾಗಿ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ಕೊಟ್ಟಿದ್ದಾರೆ.  ಕಾಮಗಾರಿ ಆರಂಭಕ್ಕಾಗಿ ಎಲ್ಲ ಹಂತದಲ್ಲೂ ಪ್ರಯತ್ನಿಸುತ್ತಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.